PM Modi in Denmark ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮಕ್ಕೆ ಮನವಿ ಮಾಡಿದ್ದೇವೆ: ಡೆನ್ಮಾರ್ಕ್​​ನಲ್ಲಿ ಪ್ರಧಾನಿ ಮೋದಿ

ರಷ್ಯಾ-ಉಕ್ರೇನ್ ಯುದ್ಧದಲ್ಲಿ ತಕ್ಷಣದ ಕದನ ವಿರಾಮಕ್ಕೆ ನಾನು ಮತ್ತು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಕರೆ ನೀಡಿದ್ದೇವೆ. ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಬಳಸಬೇಕು.

PM Modi in Denmark ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮಕ್ಕೆ  ಮನವಿ ಮಾಡಿದ್ದೇವೆ: ಡೆನ್ಮಾರ್ಕ್​​ನಲ್ಲಿ ಪ್ರಧಾನಿ ಮೋದಿ
ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಜತೆ ಪ್ರಧಾನಿ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 03, 2022 | 6:35 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಡೆನ್ಮಾರ್ಕ್ (Denmark) ಪ್ರಧಾನಿ ಕೌಂಟರ್ ಮೆಟ್ಟೆ ಫ್ರೆಡೆರಿಕ್ಸೆನ್ (Mette Frederiksen) ಅವರನ್ನು ಭೇಟಿ ಮಾಡಿದ್ದು, ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ವಿಷಯಗಳಿಂದ ಹಿಡಿದು ದ್ವಿಪಕ್ಷೀಯ ಸಂಬಂಧವನ್ನು ದೃಢಪಡಿಸುವ  ಬಗ್ಗೆ ಮಾತುಕತೆ ನಡೆಸಿದರು. ಜರ್ಮನಿಯಿಂದ ಕೋಪನ್ ಹ್ಯಾಗನ್​​ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಡ್ಯಾನಿಶ್ ಪ್ರಧಾನಿ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು, ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ “ಭವ್ಯ ಸ್ವಾಗತ” ಎಂದು ಬಣ್ಣಿಸಿದರು. ಮಾತುಕತೆಗಾಗಿ ಡೆನ್ಮಾರ್ಕ್‌ನ ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸವಾದ ಮೇರಿಯನ್‌ಬೋರ್ಗ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಫ್ರೆಡೆರಿಕ್ಸೆನ್ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ಡೆನ್ಮಾರ್ಕ್‌ಗೆ ಮೊದಲ ಭೇಟಿಯಾಗಿದ್ದು, ಮಂಗಳವಾರ ಮತ್ತು ಬುಧವಾರದಂದು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಗಳಲ್ಲಿ ಭಾಗವಹಿಸಲಿದ್ದಾರೆ. ಡೆನ್ಮಾರ್ಕ್‌ನೊಂದಿಗಿನ ನಮ್ಮ ವಿಶಿಷ್ಟವಾದ ‘ಹಸಿರು ಕಾರ್ಯತಂತ್ರದ ಪಾಲುದಾರಿಕೆ’ ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧಗಳ ಇತರ ಅಂಶಗಳನ್ನು ಪರಿಶೀಲಿಸಲು ಈ ಭೇಟಿಯು ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ವಿದೇಶ ಪ್ರವಾಸ ಹೊರಡುವ ಮುನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 2021 ರಲ್ಲಿ ಪ್ರಧಾನಿ ಫ್ರೆಡ್ರಿಕ್ಸನ್ ಅವರ ಭಾರತ ಭೇಟಿ ವೇಳೆ ಐದು ವರ್ಷಗಳ ಕ್ರಿಯಾ ಯೋಜನೆ ಬಗ್ಗೆ ಮಾತುಕತೆ ನಡೆದಿತ್ತು. ಪ್ರಧಾನಿ ಮೋದಿ ಅವರು ರಾಣಿ ಮಾರ್ಗರೆಟ್ II ಅವರನ್ನು ಭೇಟಿಯಾಗಲಿದ್ದಾರೆ. ಮೋದಿಯವರು ಭಾರತ-ಡೆನ್ಮಾರ್ಕ್ ಬ್ಯುಸಿನೆಸ್  ರೌಂಡ್‌ಟೇಬಲ್‌ನಲ್ಲಿ ಭಾಗವಹಿಸಲಿದ್ದು, ಡೆನ್ಮಾರ್ಕ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.

ಭಾರತದಲ್ಲಿ 200 ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ‘ಮೇಕ್ ಇನ್ ಇಂಡಿಯಾ, ಜಲ ಜೀವನ್ ಮಿಷನ್, ಡಿಜಿಟಲ್ ಇಂಡಿಯಾ ಮತ್ತು ಇತರ ಪ್ರಮುಖ ರಾಷ್ಟ್ರೀಯ ಮಿಷನ್‌ಗಳನ್ನು ಮುನ್ನಡೆಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

ಮುಖ್ಯವಾಗಿ ಐಟಿ ವಲಯದಲ್ಲಿ ಡೆನ್ಮಾರ್ಕ್‌ನಲ್ಲಿರುವ 60 ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ದ್ವಿಪಕ್ಷೀಯ ವ್ಯವಹಾರದಿಂದ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ. ಡೆನ್ಮಾರ್ಕ್​​ನಲ್ಲಿ 16,000 ದಷ್ಟು ಭಾರತೀಯರು ನೆಲೆಸಿದ್ದಾರೆ.

ಡೆನ್ಮಾರ್ಕ್‌ನೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳ ಹೊರತಾಗಿ ಮೋದಿ ಅವರು ಡೆನ್ಮಾರ್ಕ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆಯ ಪ್ರಧಾನ ಮಂತ್ರಿಗಳೊಂದಿಗೆ 2 ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. “ಶೃಂಗಸಭೆಯು ಕೊವಿಡ್ ಸಾಂಕ್ರಾಮಿಕದ ನಂತರದ ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ನಾವೀನ್ಯತೆ ಮತ್ತು ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ವಿಕಸನಗೊಳ್ಳುತ್ತಿರುವ ಜಾಗತಿಕ ಭದ್ರತಾ ಸನ್ನಿವೇಶ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ಭಾರತ-ನಾರ್ಡಿಕ್ ಸಹಕಾರದಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಶೃಂಗಸಭೆಯ ಹೊರತಾಗಿ, ನಾನು ಇತರ ನಾಲ್ಕು ನಾರ್ಡಿಕ್ ದೇಶಗಳ ನಾಯಕರನ್ನು ಭೇಟಿ ಮಾಡುತ್ತೇನೆ ಮತ್ತು ಅವರೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಡೆನ್ಮಾರ್ಕ್​​ನಲ್ಲಿ ಮೋದಿ ಮಾತು

ರಷ್ಯಾ-ಉಕ್ರೇನ್ ಯುದ್ಧದಲ್ಲಿ ತಕ್ಷಣದ ಕದನ ವಿರಾಮಕ್ಕೆ ನಾನು ಮತ್ತು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಕರೆ ನೀಡಿದ್ದೇವೆ. ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಬಳಸಬೇಕು ಎಂದು ಮಂಗಳವಾರ ಡೆನ್ಮಾರ್ಕ್​​ನಲ್ಲಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೋಪನ್‌ಹೇಗನ್‌ನಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಉಭಯ ನಾಯಕರು  ಮುಕ್ತ ಮತ್ತು ಅಂತರ್ಗತ” ಇಂಡೋ-ಪೆಸಿಫಿಕ್ ಪ್ರದೇಶವನ್ನು ಖಾತ್ರಿಪಡಿಸಿಕೊಳ್ಳಲು ಒತ್ತು ನೀಡಿದರು.

ಏತನ್ಮಧ್ಯೆ, ಯುದ್ಧವನ್ನು ಕೊನೆಗೊಳಿಸಲು ಭಾರತವು ರಷ್ಯಾದ ಮೇಲೆ ತನ್ನ ಪ್ರಭಾವವನ್ನು ಬಳಸುತ್ತದೆ ಎಂದು ನಾನು ಆಶಿಸಿರುವುದಾಗಿ ಫ್ರೆಡೆರಿಕ್ಸೆನ್ ಹೇಳಿದರು. ಈ ಯುದ್ಧ ಮತ್ತು ಕೊಲೆಗಳನ್ನು ಕೊನೆಗೊಳಿಸಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಡೆನ್ಮಾರ್ಕ್ ಪ್ರಧಾನಿ ಮನವಿ ಮಾಡಿದ್ದಾರೆ. ಬುಕಾದಲ್ಲಿ ನಾಗರಿಕರ ಹತ್ಯೆಗಳ ವರದಿಗಳು ತೀವ್ರ ಆಘಾತಕಾರಿಯಾಗಿದೆ. ನಾವು ಈ ಹತ್ಯೆಗಳನ್ನು ಖಂಡಿಸಿದ್ದೇವೆ ಮತ್ತು ಸ್ವತಂತ್ರ ತನಿಖೆಯ ಅಗತ್ಯವನ್ನು ನಾವು ಒತ್ತಿ ಹೇಳುತ್ತೇವೆ ಎಂದು ಅವರು ಹೇಳಿದರು.

ಹಸಿರು ಕಾರ್ಯತಂತ್ರದ ಪಾಲುದಾರಿಕೆ ಪರಿಶೀಲನೆ ಮೋದಿ ಮತ್ತು ಫ್ರೆಡೆರಿಕ್ಸೆನ್ ನೇತೃತ್ವದ ನಿಯೋಗ ಮಟ್ಟದ ಮಾತುಕತೆಗಳ ಸಂದರ್ಭದಲ್ಲಿ, ಭಾರತ ಮತ್ತು ಡೆನ್ಮಾರ್ಕ್ ಹಸಿರು ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಪ್ರಗತಿಯನ್ನು ಪರಿಶೀಲಿಸಿದವು. ಕೌಶಲ್ಯ ಅಭಿವೃದ್ಧಿ, ಹವಾಮಾನ, ನವೀಕರಿಸಬಹುದಾದ ಇಂಧನ, ಆರ್ಕ್ಟಿಕ್, ಪಿ2ಪಿ ಸಂಬಂಧಗಳ ಕ್ಷೇತ್ರಗಳಲ್ಲಿ ಅವರು ವ್ಯಾಪಕವಾದ ಸಹಕಾರವನ್ನು ಚರ್ಚಿಸಿದರು. ಭಾರತದ ಮೂಲಸೌಕರ್ಯ ವಲಯ ಮತ್ತು ‘ಹಸಿರು’ ಕೈಗಾರಿಕೆಗಳು ಡ್ಯಾನಿಶ್ ಕಂಪನಿಗಳು ಮತ್ತು ಪಿಂಚಣಿ ನಿಧಿಗಳಿಗೆ ಸಾಕಷ್ಟು ಹೂಡಿಕೆ ಅವಕಾಶಗಳನ್ನು ಹೊಂದಿವೆ ಎಂದು ಮೋದಿ ಹೇಳಿದರು.  “200 ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಭಾರತದಲ್ಲಿ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ – ಉದಾಹರಣೆಗೆ ಪವನ ಶಕ್ತಿ, ಹಡಗು, ಸಲಹಾ ಕೇಂದ್ರ, ಆಹಾರ ಸಂಸ್ಕರಣೆ, ಇಂಜಿನಿಯರಿಂಗ್, ಇತ್ಯಾದಿ. ‘ವ್ಯಾಪಾರ ಮಾಡಲು ಸುಲಭ’ ಮತ್ತು ನಮ್ಮ ಸ್ಥೂಲ ಆರ್ಥಿಕ ಸುಧಾರಣೆಗಳ ಪ್ರಯೋಜನಗಳನ್ನು ಅವರು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

“ಭಾರತ ಸರ್ಕಾರವು ಹಸಿರು ಪರಿವರ್ತನೆಗಾಗಿ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ. ಈ ಪ್ರಮುಖ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಡ್ಯಾನಿಶ್ ಪರಿಹಾರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನಾನು ಹೆಮ್ಮೆಪಡುತ್ತೇನೆ, ”ಎಂದು ಫ್ರೆಡೆರಿಕ್ಸೆನ್ ಹೇಳಿದರು. ಭಾರತ ಮತ್ತು ಡೆನ್ಮಾರ್ಕ್ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಯ ಮೌಲ್ಯಗಳನ್ನು ಹಂಚಿಕೊಂಡಿವೆ ಎಂದು ಮೋದಿ ಹೇಳಿದರು. ಇದಕ್ಕೆ ಸಹಮತಿ ಸೂಚಿಸಿದ ಫ್ರೆಡೆರಿಕ್ಸೆನ್ “ನಾವು ಅನೇಕ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ. ನಮ್ಮದು ಪ್ರಜಾಸತ್ತಾತ್ಮಕ ರಾಷ್ಟ್ರ. ನಾವಿಬ್ಬರೂ ನಿಯಮಾಧಾರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ನಂಬುತ್ತೇವೆ. ಅಂತಹ ಸಮಯದಲ್ಲಿ, ನಾವು ನಮ್ಮ ನಡುವೆ ಇನ್ನೂ ಬಲವಾದ ಸೇತುವೆಯನ್ನು ನಿರ್ಮಿಸಬೇಕಾಗಿದೆ ಎಂದಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 6:08 pm, Tue, 3 May 22