ಗುರುಗ್ರಾಮ್, ಸೆಪ್ಟೆಂಬರ್ 19: ಹರ್ಯಾಣದ ನೂಹ್ ಪಟ್ಟಣದಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಪ್ರಚೋದನೆ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ (Congress MLA Mamman Khan) ಅವರನ್ನು 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಫಿರೋಜ್ಪುರ್ ಝಿರ್ಕಾ (Firozpur Jhirka) ಕ್ಷೇತ್ರದ ಶಾಸಕರಾದ ಮಮ್ಮನ್ ಖಾನ್ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು. ಆ ಬಳಿಕ 4 ದಿನಗಳ ಕಾಲ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇಂದು ಅವರ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದರಿಂದ ಕೋರ್ಟ್ಗೆ ಕರೆದೊಯ್ದು ಹಾಜರುಪಡಿಸಲಾಯಿತು. ಈ ವೇಳೆ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ವ್ಯವಸ್ಥೆ ಏರ್ಪಡಿಸಲಾಗಿತ್ತು. ಕೋರ್ಟ್ ಕಡೆಗೆ ಸಾಗುವ ಎಲ್ಲಾ ರಸ್ತೆಗಳಲ್ಲೂ 200ಕ್ಕೂ ಹೆಚ್ಚು ಪೊಲೀಸರ ಕಾವಲು ಇಡಲಾಗಿತ್ತು.
ಮಮ್ಮನ್ ಖಾನ್ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ. ಜುಲೈ 31ರಂದು ನಾಗಿನಾ ಪ್ರದೇಶದಲ್ಲಿ ಧಾರ್ಮಿಕಯಾತ್ರೆ ನಡೆಸುತ್ತಿದ್ದವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಕೋಮು ಹಿಂಸಾಚಾರದಲ್ಲಿ ಆರು ಮಂದಿ ಸಾವನ್ನಪ್ಪಿ 88 ಮಂದಿ ಗಾಯಗೊಂಡಿದ್ದರು. ಈ ದಾಳಿ ಹಿಂದೆ ಇದ್ದ ಶಕ್ತಿಗಳಲ್ಲಿ ಮಮ್ಮನ್ ಖಾನ್ ಒಬ್ಬರು ಎಂಬುದು ನೂಹ್ ಜಿಲ್ಲಾ ಪೊಲೀಸರ ಆರೋಪ. ಅವರ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸಲಾಗುತ್ತಿದೆ. ಮಮ್ಮನ್ ಖಾನ್ ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ. ಪ್ರಕರಣದ ಇತರ ಆರೋಪಿಗಳೊಂದಿಗೆ ಕಾಂಗ್ರೆಸ್ ಶಾಸಕರು ಭೇಟಿ ನೀಡಿದ್ದ ಆರೋಪ ಇದ್ದು ಆ ಬಗ್ಗೆ ಸಾಕ್ಷ್ಯಾಧಾರಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅನಂತನಾಗ್ ಎನ್ಕೌಂಟರ್; 4ನೇ ಯೋಧನ ಮೃತದೇಹ ಪತ್ತೆ; ಉಗ್ರರ ಅಟ್ಟಹಾಸ ಇಂದೇ ಕೊನೆಗಾಣಿಸಲು ಸೇನೆ ಸಂಕಲ್ಪ
ಮೂಲಗಳ ಪ್ರಕಾರ, ಶುಕ್ರವಾರದ ಬಳಿಕ ಪೊಲೀಸ್ ಕಸ್ಟಡಿಯಲ್ಲಿ ಮಮ್ಮನ್ ಖಾನ್ ಅವರನ್ನು ಎಸ್ಐಟಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಶೇಷ ತನಿಖಾ ತಂಡ ಕೇಳಿದ ಪ್ರಶ್ನೆಗಳಿಗೆ ಖಾನ್ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ ಎನ್ನಲಾಗಿದೆ. ಈ ವಿಚಾರವನ್ನು ಕೋರ್ಟ್ ಮುಂದೆ ಪೊಲೀಸರು ತಿಳಿಸಿದ್ದಾರೆ. ತನಿಖೆಗೆ ಆರೋಪಿ ಸಹಕರಿಸುತ್ತಿಲ್ಲ. ಸತ್ಯಾಂಶಗಳನ್ನು ಮುಚ್ಚಿಡುತ್ತಿದ್ದಾರೆ. ತಮ್ಮ ಫೋನ್ ಅನ್ನು ಫಾರ್ಮ್ಯಾಟ್ ಮಾಡಿದ್ದಾರೆ ಎಂದು ಪೊಲೀಸರು ದೂರಿದ್ದಾರೆ.
ಹಾಗೆಯೇ, ಫಿರೋಜ್ಪುರ್ ಝಿರ್ಕಾ ಶಾಸಕ ಮಮ್ಮನ್ ಖಾನ್ ಅವರಿಗೆ ಭದ್ರತೆ ಒದಗಿಸುವ ಭದ್ರತಾ ಸಿಬ್ಬಂದಿಯ ಹೇಳಿಕೆಯನ್ನೂ ಎಸ್ಐಟಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ