
ನವದೆಹಲಿ, ಅಕ್ಟೋಬರ್ 14: ಹರಿಯಾಣದ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ (Puran Kumar) ಅವರ ಆತ್ಮಹತ್ಯೆ ಪ್ರಕರಣದ ತನಿಖೆಯ ನಡುವೆಯೇ, ಮತ್ತೊಬ್ಬ ಪೊಲೀಸ್ ಅಧಿಕಾರಿ ಇಂದು ಪೂರಣ್ ಕುಮಾರ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹ್ಟಕ್‌ನ ಸೈಬರ್ ಸೆಲ್‌ನಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿರುವ ಸಂದೀಪ್ ಕುಮಾರ್, ವೈ. ಪೂರಣ್ ಕುಮಾರ್ ವಿರುದ್ಧದ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರು “ಸತ್ಯ”ಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿರುವುದಾಗಿ ಸೂಸೈಡ್ ನೋಟ್ನಲ್ಲಿ ತಿಳಿಸಿದ್ದಾರೆ. ತಮ್ಮನ್ನು ತಾವು ಭಗತ್ ಸಿಂಗ್ಗೆ ಹೋಲಿಸಿಕೊಂಡಿದ್ದಾರೆ.
ಸಂದೀಪ್ ಕುಮಾರ್ ರೋಹ್ಟಕ್‌ನ ಹೊಲವೊಂದರಲ್ಲಿ ತಮ್ಮ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಮಾಡಿರುವ ವಿಡಿಯೋದಲ್ಲಿ ಮತ್ತು ಮೂರು ಪುಟಗಳ ಸೂಸೈಡ್ ನೋಟ್ನಲ್ಲಿ ಅವರು ತಮ್ಮ ಸಾವಿನ ಕಾರಣ ತಿಳಿಸಿದ್ದಾರೆ.
ಇದನ್ನೂ ಓದಿ: ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣ; ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಅಮಾನತು
“ವೈ. ಪೂರಣ್ ಕುಮಾರ್ ಒಬ್ಬ ಭ್ರಷ್ಟ ಪೊಲೀಸ್. ಅವರು ತಮ್ಮ ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡರು” ಎಂದು ಸಂದೀಪ್ ಕುಮಾರ್ ಆರೋಪಿಸಿದ್ದಾರೆ. ಜಾತಿ ತಾರತಮ್ಯದ ಸಮಸ್ಯೆಯನ್ನು ಬಳಸಿಕೊಂಡು ಐಪಿಎಸ್ ಅಧಿಕಾರಿ ಪೊಲೀಸ್ ವ್ಯವಸ್ಥೆಯನ್ನು ಹೈಜಾಕ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
BREAKING: Shocking turn in Haryana probe ASI Sandeep Kumar Lather, who had been handling the investigation into IPS Y. Puran Kumar, has died by suicide. In a note he allegedly accused Puran and his wife of corruption, writing that he was “giving his martyrdom” to force an inquiry pic.twitter.com/OwRz9phEkB
— Sagar Dixit (@isagardixit) October 14, 2025
ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಬೆಳಕಿಗೆ ಬಂದ ನಂತರ ವೈ. ಪೂರಣ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ವೈ ಪೂರಣ್ ಕುಮಾರ್ ಅವರ ಗನ್ ಮ್ಯಾನ್ ಮದ್ಯ ಗುತ್ತಿಗೆದಾರರಿಂದ 2.5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ನಾನು ಆತನನ್ನು ಹಿಡಿದಿದ್ದೆ. ಗ್ಯಾಂಗ್‌ಸ್ಟರ್ ಒಬ್ಬ ಬೆದರಿಕೆ ಹಾಕಿದ ನಂತರ ಗುತ್ತಿಗೆದಾರ ವೈ. ಪೂರಣ್ ಕುಮಾರ್ ಅವರನ್ನು ಭೇಟಿಯಾಗಿದ್ದರು. ಲಂಚದ ಆರೋಪಗಳು ಬೆಳಕಿಗೆ ಬಂದಾಗ, ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಅದಕ್ಕೆ ಜಾತಿ ಬಣ್ಣ ನೀಡಲು ಪ್ರಯತ್ನಿಸಿದರು. ಬಳಿಕ ಆತ್ಮಹತ್ಯೆ ಮಾಡಿಕೊಂಡರು. ಅವರು ಭ್ರಷ್ಟಾಚಾರ ಬಯಲಾಯ್ತು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೇ ವಿನಃ ಜಾತಿ ನಿಂದನೆಯ ಕಾರಣದಿಂದಲ್ಲ ಎಂದು ಪೊಲೀಸ್ ಅಧಿಕಾರಿ ಸಂದೀಪ್ ತಮ್ಮ ಸೂಸೈಡ್ ನೋಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹರಿಯಾಣದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಸಾವಿನ ತನಿಖೆಗೆ 6 ಸದಸ್ಯರ ಎಸ್‌ಐಟಿ ರಚನೆ
ಪೂರಣ್ ಕುಮಾರ್ ಅವರನ್ನು ರೋಹ್ಟಕ್ ವ್ಯಾಪ್ತಿಯಲ್ಲಿ ನಿಯೋಜಿಸಿದ ನಂತರ, ಅವರು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಬದಲು ಭ್ರಷ್ಟ ಅಧಿಕಾರಿಗಳನ್ನು ಅಲ್ಲಿಗೆ ನಿಯೋಜಿಸಲು ಪ್ರಾರಂಭಿಸಿದರು ಎಂದು ಸಂದೀಪ್ ಕುಮಾರ್ ತಮ್ಮ ಸಾವಿಗೆ ಮುನ್ನ ರೆಕಾರ್ಡ್ ಮಾಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಪೂರಣ್ ಕುಮಾರ್ ನಿಯೋಜನೆ ಮಾಡಿದವರು ಭ್ರಷ್ಟಾಚಾರ ಮಾಡಿದ್ದು ಮಾತ್ರವಲ್ಲದೆ ಅರ್ಜಿದಾರರಿಗೆ ಕರೆ ಮಾಡಿ ಹಣ ಕೇಳುವ ಮೂಲಕ ಅವರನ್ನು ಮಾನಸಿಕವಾಗಿ ಹಿಂಸಿಸಿದರು. ವರ್ಗಾವಣೆಗೆ ಪ್ರತಿಯಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಲೈಂಗಿಕವಾಗಿ ಬಳಸಿಕೊಂಡರು ಎಂದು ಆರೋಪಿಸಿದ್ದಾರೆ. ಪೂರಣ್ ಕುಮಾರ್ ಅವರ ಭ್ರಷ್ಟಾಚಾರದ ಬೇರುಗಳು ತುಂಬಾ ಆಳವಾಗಿವೆ. ಅವರ ವಿರುದ್ಧದ ದೂರಿಗೆ ಹೆದರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂದೀಪ್ ಕುಮಾರ್ ಆರೋಪಿಸಿದ್ದಾರೆ.
“ಪೂರಣ್ ಕುಮಾರ್ ಅವರ ಆಸ್ತಿಗಳನ್ನು ತನಿಖೆ ಮಾಡಬೇಕು. ಇದು ಜಾತಿ ಸಮಸ್ಯೆಯಲ್ಲ. ಸತ್ಯ ಹೊರಬರಬೇಕು. ಅವರು ಭ್ರಷ್ಟರಾಗಿದ್ದರು. ನಾನು ಈ ಸತ್ಯಕ್ಕಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕತೆಯೊಂದಿಗೆ ನಿಲ್ಲುತ್ತೇನೆ ಎಂದು ನನಗೆ ಹೆಮ್ಮೆಯಿದೆ. ದೇಶವನ್ನು ಜಾಗೃತಗೊಳಿಸಲು ನನ್ನ ಈ ತ್ಯಾಗ ಬಹಳ ಮುಖ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Tue, 14 October 25