ಚಂಡೀಗಢದ ಮನೆಯಲ್ಲಿ ಹರಿಯಾಣದ ಐಪಿಎಸ್ ಅಧಿಕಾರಿ ಶೂಟ್ ಮಾಡಿಕೊಂಡು ಆತ್ಮಹತ್ಯೆ
ಹರಿಯಾಣ ಕೇಡರ್ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಚಂಡೀಗಢದ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ಕಾರಣವನ್ನು ಬಹಿರಂಗಪಡಿಸುವ ಯಾವುದೇ ಅಧಿಕೃತ ಹೇಳಿಕೆ ಇದುವರೆಗೆ ಬಂದಿಲ್ಲ. ಪೊಲೀಸರು ಸುಳಿವುಗಳನ್ನು ಸಂಗ್ರಹಿಸಲು ಪೂರಣ್ ಕುಮಾರ್ ಅವರ ವೈಯಕ್ತಿಕ ಫೋನ್ ಮತ್ತು ಇತರ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ.

ಚಂಡೀಗಢ, ಅಕ್ಟೋಬರ್ 7: ಹರಿಯಾಣ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿಯಾದ (IPS Officer) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವೈ. ಪೂರಣ್ ಕುಮಾರ್ ಅವರು ಇಂದು (ಅಕ್ಟೋಬರ್ 7) ಚಂಡೀಗಢದ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಪೂರಣ್ ಕುಮಾರ್ ತಮಗೆ ತಾವೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ದುರಂತ ಘಟನೆ ಹರಿಯಾಣ ಪೊಲೀಸರು ಮತ್ತು ಆಡಳಿತ ವಲಯದಲ್ಲಿ ಆಘಾತಕಾರಿ ಅಲೆಗಳನ್ನು ಎಬ್ಬಿಸಿದೆ.
ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಚಂಡೀಗಢ ಪೊಲೀಸರು ಮತ್ತು ಹಿರಿಯ ಹರಿಯಾಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಪೂರಣ್ ಕುಮಾರ್ ಅವರ ಮೃತದೇಹವನ್ನು ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಯಿತು. ಆತ್ಮಹತ್ಯೆಗೆ ಅವರು ಸರ್ವಿಸ್ ರಿವಾಲ್ವರ್ ಅನ್ನೇ ಬಳಸಿದ್ದಾರೆ ಎಂದು ಹೇಳಲಾಗಿದೆ. ಅವರ ನಿರ್ಧಾರದ ಹಿಂದಿನ ಸಂದರ್ಭಗಳು ಮತ್ತು ಸಂಭವನೀಯ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಕೇಸ್: ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು
“ಐಪಿಎಸ್ ಅಧಿಕಾರಿಯ ಸಾವಿನ ಘಟನೆ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಅವರ ಕುಟುಂಬದ ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ” ಎಂದು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕನ್ವರ್‌ದೀಪ್ ಕೌರ್ ಹೇಳಿದ್ದಾರೆ.
ಸಿಎಫ್‌ಎಸ್‌ಎಲ್ (ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ) ತಂಡವು ಸ್ಥಳವನ್ನು ಪರಿಶೀಲಿಸುತ್ತಿದೆ ಮತ್ತು ತನಿಖೆ ಮುಂದುವರೆದಿದೆ. ಆ ಸಮಯದಲ್ಲಿ ಮನೆಯಲ್ಲಿದ್ದವರನ್ನು ಪ್ರಶ್ನಿಸಲಾಗುತ್ತಿದೆ.
ಇದನ್ನೂ ಓದಿ: ನಾಲ್ಕು ತಿಂಗಳ ಮಗನನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಂದು,ಬಳಿಕ ಆತ್ಮಹತ್ಯೆಗೆ ಶರಣಾದ ತಂದೆ
ಇಲ್ಲಿಯವರೆಗೆ, ಆತ್ಮಹತ್ಯೆಯ ಹಿಂದಿನ ಕಾರಣ ಪತ್ತೆಯಾಗಿಲ್ಲ. ಸುಳಿವುಗಳನ್ನು ಸಂಗ್ರಹಿಸಲು ಪೊಲೀಸರು ಪೂರಣ್ ಕುಮಾರ್ ಅವರ ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ. ಅವರ ಕುಟುಂಬವು ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ವಿಧಿವಿಜ್ಞಾನ ಮತ್ತು ಬ್ಯಾಲಿಸ್ಟಿಕ್ ವರದಿಗಳಿಗಾಗಿ ಕಾಯುತ್ತಿದ್ದಾರೆ.
ಎಡಿಜಿಪಿ ವೈ. ಪೂರಣ್ ಕುಮಾರ್ ಹರಿಯಾಣದಲ್ಲಿ ಹಲವು ವರ್ಷಗಳ ಕಾಲ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದರು. ಅವರ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪಿ. ಕುಮಾರ್ ಅವರು ಪ್ರಸ್ತುತ ಹರಿಯಾಣ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಯಾಗಿದ್ದಾರೆ. ಈ ಘಟನೆಯ ಸಮಯದಲ್ಲಿ ಅಮ್ನೀತ್ ಕುಮಾರ್ ವಿದೇಶದಲ್ಲಿದ್ದರು. ಅವರು ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರೊಂದಿಗೆ ಜಪಾನ್‌ಗೆ ಅಧಿಕೃತ ನಿಯೋಗದಲ್ಲಿ ಇದ್ದರು. ಪತಿಯ ಸಾವಿನ ವಿಷಯ ತಿಳಿಸಲಾಗಿದ್ದು, ಅವರು ಶೀಘ್ರದಲ್ಲೇ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




