Gyanvapi Mosque Case: ಮಸೀದಿಯೊಳಗೆ ಶಿವಲಿಂಗದ ವೈಜ್ಞಾನಿಕ ಅಧ್ಯಯನ ನಡೆಸುವಂತಿಲ್ಲ; ಹಿಂದೂಗಳ ಮನವಿ ತಿರಸ್ಕರಿಸಿದ ಕೋರ್ಟ್

| Updated By: ಸುಷ್ಮಾ ಚಕ್ರೆ

Updated on: Oct 14, 2022 | 3:21 PM

ಮಸೀದಿ ಸಂಕೀರ್ಣದೊಳಗೆ ಶಿವಲಿಂಗ ವೈಜ್ಞಾನಿಕ ತನಿಖೆ ಇಲ್ಲ, ವಾರಣಾಸಿ ನ್ಯಾಯಾಲಯವು ಹಿಂದೂಗಳ ಮನವಿಯನ್ನು ತಿರಸ್ಕರಿಸಿದೆ.

Gyanvapi Mosque Case: ಮಸೀದಿಯೊಳಗೆ ಶಿವಲಿಂಗದ ವೈಜ್ಞಾನಿಕ ಅಧ್ಯಯನ ನಡೆಸುವಂತಿಲ್ಲ; ಹಿಂದೂಗಳ ಮನವಿ ತಿರಸ್ಕರಿಸಿದ ಕೋರ್ಟ್
Gyanvapi Mosque Case
Follow us on

ಜ್ಞಾನವಾಪಿ ಮಸೀದಿ (Gyanvapi Mosque) ಸಂಕೀರ್ಣದೊಳಗೆ ಶಿವಲಿಂಗ ವೈಜ್ಞಾನಿಕ ತನಿಖೆಗೆ ಅವಕಾಶವಿಲ್ಲ ಎನ್ನುವ ಮೂಲಕ ವಾರಣಾಸಿ ನ್ಯಾಯಾಲಯವು ಹಿಂದೂಗಳ ಮನವಿಯನ್ನು ತಿರಸ್ಕರಿಸಿದೆ. ಶಿವಲಿಂಗದ ಕಾರ್ಬನ್ ಡೇಟಿಂಗ್ ಮಾಡದಂತೆ ಆದೇಶ ನೀಡಿದೆ. ಹಿಂದೂಗಳು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಉತ್ತರ ಪ್ರದೇಶದ ವಾರಾಣಸಿ ಜಿಲ್ಲಾ ಕೋರ್ಟ್​​ ಆದೇಶ ನೀಡಿದೆ. ಶಿವಲಿಂಗದ ವೈಜ್ಞಾನಿಕ ಅಧ್ಯಯನ ನಡೆಸದಂತೆ ವಾರಾಣಸಿ ಜಿಲ್ಲಾ ಕೋರ್ಟ್ ನ್ಯಾ.ಅಜಯ್​ ಕೃಷ್ಣ ಆದೇಶ ನೀಡಿದ್ದಾರೆ.

ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಇಂದು (ಶುಕ್ರವಾರ) ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿರುವ ‘ಶಿವಲಿಂಗ’ದ ‘ವೈಜ್ಞಾನಿಕ ತನಿಖೆ’ ಕೋರಿ ಹಿಂದೂ ಆರಾಧಕರ ಮನವಿಯನ್ನು ತಿರಸ್ಕರಿಸಿದೆ. ಜ್ಞಾನವಾಪಿ ಮಸೀದಿಯಲ್ಲಿ ಕಾಣಿಸಿಕೊಂಡಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಬೇಕು ಎಂದು ಸಲ್ಲಿಸಲಾಗಿರುವ ಹಿಂದೂಗಳ ಅರ್ಜಿಯ ವಿಚಾರಣೆಯನ್ನು ವಾರಾಣಸಿಯ ಜಿಲ್ಲಾ ನ್ಯಾಯಾಲಯ ಇಂದು ನಡೆಸಿದೆ.

ಅರ್ಜಿಯ ಮೇಲಿನ ವಾದ-ಪ್ರತಿವಾದಗಳು ಮಂಗಳವಾರ ಪೂರ್ಣಗೊಂಡಿದ್ದು, ನ್ಯಾಯಾಲಯ ತನ್ನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸಲಾಗಿತ್ತು. ಮುಸ್ಲಿಮರು ನಮಾಜ್​ಗೂ ಮೊದಲು ಬಳಸುತ್ತಿದ್ದ ಕೊಳದ ಬಳಿ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್​ಗೆ ಒಳಪಡಿಸಬೇಕೆಂದು ಹಿಂದೂ ಪರ ಅರ್ಜಿದಾರರು ಮನವಿ ಮಾಡಿದ್ದರು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ವೈಜ್ಞಾನಿಕ ತನಿಖೆಗೆ ಮನವಿ; ವಿಚಾರಣೆ ಅಕ್ಟೋಬರ್ 11ಕ್ಕೆ ಮುಂದೂಡಿಕೆ

ಕೋರ್ಟ್​ನಲ್ಲಿ ಮುಸ್ಲಿಂ ಪರ ವಾದ ಮಂಡಿಸಿದ ವಕೀಲ ಮುಮ್ತಾಜ್ ಅಹ್ಮದ್, ‘ಯಾವುದೇ ವಸ್ತುವಿನ ಕಾರ್ಬನ್ ಡೇಟಿಂಗ್ ಪ್ರಕ್ರಿಯೆಯ ವೇಳೆ ಆ ವಸ್ತು ಹಾನಿಗೊಳಗಾದರೆ ಅದು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದಂತೆ ಆಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಆ ಆಕೃತಿಯನ್ನು ಸುರಕ್ಷಿತವಾಗಿಡಲು ಈ ಹಿಂದೆ ಸುಪ್ರೀಂ ಕೋರ್ಟ್​ ಸೂಚಿಸಿತ್ತು. ಹಾಗಾಗಿ, ಅದನ್ನು ಅಧ್ಯಯನಕ್ಕೆ ಒಳಪಡಿಸುವುದು ಸರಿಯಲ್ಲ’ ಎಂದು ಹೇಳಿದ್ದರು.

ಇದರ ಮೂಲ ಪ್ರಕರಣವು ಶೃಂಗಾರ್ ಗೌರಿಯ ಪೂಜೆಗೆ ಸಂಬಂಧಿಸಿದ್ದು ಆದರೆ ಮಸೀದಿಯಲ್ಲಿನ ರಚನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಸ್ಲಿಂ ಪರ ವಕೀಲರು ವಾದಿಸಿದ್ದರು.

ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ. ವಾರಣಾಸಿ ನ್ಯಾಯಾಲಯದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೆಡವಲ್ಪಟ್ಟ ಹಿಂದೂ ರಚನೆಯ ಒಂದು ಭಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಆರೋಪವನ್ನು ಮತ್ತೆ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ‘ಶಿವಲಿಂಗ’ ಎಂದು ಕರೆಯಲ್ಪಡುವ ವಸ್ತುವು ವಾಸ್ತವವಾಗಿ ಕಾರಂಜಿಯಾಗಿತ್ತು ಎಂದು ಮಸೀದಿ ಸಮಿತಿ ಹೇಳಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Fri, 14 October 22