Haldwani Riots: ಹಲ್ದ್ವಾನಿಯಲ್ಲಿ ಮದರಸಾ ನೆಲಸಮ, ಭುಗಿಲೆದ್ದ ಹಿಂಸಾಚಾರ, 4 ಮಂದಿ ಸಾವು, 200 ಜನರಿಗೆ ಗಾಯ

|

Updated on: Feb 09, 2024 | 8:03 AM

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಕ್ರಮ ಮದರಸಾ ಮತ್ತು ಮಸೀದಿ ನೆಲಸಮದಿಂದ ಉಂಟಾದ ಗಲಭೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಂಟರ್ನೆಟ್ ಸೇವೆಗಳು ಮತ್ತು ಶಾಲೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಲ್ದ್ವಾನಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.

Haldwani Riots: ಹಲ್ದ್ವಾನಿಯಲ್ಲಿ ಮದರಸಾ ನೆಲಸಮ, ಭುಗಿಲೆದ್ದ ಹಿಂಸಾಚಾರ, 4 ಮಂದಿ ಸಾವು, 200 ಜನರಿಗೆ ಗಾಯ
ಗಲಭೆ
Image Credit source: Amarujala.com
Follow us on

ಉತ್ತರಾಖಂಡ(Uttarakhand)ದ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 149 ಜನರು ಗಾಯಗೊಂಡಿದ್ದಾರೆ ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಶುಕ್ರವಾರ ತಿಳಿಸಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿ ಅಕ್ರಮ ಮದರಸಾವನ್ನು ನೆಲಸಮ ಮಾಡಿದ ನಂತರ ಹಿಂಸಾಚಾರ ಭುಗಿಲೆದ್ದಿದೆ, ಇದು ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು. ಗುರುವಾರ ಬಂಭುಲ್ಪುರ ಪೊಲೀಸ್ ಠಾಣೆಯ ಪೊಲೀಸ್ ತಂಡವು ‘ಮಲಿಕ್ ಕಾ ಬಗೀಚಾ’ ಎಂಬ ಸ್ಥಳದಲ್ಲಿದ್ದ ಅಕ್ರಮ ಮದರಸಾ ಮತ್ತು ನಮಾಜ್ ಸ್ಥಳವನ್ನು ನೆಲಸಮಗೊಳಿಸಿತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಿತು. ಸಿಟ್ಟಿಗೆದ್ದ ಸ್ಥಳೀಯರು ಪೊಲೀಸ್ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗುಂಪು ಪೊಲೀಸ್ ಠಾಣೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು ಮತ್ತು ಸಿಬ್ಬಂದಿಯ ಮೇಲೆ ಕಲ್ಲು ತೂರಾಟವನ್ನು ಮುಂದುವರೆಸಿತು. ಆದರೂ ಅಷ್ಟಕ್ಕೇ ನಿಲ್ಲದೆ ಪೊಲೀಸ್ ಠಾಣೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಇಡೀ ಕಟ್ಟಡವನ್ನು ಸುಟ್ಟು ಹಾಕಿದರು. ಗುಂಪು ಪೊಲೀಸ್ ಠಾಣೆಗೆ ನುಗ್ಗಿ ಎಸ್‌ಒ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿತು. ಹಲವಾರು ದುಷ್ಕರ್ಮಿಗಳು ಪೊಲೀಸ್ ಠಾಣೆಗೆ ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಠಾಣೆಯ ಪ್ರಭಾರಿ ನೀರಜ್ ಭಕುನಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಪೊಲೀಸ್ ಠಾಣೆಗೆ ನುಗ್ಗಿದವರ ಕೈಯಲ್ಲಿ ಪೆಟ್ರೋಲ್ ಬಾಂಬ್ ಇತ್ತು ಎಂದು ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ. ಠಾಣೆಯ ಹೊರಗೆ ನಿಲ್ಲಿಸಿದ್ದ ಪೊಲೀಸರ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. 20ಕ್ಕೂ ಹೆಚ್ಚು ಬೈಕ್‌ಗಳನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ.

ಮತ್ತಷ್ಟು ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, 3 ಜನ ಸಾವು

ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಚಂದ್ರ ವರ್ಮಾ ಮತ್ತು 40 ಪೊಲೀಸ್ ಸಿಬ್ಬಂದಿ ಪೊಲೀಸ್ ಠಾಣೆಯೊಳಗೆ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಪ್ರಕಾರ, ಒಳಗೆ ಸಿಕ್ಕಿಬಿದ್ದ ಹೆಚ್ಚಿನ ಸಿಬ್ಬಂದಿ ಮಹಿಳೆಯರು. ಘಟನೆಯ ವೇಳೆ ಮಹಿಳಾ ಪೇದೆಯೊಬ್ಬರು ವೈರ್‌ಲೆಸ್‌ನಲ್ಲಿ ಉನ್ನತ ಅಧಿಕಾರಿಗಳಿಗೆ ದಾಳಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದರೆ ಆಕೆ ವಿವರಿಸುವ ಮುನ್ನವೇ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಈ ಪ್ರದೇಶದಲ್ಲಿ ಹಲವಾರು ಕಾರ್ಖಾನೆಗಳು, ತರಕಾರಿ ಮಾರುಕಟ್ಟೆಗಳು ಮತ್ತು ಬಟ್ಟೆ ಮಾರುಕಟ್ಟೆಯನ್ನು ಮುಚ್ಚಲಾಯಿತು. ನೈನಿತಾಲ್ ರಸ್ತೆ ಮತ್ತು ಬರೇಲಿ ರಸ್ತೆಯಲ್ಲಿರುವ ಮುಂದಿನ ಅಂಗಡಿಗಳನ್ನು ಮುಚ್ಚಲಾಯಿತು. ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ ಮತ್ತು ಗಲಭೆಕೋರರನ್ನು ಕಂಡರೆ ಗುಂಡು ಹಾರಿಸುವಂತೆ ಆದೇಶ ಹೊರಡಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:02 am, Fri, 9 February 24