ಹನುಮಾನ್ ಚಾಲೀಸಾ ವಿವಾದ : ರಾಜ್ ಠಾಕ್ರೆ ವಿರುದ್ಧ ಔರಂಗಾಬಾದ್‌ನಲ್ಲಿ ಪ್ರಕರಣ ದಾಖಲು

| Updated By: ರಶ್ಮಿ ಕಲ್ಲಕಟ್ಟ

Updated on: May 03, 2022 | 5:40 PM

ಎಂಎನ್‌ಎಸ್ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಶಿವಸೇನೆ ಸಂಸದ ಸಂಜಯ್ ರಾವತ್ ಅವರಲ್ಲಿ ಕೇಳಿದಾಗ ಯಾರಾದರೂ ಪ್ರಚೋದನಕಾರಿ ಭಾಷಣ ಮಾಡಿದರೆ ಇಂತಹ ಕ್ರಮಗಳು ಸಹಜ ಎಂದಿದ್ದಾರೆ.

ಹನುಮಾನ್ ಚಾಲೀಸಾ ವಿವಾದ : ರಾಜ್ ಠಾಕ್ರೆ ವಿರುದ್ಧ ಔರಂಗಾಬಾದ್‌ನಲ್ಲಿ ಪ್ರಕರಣ ದಾಖಲು
ರಾಜ್ ಠಾಕ್ರೆ
Follow us on

ಮುಂಬೈ: ಮೇ 1 ರಂದು ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಭಾಷಣ ಮಾಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS)ಯ ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಮತ್ತು ರ್ಯಾಲಿಯ ಸಂಘಟಕರ ವಿರುದ್ಧ ಔರಂಗಾಬಾದ್‌ನಲ್ಲಿ(Aurangabad ) ಪ್ರಕರಣ ದಾಖಲಾಗಿದೆ. ವರದಿಗಳ ಪ್ರಕಾರ ಔರಂಗಾಬಾದ್‌ನಲ್ಲಿ ಅವರ ಸಾರ್ವಜನಿಕ ರ್ಯಾಲಿಯ ವಿಡಿಯೊಗಳನ್ನು ನೋಡಿದ ನಂತರ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ರ್ಯಾಲಿಯಲ್ಲಿ ಠಾಕ್ರೆ ಅವರು, ಮೇ 4 ರಿಂದ ಮಸೀದಿಗಳ ಹೊರಗೆ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ಹನುಮಾನ್ ಚಾಲೀಸಾವನ್ನು ನುಡಿಸುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಸನ್ನದ್ಧರಾಗಿದ್ದರು. ರಾಜ್ಯದಲ್ಲಿ ಕೋಮು ಸೌಹಾರ್ದ ಕದಡಲು ಯತ್ನಿಸುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ ಎಂದು ಮಹಾರಾಷ್ಟ್ರ ಡಿಜಿಪಿ ರಜನೀಶ್ ಸೇಠ್  ಹೇಳಿದ್ದಾರೆ.  ಔರಂಗಾಬಾದ್‌ನಲ್ಲಿ ಇತ್ತೀಚೆಗೆ ಮಾಡಿದ ಭಾಷಣಕ್ಕಾಗಿ ಎಂಎನ್‌ಎಸ್ ಮುಖ್ಯಸ್ಥರ ವಿರುದ್ಧ ಔರಂಗಾಬಾದ್ ಪೊಲೀಸ್ ಕಮಿಷನರ್ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಪೊಲೀಸ್ ಮುಖ್ಯಸ್ಥರು ಸುಳಿವು ನೀಡಿದ್ದು, “ಔರಂಗಾಬಾದ್ ಸಿಪಿ ಭಾಷಣವನ್ನು ನೋಡುತ್ತಿದ್ದಾರೆ. ಅವರು ಇಂದೇ ಅಗತ್ಯವಿರುವ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಭೆ ಕೂಡ ನಡೆಯುತ್ತಿದೆ ಎಂದು ವರದಿಯಾಗಿದೆ. ಸಭೆಯಲ್ಲಿ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಭಾಗವಹಿಸಿದ್ದಾರೆ.

ಎಂಎನ್‌ಎಸ್ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಶಿವಸೇನೆ ಸಂಸದ ಸಂಜಯ್ ರಾವತ್ ಅವರಲ್ಲಿ ಕೇಳಿದಾಗ ಯಾರಾದರೂ ಪ್ರಚೋದನಕಾರಿ ಭಾಷಣ ಮಾಡಿದರೆ ಇಂತಹ ಕ್ರಮಗಳು ಸಹಜ ಎಂದಿದ್ದಾರೆ. ಇಂತಹ ಪ್ರಕರಣಗಳು ದೇಶದಾದ್ಯಂತ ದಾಖಲಾಗಿವೆ. ಯಾರಾದರೂ ಪ್ರಚೋದನಕಾರಿ ಭಾಷಣ ಮಾಡಿದರೆ, ಯಾರಾದರೂ ಹಾಗೆ ಬರೆದರೆ ಅಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿ ದೊಡ್ಡ ವಿಷಯವೇನಿದೆ? ಎಂದು ರಾವತ್ ಪ್ರತಿಕ್ರಿಯಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಂಎನ್‌ಎಸ್ ಮುಖ್ಯಸ್ಥರ ಅಂತಿಮ ಸೂಚನೆಯ ಬಗ್ಗೆ ಕೇಳಿದಾಗ, ಶಿವಸೇನಾ ಮುಖ್ಯಸ್ಥರು ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಇಂತಹ ರಾಜಕೀಯಕ್ಕೆ ಸ್ಥಾನವಿಲ್ಲ ಎಂದು ರಾವತ್ ಹೇಳಿದರು. “ಇಲ್ಲಿ ಉದ್ಧವ್ ಠಾಕ್ರೆ ಅವರ ಸರ್ಕಾರವಿದೆ. ಏನು ಸರ್ವಾಧಿಕಾರ? ಇದು ಇಲ್ಲಿ ಕೆಲಸ ಮಾಡುವುದಿಲ್ಲ. ಮಹಾರಾಷ್ಟ್ರದಲ್ಲಿ ಸರ್ವಾಧಿಕಾರ ರಾಜಕೀಯ ನಡೆಯುವುದಿಲ್ಲ. ಠಾಕ್ರೆ ಸರ್ಕಾರದ ಮಾತು ಮಾತ್ರ ಇಲ್ಲಿ ಕೆಲಸ ಮಾಡುತ್ತದೆ,” ಎಂದರು.

ಏತನ್ಮಧ್ಯೆ, ಎಂಎನ್‌ಎಸ್ ಔರಂಗಾಬಾದ್ ಘಟಕದ ಮುಖ್ಯಸ್ಥ ಸುಮೀತ್ ಖಂಬೆಕರ್ ಅವರು ಪಕ್ಷದ ಮುಖ್ಯಸ್ಥರ ಯಾವುದೇ ಆದೇಶವನ್ನು “ಪಾಲಿಸಲಾಗುವುದು” ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:09 pm, Tue, 3 May 22