ಗಾಂಧಿನಗರ: ಗುಜರಾತ್‌ನ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ನಿನ್ನೆ (ಸಪ್ಟೆಂಬರ್ 11) ರಾಜೀನಾಮೆ ನೀಡಿದ್ದಾರೆ. ದಿಢೀರ್ ರಾಜೀನಾಮೆ ಬೆನ್ನಲ್ಲೇ ನೂತನ ಸಿಎಂ ಆಯ್ಕೆಗೆ ಇಂದು ಬಿಎಲ್‌ಪಿ ಸಭೆ ನಡೆಸಿದೆ. ಗುಜರಾತ್‌ನ ಗಾಂಧಿನಗರದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಸಭೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ನರೇಂದ್ರ ಸಿಂಗ್ ತೋಮರ್ ಆಗಮಿಸಿದ್ದಾರೆ. ಕೇಂದ್ರದ ಬಿಜೆಪಿ ವೀಕ್ಷಕರಾಗಿ ಜೋಶಿ, ತೋಮರ್ ಆಗಮಿಸಿದ್ದಾರೆ. ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ, ನಿತಿನ್ ಪಟೇಲ್, ಸಿ.ಆರ್. ಪಾಟೀಲ್ ಕೂಡ ಭೇಟಿ ನೀಡಿ ಭಾಗವಹಿಸಿದ್ದಾರೆ.
ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆ ಹಿನ್ನೆಲೆಯಲ್ಲಿ, ಇಂದು ಗಾಂಧಿನಗರದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಲಿರುವ ಬಗ್ಗೆ ನಿನ್ನೆಯೇ ಹೇಳಲಾಗಿತ್ತು. ಇಂದೇ ನೂತನ ಸಿಎಂ ಆಯ್ಕೆ ಮಾಡಲು ಬಿಎಲ್‌ಪಿ ಸಭೆ ನಡೆಸುತ್ತದೆ ಎನ್ನಲಾಗಿತ್ತು. ಈ ಮಧ್ಯೆ, ಕರ್ನಾಟಕವೂ ಸಹಿತ ಹಲವು ರಾಜ್ಯಗಳಲ್ಲಿ ಬಿಜೆಪಿ ಅನುಸರಿಸಿರುವ ಮುಖ್ಯಮಂತ್ರಿ ಬದಲಾವಣೆ ತಂತ್ರ ಗುಜರಾತ್ನಲ್ಲೂ ನಡೆದಿದೆ ಎಂದು ಹೇಳಲಾಗಿದೆ. ವಿಧಾನಸಭಾ ಚುನಾವಣೆಗೆ ಇನ್ನು ಒಂದೇ ವರ್ಷ ಬಾಕಿ ಉಳಿದಿರುವಂತೆ ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿ ಮುಂದಾಗಿದೆ.
ಉತ್ತರಾಖಂಡ್, ಕರ್ನಾಟಕದ ಬಳಿಕ ಗುಜರಾತ್ನಲ್ಲಿ ಇಂತಹ ಬೆಳವಣಿಗೆ ಕಂಡುಬಂದಿದೆ. ಬಿಜೆಪಿ ಹೈಕಮಾಂಡ್ ದಿಢೀರ್ ನಿರ್ಧಾರಗಳು ರಾಜಕೀಯ ಸಂಚಲನ ಸೃಷ್ಟಿಸುತ್ತಿದೆ. ಅವಧಿಗೆ ಮುನ್ನವೇ ಬಿಜೆಪಿ ವರಿಷ್ಠರು ವಿಜಯ್ ರೂಪಾನಿಯಿಂದ ರಾಜೀನಾಮೆ ಕೊಡಿಸಿದ್ದಾರೆ. ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದು, ಮುಂದೆ ಬಹುಸಂಖ್ಯಾತ ಪಾಟೀದಾರ್ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ಪಾಟೀದಾರ್ ಸಮುದಾಯ ಓಲೈಸಲು ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ.
A CM should be someone who is popular, experienced and takes everyone together. There are rumors in the media that I will be made CM, but the fact is that BJP high command will decide who will be the chief minister: BJP leader Nitin Patel in Ahmedabad pic.twitter.com/Q2ht4DmkOA
— ANI (@ANI) September 12, 2021
ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?
ಜಾತಿ ಲೆಕ್ಕಾಚಾರ, ಸಮುದಾಯದ ನಾಯಕತ್ವ ಅಥವಾ ಓಲೈಕೆ, ಚುನಾವಣೆ ಗೆಲ್ಲುವ ತಂತ್ರದ ಭಾಗವಾಗಿ ಈ ಮುಖ್ಯಮಂತ್ರಿ ಬದಲಾವಣೆ ನಡೆದಿದೆ ಎಂದೇ ಅಭಿಪ್ರಾಯಗಳು ಕೇಳಿಬರುತ್ತಿವೆ. ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂದು ಕೂಡ ಹೆಸರುಗಳು ಮುನ್ನೆಲೆಗೆ ಬಂದಿದೆ. ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆ ನೀಡಿರುವ ಬೆನ್ನಲ್ಲಿ ಗುಜರಾತ್ ಸಿಎಂ ರೇಸ್ನಲ್ಲಿ ಎರಡು ಹೆಸರು ಮುಂಚೂಣಿಗೆ ಬಂದಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ, ಪುರುಷೋತ್ತಮ್ ರೂಪಾಲ ಹಾಗೂ ಆರ್ಸಿ ಫಾಲ್ಡು ಹೆಸರುಗಳು ಗುಜರಾತ್ ಸಿಎಂ ರೇಸ್ನಲ್ಲಿ ಕೇಳಿಬಂದಿದೆ. ಯಾರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಕಾದುನೋಡಬೇಕಿದೆ.
ಇದನ್ನೂ ಓದಿ: Gujarat Politics: ಕರ್ನಾಟಕ ಮಾದರಿಯಲ್ಲಿ ಗುಜರಾತ್ನಲ್ಲೂ ಜಾತಿ ಲೆಕ್ಕಾಚಾರದ ಮೊರೆ ಹೋದ ಬಿಜೆಪಿ?
ಇದನ್ನೂ ಓದಿ: ಗುಜರಾತ್‌ನ ಮುಂದಿನ ಮುಖ್ಯಮಂತ್ರಿ ಯಾರು?-ರೇಸ್ನಲ್ಲಿದ್ದಾರೆ ಈ ಎಲ್ಲ ಪ್ರಮುಖ ನಾಯಕರು