ವಾರಾಣಸಿ: ಜ್ಞಾನವಾಪಿ ಮಸೀದಿ (Gyanvapi Masjid) ಆವರಣಕ್ಕೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸುವಂತೆ ಹಾಗೂ ಜ್ಞಾನವಾಸಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಪೂಜೆಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿರುವ ವಾರಾಣಸಿ ನ್ಯಾಯಾಲಯವು ಇಂದು ತೀರ್ಪು ನೀಡಲಿದೆ. ವಾರಾಣಸಿ ಕೋರ್ಟ್ನ (Varanasi Court) ಸಿವಿಲ್ ನ್ಯಾಯಾಧೀಶ ಮಹೇಂದ್ರ ಪಾಂಡೆ ಅಕ್ಟೋಬರ್ 27ರಂದು ವಾದ-ಪ್ರತಿವಾದವನ್ನು ಆಲಿಸಿ, ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು. ಐತಿಹಾಸಿಕ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ದಶಕಗಳಷ್ಟು ಹಳೆಯ ಕಾನೂನು ವಿವಾದದ ಕೇಂದ್ರವಾಗಿದೆ.
ವಾರಣಾಸಿಯ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮುಖ್ಯ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ, ತ್ವರಿತ ನ್ಯಾಯಾಲಯವು ಈ ಕುರಿತು ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಜ್ಞಾನವಾಪಿ ಆವರಣಕ್ಕೆ ಮುಸಲ್ಮಾನರ ಪ್ರವೇಶವನ್ನು ನಿಷೇಧಿಸುವಂತೆ ಕೋರಿರುವ ಅರ್ಜಿಯ ಸಿಂಧುತ್ವದ ಕುರಿತು ಇಂದು ತೀರ್ಪು ನೀಡುವುದಾಗಿ ತ್ವರಿತ ನ್ಯಾಯಾಲಯವು ಈ ಹಿಂದೆ ಹೇಳಿತ್ತು. ವಿಶ್ವ ವೈದಿಕ್ ಸನಾತನ ಸಂಘದ ಮನವಿಯು ಆವರಣವನ್ನು ಹಿಂದೂಗಳಿಗೆ ಹಸ್ತಾಂತರಿಸಲು ಮತ್ತು ಒಳಗೆ ಕಂಡುಬರುವ ಶಿವಲಿಂಗವನ್ನು ಪೂಜಿಸಲು ಅನುಮತಿಯನ್ನು ಕೋರಿದೆ.
ನವೆಂಬರ್ 8ರಂದು ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ವಾರಾಣಸಿ ನ್ಯಾಯಾಲಯವು ಇಂದಿಗೆ (ನವೆಂಬರ್ 14) ಈ ಪ್ರಕರಣದ ವಿಚಾರಣೆಯನ್ನು ಮುಂದೂಡಿತ್ತು. ನ್ಯಾಯಾಲಯವು ತನ್ನ ತೀರ್ಪು ನೀಡಲಿರುವ ಹಿಂದೂ ಕಡೆಯ ಬೇಡಿಕೆಗಳಲ್ಲಿ ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನ ಪ್ರಾರ್ಥನೆಯ ತಕ್ಷಣದ ಪ್ರಾರಂಭಕ್ಕೆ ಅನುಮತಿ, ಹಸ್ತಾಂತರಿಸುವಿಕೆ ಸೇರಿವೆ.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪೂಜೆಗೆ ಅನುಮತಿ ಕೋರಿ ಅರ್ಜಿ; ತೀರ್ಪು ನ. 14ಕ್ಕೆ ಮುಂದೂಡಿಕೆ
ವಾರಾಣಸಿ ನ್ಯಾಯಾಲಯದ ಆದೇಶದ ವಿಡಿಯೋಗ್ರಫಿ ಸಮೀಕ್ಷೆ ವೇಳೆ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುವವರೆಗೆ ಮುಸ್ಲಿಮರಿಗೆ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ನ್ಯಾಯಾಲಯದ ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾದ ಪ್ರದೇಶವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ನವೆಂಬರ್ 11ರಂದು ತನ್ನ ಹಿಂದಿನ ಆದೇಶವನ್ನು ವಿಸ್ತರಿಸಿತ್ತು.
ವಾರಾಣಸಿ ನ್ಯಾಯಾಲಯದಲ್ಲಿ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಉದ್ದೇಶಿತ ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಹಿಂದೂ ಸಮುದಾಯದ ಕಡೆಯವರು ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ಕಂಡುಬರುವ ಶಿವಲಿಂಗ ಎಂದು ಹೇಳಿಕೊಳ್ಳುವ ರಚನೆಯ ಕಾರ್ಬನ್ ಡೇಟಿಂಗ್ ಅನ್ನು ಒತ್ತಾಯಿಸಿದ್ದರು.
ಆದರೆ, ಅಲ್ಲಿ ಸಿಕ್ಕಿರುವ ರಚನೆಯು ಶಿವಲಿಂಗವಲ್ಲ, ಅದೊಂದು ‘ಕಾರಂಜಿ’ ಎಂದು ಮುಸ್ಲಿಂ ಸಮುದಾಯದವರು ಹೇಳಿದ್ದರು. ನಂತರ ಹಿಂದೂ ಕಡೆಯವರು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 22ರಂದು ಅರ್ಜಿಯನ್ನು ಸಲ್ಲಿಸಿದ್ದು, ಅವರು ‘ಶಿವಲಿಂಗ’ ಎಂದು ಹೇಳಿಕೊಳ್ಳುವ ವಸ್ತುವಿನ ಕಾರ್ಬನ್ ಡೇಟಿಂಗ್ ಅನ್ನು ಕೋರಿದ್ದರು.
ಇದನ್ನೂ ಓದಿ: Gyanvapi Mosque Case: ಜ್ಞಾನವಾಪಿ ಶಿವಲಿಂಗ ವಿಸ್ತರಣೆ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಚಾರಣೆ
ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ (ಎಐಎಂಸಿ) ವಿಶ್ವ ವೈದಿಕ ಸನಾತನ ಸಂಘದ (ವಿವಿಎಸ್‌ಎಸ್) ಆವರಣದ ನಿಷೇಧ ಮತ್ತು ಸ್ವಾಧೀನಕ್ಕೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿತ್ತು. ಮಸೀದಿಯನ್ನು ವಕ್ಫ್ ಆಸ್ತಿಯಾಗಿ ನೋಂದಾಯಿಸಲಾಗಿದೆ. ಸಿವಿಲ್ ನ್ಯಾಯಾಲಯವು ಈ ವಿಷಯವನ್ನು ಕೇಳಲು ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ಅದು ವಾದಿಸಿತ್ತು. ವಕ್ಫ್ ನ್ಯಾಯಮಂಡಳಿಗೆ ಮಾತ್ರ ಈ ವಿಷಯವನ್ನು ಆಲಿಸುವ ಅಧಿಕಾರವಿದೆ ಎಂದು ಎಐಎಂಸಿ ವಾದಿಸಿತ್ತು.
ಎಐಎಂಸಿಯ ವಕೀಲ ಮಿರಾಜುದ್ದೀನ್ ಸಿದ್ದಿಕಿ, ಜ್ಞಾನವಾಪಿ ಮಸೀದಿ ವಕ್ಫ್ ಆಸ್ತಿ ಎಂಬುದಕ್ಕೆ ಪುರಾವೆ ಸಲ್ಲಿಸಿದ್ದೇವೆ ಎಂದು ಹೇಳಿದ್ದರು. ಇದು ಹಿಂದೂ ದೇವಾಲಯದ ಸ್ಥಳ ಎಂದು ಹೇಳಿ ಹಿಂದೂ ಮಹಿಳೆಯರ ಗುಂಪು ಪ್ರತ್ಯೇಕವಾಗಿ ಮಸೀದಿಯಲ್ಲಿ ಪೂಜೆ ಮಾಡುವ ಹಕ್ಕಿಗಾಗಿ ಮನವಿ ಸಲ್ಲಿಸಿತ್ತು.