ಪರಾರಿಯಾಗಿರುವ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ (Amritpal Singh) ಮತ್ತು ಆತನ ಸಹಚರ ಪಾಪಲ್‌ಪ್ರೀತ್ ಸಿಂಗ್‌ಗೆ ಕುರುಕ್ಷೇತ್ರ ಜಿಲ್ಲೆಯ ತನ್ನ ಮನೆಯಲ್ಲಿ ಆಶ್ರಯ ನೀಡಿದ ಮಹಿಳೆಯನ್ನು ಹರ್ಯಾಣ ಪೊಲೀಸರು (Haryana Police) ಬಂಧಿಸಿದ್ದಾರೆ. ಅದೇ ವೇಳೆ ಪಂಜಾಬ್ ಪೊಲೀಸರು ಖಲಿಸ್ತಾನ್ (Khalistan) ನಾಯಕನ ಗನ್ ಮ್ಯಾನ್ನ್ನು ಬಂಧಿಸಿದ್ದಾರೆ. ಈತನನ್ನು ಪಂಜಾಬ್‌ನ ಮಂಗೇವಾಲ್ ಗ್ರಾಮದ ನಿವಾಸಿ ತೇಜಿಂದರ್ ಸಿಂಗ್ ಅಲಿಯಾಸ್ ಗೋರ್ಖಾ ಬಾಬಾ ಎಂದು ಗುರುತಿಸಲಾಗಿದೆ. ಶಹಾಬಾದ್ ಪ್ರದೇಶದ ನಿವಾಸಿ ಬಲ್ಜಿತ್ ಕೌರ್ ಅವರನ್ನು ಹರ್ಯಾಣ ಪೊಲೀಸರು ಬಂಧಿಸಿರುವುದರಿಂದ ಅಮೃತಪಾಲ್ ಪಂಜಾಬ್‌ನಿಂದ ಪಲಾಯನ ಮಾಡಿರಬಹುದು ಎಂದು ಸೂಚಿಸುತ್ತದೆ. ಅಮೃತಪಾಲ್ ಮತ್ತು ಆತನ ಸಹಚರ ಪಾಪಲ್‌ಪ್ರೀತ್ ಸಿಂಗ್‌ಗೆ ಭಾನುವಾರ ಶಹಾಬಾದ್‌ನಲ್ಲಿರುವ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ಬಲ್ಜಿತ್ ಕೌರ್ ಎಂಬ ಮಹಿಳೆಯನ್ನು ನಾವು ಬಂಧಿಸಿದ್ದೇವೆ. ಮಹಿಳೆಯನ್ನು ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ಕುರುಕ್ಷೇತ್ರದ ಪೊಲೀಸ್ ವರಿಷ್ಠಾಧಿಕಾರಿ ಸುರೀಂದರ್ ಸಿಂಗ್ ಭೋರಿಯಾ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಲೂಧಿಯಾನ ಜಿಲ್ಲೆಯ ಖನ್ನಾ ಪ್ರದೇಶದ ಮಂಗೇವಾಲ್ ಗ್ರಾಮದ ನಿವಾಸಿ ಗಿಲ್, ಅಮೃತಪಾಲ್ನ ಭದ್ರತೆಯಲ್ಲಿ ನಿಯೋಜಿತನಾಗಿದ್ದ. ಆತ ಶನಿವಾರದಂದು ‘ವಾರಿಸ್ ಪಂಜಾಬ್ ದೇ’ ಮೇಲೆ ಪೋಲಿಸ್ ದಮನ ಕಾರ್ಯಾಚರಣೆ ಆರಂಭವಾದಾಗಿನಿಂದ ಪರಾರಿಯಾಗಿದ್ದಾನೆ ಎಂದು ಖನ್ನಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಪಾಯಲ್) ಹರ್ಸಿಮ್ರತ್ ಸಿಂಗ್ ಹೇಳಿದ್ದಾರೆ.
ಗಿಲ್ ಶಸ್ತ್ರಾಸ್ತ್ರ ಪರವಾನಗಿ ಇಲ್ಲದೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳು ಮತ್ತು ವಿಡಿಯೊಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಿದ್ದು ಆತನ ವಿರುದ್ಧ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಡಿಎಸ್ಪಿ ಹೇಳಿದ್ದಾರೆ.
ಅಜ್ನಾಲಾ ಘಟನೆಯಲ್ಲಿ ಗಿಲ್ ಕೂಡ ಭಾಗಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಮತ್ತು ಅಜ್ನಾಲಾ ಪೊಲೀಸರು ಆತನ ವಿರುದ್ಧ ಪ್ರತ್ಯೇಕವಾಗಿ ಕ್ರಮಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಅಮೃತಪಾಲ್ ಸಿಂಗ್ ನ ಸಹಚರ ಲವ್‌ಪ್ರೀತ್ ತೂಫಾನ್ ಸಿಂಗ್‌ನನ್ನು ಬಿಡುಗಡೆ ಮಾಡಲು ಫೆಬ್ರವರಿಯಲ್ಲಿ ಸಿಂಗ್ ಬೆಂಬಲಿಗರು ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಗೆ ಖಡ್ಗ ಮತ್ತು ಬಂದೂಕುಗಳೊಂದಿಗೆ ನುಗ್ಗಿದ್ದರು. ಇದು ಖಲಿಸ್ತಾನ್ ಪರ ಉಗ್ರಗಾಮಿಗಳು ರಾಜ್ಯಕ್ಕೆ ಮರಳುವ ಆತಂಕವನ್ನು ಹೆಚ್ಚಿಸಿತು. ಕಳೆದ ವಾರ, ಪಂಜಾಬ್ ಪೊಲೀಸರು ಅಮೃತಪಾಲ್ ಮತ್ತು ಅವರ ಸಂಘಟನೆಯ ವಿರುದ್ಧ ಕ್ರಮವನ್ನು ಪ್ರಾರಂಭಿಸಿದರು. ಪೊಲೀಸ್ ಕ್ರಮದ ಸಮಯದಲ್ಲಿ ಅವರ ಹಲವಾರು ಬೆಂಬಲಿಗರನ್ನು ಬಂಧಿಸಲಾಗಿದೆ. ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿರುವ ಅಮೃತಪಾಲ್ ಸಿಂಗ್ ಸೇರಿದಂತೆ ಅವರಲ್ಲಿ ಕೆಲವರ ವಿರುದ್ಧ ಸರ್ಕಾರ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ