ಬೆಂಕಿಯಿಂದ ಜನರು ಸಾಯುತ್ತಿದ್ದಾರೆ, ನೀವೇನು ಮಾಡ್ತಿದ್ದೀರಿ: ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ತಪರಾಕಿ

ಗುಜರಾತ್ ಸರ್ಕಾರವು ಸುರಕ್ಷಾ ಕ್ರಮಗಳ ಜಾರಿಗೆ ಹೆಚ್ಚು ಸಮಯ ನೀಡುತ್ತಿದೆ. ಆಸ್ಪತ್ರೆಗಳಲ್ಲಿ ಸುರಕ್ಷಾ ಕ್ರಮಗಳು ಜಾರಿಯಾಗುವವರೆಗೆ ಜನರು ಸಾಯುತ್ತಲೇ ಇರುತ್ತಾರೆ ಎಂದು ಸುಪ್ರೀಂಕೋರ್ಟ್​ ವಿಷಾದಿಸಿತು.

  • Publish Date - 6:29 pm, Mon, 19 July 21 Edited By: Ghanashyam D M | ಡಿ.ಎಂ.ಘನಶ್ಯಾಮ
ಬೆಂಕಿಯಿಂದ ಜನರು ಸಾಯುತ್ತಿದ್ದಾರೆ, ನೀವೇನು ಮಾಡ್ತಿದ್ದೀರಿ: ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ತಪರಾಕಿ
ಸುಪ್ರೀಂಕೋರ್ಟ್

ದೆಹಲಿ: ಅಗ್ನಿ ಸುರಕ್ಷಾ ಕ್ರಮಗಳಲ್ಲಿ ರಿಯಾಯ್ತಿ ಪ್ರಕಟಿಸಿದ ಗುಜರಾತ್ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್​ ಸೋಮವಾರ ಕಟುವಾಗಿ ಆಕ್ಷೇಪಿಸಿತು. ಬೆಂಕಿ ದುರಂತಗಳಿಂದ ಕೊವಿಡ್ ಆಸ್ಪತ್ರೆಗಳಲ್ಲಿ ಹಲವು ಸಾವುಗಳು ವರದಿಯಾದ ನಂತರವೂ ಗುಜರಾತ್ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ನಮ್ಮ ಆದೇಶವನ್ನು ಉಲ್ಲೇಖಿಸಿ ಮತ್ತೊಂದು ಅಧಿಸೂಚನೆ ಹೊರಡಿಸಿದೆ. ಅಗ್ನಿ ಸುರಕ್ಷಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಗುಜರಾತ್ ಸರ್ಕಾರದ ಈ ಕ್ರಮವು ಮತ್ತಷ್ಟು ಸಮಯಾವಕಾಶ ನೀಡುತ್ತದೆ. ಜನರು ಮಾತ್ರ ಸಾಯುತ್ತಲೇ ಇರುತ್ತಾರೆ. ಅಕ್ರಮಗಳಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಸುಪ್ರೀಂಕೋರ್ಟ್​ ವಿಷಾದಿಸಿತು.

ನೀವು (ಗುಜರಾತ್ ಸರ್ಕಾರ) ಇಂಥ ಕಾರ್ಯನಿರ್ದೇಶನ ಅಧಿಸೂಚನೆ ಹೊರಡಿಸಿ ನಾವು ಒಮ್ಮೆ ನೀಡಿದ ಆದೇಶವನ್ನು ಉಲ್ಲಂಘಿಸುವಂತಿಲ್ಲ. ನೀವು 2022ರವರೆಗೂ ಸುಪ್ರೀಂಕೋರ್ಟ್​ ಆದೇಶವನ್ನು ಪಾಲಿಸುವಂತಿಲ್ಲ ಎಂದು ನೀವು ಹೇಳಿದ್ದೀರಿ. ಅಂದರೆ 2022ರವರೆಗೂ ಜನರು ಬೆಂಕಿಯಿಂದ ಸಾಯುತ್ತಲೇ ಇರಬೇಕೆ’ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಪ್ರಶ್ನಿಸಿದರು.

‘ಮಹಾರಾಷ್ಟ್ರದ ನಾಸಿಕ್​ನಲ್ಲಿ ರೋಗದಿಂದ ಗುಣಮುಖವಾಗಿದ್ದ, ಮಾರನೇ ದಿನ ಮನೆಗೆ ಹೋಗಬೇಕಿದ್ದ ವ್ಯಕ್ತಿಯೊಬ್ಬರು ಮೃತಪಟ್ಟರು. ಶೌಚಾಲಯದಲ್ಲಿದ್ದ ನರ್ಸ್​ಗಳಿಬ್ಬರು ಜೀವಂತ ಸುಟ್ಟುಹೋದರು’ ಎಂದು ನ್ಯಾಯಮೂರ್ತಿ ಚಂದ್ರದೂಡ್ ಹೇಳಿದರು. ನಮ್ಮ ಕಣ್ಣೆದುರು ನಡೆದುಹೋದ ದುರಂತಗಳಿವು. ಆಸ್ಪತ್ರೆಗಳು ಮನುಷ್ಯರ ನಿಟ್ಟುಸಿರಿನಿಂದ ಬದುಕುವ ಕಟ್ಟಡಗಳಾಗುತ್ತಿವೆ. ನಾಲ್ಕು ಸಣ್ಣ ಕೊಠಡಿಗಳಲ್ಲಿರುವ ಆಸ್ಪತ್ರೆಗಳ ಬಾಗಿಲು ಮುಚ್ಚಿಸಬೇಕು’ ಎಂದು ಅವರು ಹೇಳಿದರು.

ಸರ್ಕಾರವು ತನ್ನ ಅಧಿಸೂಚನೆಯ ಬಗ್ಗೆ ಅಫಿಡವಿಟ್ ಸಲ್ಲಸಿಬೇಕು ಎಂದು ಸೂಚಿಸಿದ ನ್ಯಾಯಾಧೀಶರು, ಡಿಸೆಂಬರ್ 2020ರ ಸುಪ್ರೀಂಕೋರ್ಟ್​ ತೀರ್ಪನ್ನು ಅನುಷ್ಠಾನಗೊಳಿಸಲು ಏನೆಲ್ಲಾ ಮಾಡಿದೆ ಎಂಬ ಬಗ್ಗೆ ಪ್ರತ್ಯೇಕ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಈ ಕುರಿತು ಪ್ರತಿಕ್ರಿಯೆ ದಾಖಲಿಸಲು ಸಮಯಾವಕಾಶಬೇಕೆಂದು ಗುಜರಾತ್ ಸರ್ಕಾರ ಕೋರಿತು. ಆದರೆ ನ್ಯಾಯಾಲಯ ಈ ಕೋರಿಕೆಯನ್ನು ಮನ್ನಿಸಲಿಲ್ಲ. ನಮ್ಮ ಆದೇಶ ಪಾಲಿಸಲು ಮಾರ್ಚ್ 2022ರವರೆಗೆ ಅವಕಾಶ ನೀಡಿದ್ದೀರಿ ಎಂದು ದಿನಪತ್ರಿಕೆಗಳಲ್ಲಿ ಓದಿದೆವು ಎಂದು ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ಆರ್.ಶಾ ಹೇಳಿದರು.

ನವೆಂಬರ್ ತಿಂಗಳ ಕೊನೆಯಲ್ಲಿ ರಾಜ್​ಕೋಟ್​ನ ಉದಯ್ ಶಿವಾನಂದ ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿದುರಂತದಿಂದ 6 ಮಂದಿ ಮೃತಪಟ್ಟರು. ತುರ್ತು ನಿಗಾ ಘಟಕದಲ್ಲಿ ಬೆಂಕಿಯ ಕಿಡಿ ಮೊದಲು ಕಾಣಿಸಿಕೊಂಡಿತ್ತು. ಆಸ್ಪತ್ರೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಗುಜರಾತ್​ ಸರ್ಕಾರದ ಕ್ರಮವು ಆಘಾತಕಾರಿಯಾಗಿದೆ ಎಂದು ಸುಪ್ರೀಂಕೋರ್ಟ್​, ರಾಜ್ಯ ಸರ್ಕಾರವು ಸತ್ಯಾಂಶಗಳನ್ನು ಮುಚ್ಚಿಡುತ್ತಿದೆ. ನಿಮ್ಮ ಪ್ರಕಾರ ಎಲ್ಲವೂ ಸರಿಯಾಗಿದೆ. ಆದರೆ ನಿಮ್ಮ ನಿಲುವುಗಳು ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಕೊಟ್ಟಿರುವ ವರದಿಗೆ ವ್ಯತಿರಿಕ್ತವಾಗಿದೆ. ಜನರು ಹೀಗೆಯೇ ಬೆಂಕಿಗೆ ಸಿಲುಕಿ ಸಾಯುತ್ತಿರುತ್ತಾರೆ ಎಂದು ನ್ಯಾಯಾಲಯ ಹೇಳಿತು. ಕಳೆದ ಮೇ ತಿಂಗಳಲ್ಲಿ ಭರೂಚ್​ನ ಆಸ್ಪತ್ರೆಯಲ್ಲಿ ಅಗ್ನಿ ದುರಂತದಿಂದ 18 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಅನಾಹುತದ ಹೊಣೆಯ ಯಾರದು ಎಂದು ಪತ್ತೆಹಚ್ಚಲೇಬೇಕು ಎಂದು ಸೂಚಿಸಿತ್ತು.

ಅಗ್ನಿ ಅನಾಹುತಗಳನ್ನು ತಡೆಯುವ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ವಿಫಲವಾಗಿದೆ ಎಂದು ಆಕ್ಷೇಪಿಸಿದ್ದ ಹೈಕೋರ್ಟ್​, ಇದು ನ್ಯಾಯಾಲಯ ನಿಂದನೆ ಆಗುತ್ತದೆ. ನ್ಯಾಯಾಲಯವು ಈ ಹಿಂದೆ ನೀಡಿದ ಆದೇಶಗಳ ಪಾಲನೆಗೆ ಕ್ರಮ ತೆಗೆದುಕೊಳ್ಳಬೇಕು. ಅಗ್ನಿ ಅನಾಹುತ ತಡೆಯಲು ಕ್ರಮ ತೆಗೆದುಕೊಳ್ಳದಿದ್ದರೆ ಗಂಭೀರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಎಚ್ಚರಿಸಿತ್ತು.

(People Will Continue To Die By Burning Says Supreme Court to Gujarat Govt)

ಇದನ್ನೂ ಓದಿ: Tv9 Digital Exclusive: ಕಾವೇರಿಯ ಮತ್ತಷ್ಟು ನೀರು ಬಳಕೆಗೆ ತಮಿಳುನಾಡು ಯೋಜನೆ: ಸುಪ್ರೀಂಕೋರ್ಟ್​ಗೆ ಕರ್ನಾಟಕ ತಕರಾರು ಅರ್ಜಿ

ಇದನ್ನೂ ಓದಿ: Sedition Law: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?; ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ