AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿಯಾಣದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಸಾವಿನ ತನಿಖೆಗೆ 6 ಸದಸ್ಯರ ಎಸ್‌ಐಟಿ ರಚನೆ

ಹರಿಯಾಣ ಎಡಿಜಿಪಿ ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಕಿರುಕುಳ ಮತ್ತು ಜಾತಿ ತಾರತಮ್ಯದ ಬಗ್ಗೆ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಈ ಪ್ರಕರಣದ ತನಿಖೆಗಾಗಿ ಚಂಡೀಗಢ ಪೊಲೀಸರು ಐಜಿ ಪುಷ್ಪೇಂದ್ರ ಕುಮಾರ್ ನೇತೃತ್ವದಲ್ಲಿ 6 ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದಾರೆ. ಪೂರಣ್ ಕುಮಾರ್ ಮಂಗಳವಾರ ತಮ್ಮ ಚಂಡೀಗಢದ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಹರಿಯಾಣದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಸಾವಿನ ತನಿಖೆಗೆ 6 ಸದಸ್ಯರ ಎಸ್‌ಐಟಿ ರಚನೆ
Puran Kumar
ಸುಷ್ಮಾ ಚಕ್ರೆ
|

Updated on: Oct 10, 2025 | 6:02 PM

Share

ಚಂಡೀಗಢ, ಅಕ್ಟೋಬರ್ 10: ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ (IPS Officer Puran Kumar) ಅವರ ಆತ್ಮಹತ್ಯೆಯ ತನಿಖೆಗಾಗಿ ಚಂಡೀಗಢದ ಪೊಲೀಸರು ಐಜಿಪಿ ಪುಷ್ಪೇಂದ್ರ ಕುಮಾರ್ ನೇತೃತ್ವದಲ್ಲಿ 6 ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಗುರುವಾರ ಹರಿಯಾಣ ಡಿಜಿಪಿ ಶತ್ರುಜೀತ್ ಸಿಂಗ್ ಕಪೂರ್ ಮತ್ತು ರೋಹ್ಟಕ್ ಎಸ್ಪಿ ನರೇಂದ್ರ ಬಿಜರ್ನಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹರಿಯಾಣದ ಎಡಿಜಿಪಿ ವೈ ಪೂರಣ್ ಕುಮಾರ್ ಅವರ ಪತ್ನಿಯಾಗಿರುವ ಐಎಎಸ್ ಅಧಿಕಾರಿ ಅನ್ಮೀತ್ ಪಿ. ಕುಮಾರ್ ಅವರು ತಮ್ಮ ಪತಿಯ ಆತ್ಮಹತ್ಯೆಗೆ ಇಬ್ಬರು ಅಧಿಕಾರಿಗಳು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಅಕ್ಟೋಬರ್ 9ರಂದು ತನ್ನ ಪತಿಯ ಆತ್ಮಹತ್ಯೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಗಳನ್ನು ದುರ್ಬಲಗೊಳಿಸಿದ್ದಾರೆ ಮತ್ತು ಪ್ರಮುಖ ಆರೋಪಿಗಳ ಹೆಸರುಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಅಮ್ನೀತ್ ಚಂಡೀಗಢ ಎಸ್‌ಎಸ್‌ಪಿಗೆ ಪತ್ರ ಬರೆದಿದ್ದಾರೆ. ತನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಅವರು ಗುರುತಿಸಿರುವ ಹರಿಯಾಣ ಡಿಜಿಪಿ ಮತ್ತು ರೋಹ್ಟಕ್ ಎಸ್‌ಪಿಯ ಹೆಸರುಗಳನ್ನು ಸೇರಿಸಲು ಎಫ್‌ಐಆರ್ ಅನ್ನು ತಿದ್ದುಪಡಿ ಮಾಡಬೇಕೆಂದು ಅಮ್ನೀತ್ ಒತ್ತಾಯಿಸಿದ್ದರು.

ಇದನ್ನೂ ಓದಿ: ಐಪಿಎಸ್ ಅಧಿಕಾರಿ ಆತ್ಮಹತ್ಯೆ, ಹರಿಯಾಣ ಡಿಜಿಪಿ ವಿರುದ್ಧ ಪೂರಣ್ ಪತ್ನಿ ದೂರು

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಸಲ್ಲಿಸಲಾದ ತನ್ನ ದೂರಿನಲ್ಲಿ ಹೆಸರಿಸಲಾದ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕೆಂದು ಐಎಎಸ್ ಅಧಿಕಾರಿ ಅಮ್ನೀತ್ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

“ಹಿರಿಯ ಅಧಿಕಾರಿಗಳಿಂದ ನನ್ನ ಪತಿಗೆ ಹಲವು ವರ್ಷಗಳ ಕಾಲ ವ್ಯವಸ್ಥಿತವಾಗಿ ಅವಮಾನ, ಕಿರುಕುಳ ಉಂಟಾಗಿತ್ತು. ಇದನ್ನು ಕಂಡ ಪತ್ನಿಯಾಗಿ ನಾನು ನ್ಯಾಯಕ್ಕಾಗಿ ಬೇಡಿಕೊಳ್ಳುತ್ತಿದ್ದೇನೆ. ನನ್ನ ಪತಿ ಸಲ್ಲಿಸಿದ ಹಲವಾರು ದೂರುಗಳಿಂದಲೂ ಅವರ ನೋವಿಗೆ ಪರಿಹಾರ ಸಿಗಲಿಲ್ಲ. ಅವರು ತಮ್ಮ ಸೂಸೈಡ್ ನೋಟ್​​ನಲ್ಲಿ ಉಲ್ಲೇಖಿಸಿರುವಂತೆ ಜಾತಿ ಆಧಾರಿತ ತಾರತಮ್ಯವನ್ನು ಸಹಿಸಿಕೊಂಡಿದ್ದಾರೆ” ಎಂದು ಅಮ್ನೀತ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೇರೆಯವರನ್ನು ಬೆದರಿಸಲು ನಮ್ಮ ಪ್ರದೇಶ ಬಳಸಲು ಯಾರಿಗೂ ಅವಕಾಶ ನೀಡವುದಿಲ್ಲ, ಪಾಕ್​ಗೆ ಭಾರತ, ಅಫ್ಘಾನಿಸ್ತಾನ ಎಚ್ಚರಿಕೆ

ಸೂಸೈಡ್ ನೋಟ್ ಜಾತಿ ಆಧಾರಿತ ತಾರತಮ್ಯ ಮತ್ತು ಮಾನಸಿಕ ಕಿರುಕುಳವನ್ನು ಎತ್ತಿ ತೋರಿಸುತ್ತದೆ. ಪೂರಣ್ ಕುಮಾರ್ 8 ಪುಟಗಳ ಟೈಪ್ ಮಾಡಿ ಸಹಿ ಮಾಡಿದ ಸೂಸೈಡ್ ನೋಟ್ ಅನ್ನು ಇಟ್ಟಿದ್ದಾರೆ. ಅದರಲ್ಲಿ ಕಳೆದ 5 ವರ್ಷಗಳಿಂದ ಹರಿಯಾಣದ ಕೆಲವು ಹಿರಿಯ ಅಧಿಕಾರಿಗಳು ನಿರಂತರ ಜಾತಿ ಆಧಾರಿತ ತಾರತಮ್ಯ, ನಿರಂತರ ಮಾನಸಿಕ ಕಿರುಕುಳ ಮತ್ತು ಸಾರ್ವಜನಿಕ ಅವಮಾನ ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೆಲ್ಲ ಸಹಿಸಿಕೊಂಡು ಸಾಕಾಗಿದೆ ಎಂದು ಅವರು ಹೇಳಿದ್ದಾರೆ.

ಪೂರಣ್ ಕುಮಾರ್ ಅವರನ್ನು ಇತ್ತೀಚೆಗೆ ರೋಹ್ಟಕ್‌ನ ಸುನಾರಿಯಾದಲ್ಲಿ ಪೊಲೀಸ್ ತರಬೇತಿ ಕೇಂದ್ರದ (ಪಿಟಿಸಿ) ಇನ್ಸ್‌ಪೆಕ್ಟರ್ ಜನರಲ್ ಆಗಿ ನೇಮಿಸಲಾಗಿತ್ತು. ಇದಕ್ಕೂ ಮೊದಲು, ಅವರು ಸುನಾರಿಯಾಕ್ಕೆ ವರ್ಗಾವಣೆಯಾಗುವ ಮೊದಲು ರೋಹ್ಟಕ್ ಶ್ರೇಣಿಯ ಇನ್ಸ್‌ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಈಗ 13 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ದಲಿತ ಸಂಘಟನೆಗಳು ಮತ್ತು ರಾಜಕೀಯ ನಾಯಕರು ತ್ವರಿತ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆ ಬಾಕಿ ಇದೆ. ಪೂರಣ್ ಕುಮಾರ್ ಸಾವಿನ ಸುತ್ತಲಿನ ಸಂದರ್ಭಗಳ ತನಿಖೆಗಾಗಿ ಚಂಡೀಗಢ ಪೊಲೀಸರು 6 ಸದಸ್ಯರ ಎಸ್‌ಐಟಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ