ಅಹ್ಮದಾಬಾದ್, ಅ.22: ಇಡೀ ದೇಶದಲ್ಲಿ ನವರಾತ್ರಿ (Navarathri) ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಗುಜರಾತ್‌ನಲ್ಲಿ (Gujarat) ಅನೇಕ ಕಡೆಗಳಲ್ಲಿ ವಿಜೃಂಭಣೆಯಿಂದ ನವರಾತ್ರಿ ಆಚರಿಸಲಾಗುತ್ತದೆ. ದೇವಿಗೆ ಪೂಜೆ ಮಾಡಿ ಗರ್ಭಾ ನೃತ್ಯ (Garba Dance) ಮಾಡಿ ಜನ ಸಂಭ್ರಮಿಸುತ್ತಾರೆ. ಆದರೆ ಇಂತಹ ಸಂಭ್ರಮದ ಸಮಯದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಗುಜರಾತ್‌ನಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಗರ್ಭಾ ನೃತ್ಯ ಮಾಡುವಾಗ ಕೆಲವರು ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ (Heart Attack). ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 10 ಮಂದಿ ಗರ್ಭಾ ಮಾಡುತ್ತಿದ್ದವರು ಮೃತಪಟ್ಟಿದ್ದಾರೆ. ಇದರಲ್ಲೂ ದುರಂತವೆಂದರೆ ಸಾವನ್ನಪ್ಪುತ್ತಿರುವವರಲ್ಲಿ ಹೆಚ್ಚಿನವರು ಹದಿಹರೆಯದವರು, ಮಧ್ಯವಯಸ್ಕ ಜನ.
ಇತ್ತೀಚೆಗೆ ಬರೋಡಾದ ದಾಭೋಯ್‌ನ 13 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಶುಕ್ರವಾರ ಅಹಮದಾಬಾದ್‌ನ 24 ವರ್ಷದ ಯುವಕ ಗರ್ಭಾ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಅದೇ ರೀತಿ ಕಪದ್ವಾಂಜ್‌ನ 17 ವರ್ಷದ ಯುವಕ ಕೂಡ ಗರ್ಭಾ ಆಡುವಾಗ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಇದೇ ರೀತಿಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.
ಇದನ್ನೂ ಓದಿ: ನವರಾತ್ರಿ, ದುರ್ಗಾ ಪೂಜೆಗೆ ಕೃತಿ ಶೆಟ್ಟಿ ಶುಭಾಶಯ ತಿಳಿಸಿದ್ದು ಹೀಗೆ
ಇನ್ನು ಇದರ ಜೊತೆಗೆ ನವರಾತ್ರಿಯ ಮೊದಲ ಆರು ದಿನಗಳಲ್ಲಿ, 108 ತುರ್ತು ಆಂಬ್ಯುಲೆನ್ಸ್ ಸೇವೆಗಳಿಗೆ 521 ಕರೆಗಳು ಹೃದಯ ಸಂಬಂಧಿ ತೊಂದರೆ ಬಗ್ಗೆಯೇ ಬಂದಿವೆ. ಹಾಗೂ ಉಸಿರಾಟದ ತೊಂದರೆಗಾಗಿ 609 ಕರೆಗಳು ಬಂದಿವೆ. ಗರ್ಭಾ ಆಚರಣೆಗಳು ಸಾಮಾನ್ಯವಾಗಿ ಸಂಜೆ 6 ರಿಂದ 2 ಗಂಟೆಯ ನಡುವೆ ನಡೆಯುತ್ತವೆ. ಹೀಗಾಗಿ ಈ ಸಮಯದಲ್ಲೇ ಆರೋಗ್ಯ ಸಿಬ್ಬಂದಿ ಹೆಚ್ಚಿನ ಕರೆಗಳನ್ನು ಸ್ವೀಕರಿಸಿದ್ದಾರೆ. ಆದ್ದರಿಂದ, ಗರ್ಭಾ ಕಾರ್ಯಕ್ರಮಗಳ ಸಂಘಟಕರು ಮತ್ತು ಸರ್ಕಾರ ಈ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ. ಗರ್ಭಾ ಸ್ಥಳಗಳ ಸಮೀಪವಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಜಾಗರೂಕರಾಗಿರಬೇಕು ಎಂದು ಸರ್ಕಾರ ತಿಳಿಸಿದೆ.
ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳು ತ್ವರಿತವಾಗಿ ಪ್ರವೇಶಿಸಲು ಕಾರಿಡಾರ್‌ಗಳನ್ನು ರಚಿಸಲು ಗರ್ಭಾ ಸಂಘಟಕರಿಗೆ ಸರ್ಕಾರ ಸೂಚನೆ ನೀಡಿದೆ. ಇದಲ್ಲದೆ, ಗಾರ್ಭಾ ಸಂದರ್ಭದಲ್ಲಿ ಹೆಚ್ಚಾಗಿ ಸಮಸ್ಯೆಗಳು ಎದುರಾಗುವ ಹಿನ್ನೆಲೆ ಈಗಾಗಲೇ ಸಂಘಟಕರು ಸ್ಥಳಗಳಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಲ್ಲಿಸುವ ಮೂಲಕ ಭಾಗವಹಿಸುವವರ ಸುರಕ್ಷತೆಯಾಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ವರ್ಷ ನವರಾತ್ರಿ ಹಬ್ಬದ ಮೊದಲು, ಗುಜರಾತ್‌ನಲ್ಲಿ ಮೂರು ಜನರು ಗಾರ್ಭಾ ಅಭ್ಯಾಸ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು.
Published On - 7:03 am, Sun, 22 October 23