ಸೆಪ್ಟೆಂಬರ್ 14ರಂದು ಹತ್ರಾಸ್ನ ಜಮೀನೊಂದರಲ್ಲಿ ಕೆಲಸ ಮಾಡ್ತಿದ್ದ ದಲಿತ ಯುವತಿಯ ಮೇಲೆ ನಾಲ್ವರು ಕಾಮುಕರು ಪೈಶಾಚಿಕವಾಗಿ ಅತ್ಯಾಚಾರವೆಸಗಿದ್ದೂ ಅಲ್ಲದೆ, ಆಕೆಯ ಮೇಲೆ ಭೀಕರವಾಗಿ ಹಲ್ಲೆ ಕೂಡ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬೆತ್ತಲೆಯಾಗಿ ಬಿದ್ದಿದ್ದ ಯುವತಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಯನ್ನು ದೆಹಲಿಯ ಏಮ್ಸ್ಗೆ ಸಹ ಸ್ಥಳಾಂತರಿಸಲಾಗಿತ್ತು. ಆದರೆ ಅಲ್ಲೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರದಂದು ಆಕೆ ಕೊನೆಯುಸಿರೆಳೆದಳು.
ಆಕೆಯ ಮೃತದೇಹವನ್ನ ಗ್ರಾಮಕ್ಕೆ ತೆಗೆದುಕೊಂಡು ಬಂದ ಪೊಲೀಸರು ಹೆತ್ತವರಿಗೂ ಕೊನೆಯ ಬಾರಿಗೆ ಒಮ್ಮೆ ನೋಡಲು ಬಿಡಲಿಲ್ಲ. ಅವರು ಆ್ಯಂಬುಲೆನ್ಸ್ಗೆ ಅಡ್ಡಗಟ್ಟಿ ಅಂಗಾಲಾಚಿದರೂ ಖಾಕಿಧಾರಿಗಳ ಮನಸ್ಸು ಕರಗಿರಲಿಲ್ಲ. ಅಂತ್ಯಸಂಸ್ಕಾರದ ಯಾವ ಶಾಸ್ತ್ರವನ್ನೂ ಮಾಡಲು ಅವರಿಗೆ ಅವಕಾಶ ನೀಡಲಿಲ್ಲ. ಕುಟುಂಬಸ್ಥರ ಇಚ್ಛೆಗೆ ವಿರುದ್ಧವಾಗಿ ಪೊಲೀಸರೇ ಮೃತದೇಹವನ್ನ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಿದರು.
ಅಷ್ಟು ಮಾತ್ರವಲ್ಲ, ಘಟನೆ ವೇಳೆ ಸ್ಥಳದಲ್ಲಿದ್ದ ಮಾಧ್ಯಮಗಳ ಎದುರೇ, ಯುವತಿಯ ಕುಟುಂಬದವರಿಗೆ ಬೆದರಿಕೆ ಹಾಕಿದ್ದಾರೆ. ‘ಮಾಧ್ಯಮಗಳು ಯಾವಗಲೂ ನಿಮ್ಮ ಜೊತೆ ಇರಲ್ಲ, ಆದ್ರೆ ನೀವು ಇಲ್ಲೇ ಬದುಕಬೇಕು, ಆಲೋಚಿಸಿ’ ಅಂತ ಅಧಿಕಾರಿಯೊಬ್ಬ ಅವರಿಗೆ ಹೆದರಿಸಿದ್ದಾನೆ. ಪೊಲೀಸರ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಯಾರನ್ನೋ ರಕ್ಷಿಸುವುದಕ್ಕಾಗಿ ಈ ರೀತಿ ಮಾಡಿದ್ದಾರೆ ಎಂಬ ಸಂಶಯ ದಟ್ಟವಾಗುತ್ತಿದೆ. ಪೊಲೀಸರು ಅದ್ಹೇಗೆ ಕಟುಕರಂತೆ ಅಷ್ಟು ಅಮಾನವೀಯವಾಗಿ ವರ್ತಿಸಿದರು ಎನ್ನುವ ಪ್ರಶ್ನೆ ಉದ್ಭವಿಸಿದೆ.
ಈ ಮಧ್ಯೆ, ಇಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಂತ್ರಸ್ತೆ ಯುವತಿ ಕುಟುಂಬಸ್ಥರ ಭೇಟಿಗೆ ಮುಂದಾಗಿದ್ದರು. ಹತ್ರಾಸ್ಗೆ ತೆರಳಿದ್ದ ರಾಹುಲ್, ಪ್ರಿಯಾಂಕಾರನ್ನ ಮಾರ್ಗ ಮಧ್ಯೆಯೇ ಪೊಲೀಸರು ತಡೆದಿದ್ದಾರೆ. ಯಮುನಾ ಎಕ್ಸ್ಪ್ರೆಸ್ ಹೈವೇನಲ್ಲಿ ತಳ್ಳಾಟ ನೂಕಾಟದ ವೇಳೆ ರಾಹುಲ್ ನೆಲಕ್ಕೆ ಬಿದ್ದರು. ನಂತರ ಅವರಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಗೆಸ್ಟ್ ಹೌಸ್ ಒಂದರಲ್ಲಿ ಕೂಡಿ ಹಾಕಿದ್ದರು. ಆಮೇಲೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ದೇಶದಲ್ಲಿ ಕೇವಲ ಮೋದಿ ಮಾತ್ರ ಓಡಾಡೋಕೆ ಅವಕಾಶನಾ ಅಂತಾ ಕೆಂಡಕಾರಿದರು.
ಮನುಕುಲವೇ ತಲೆತಗ್ಗಿಸುವಂತೆ ಮಾಡಿ ಜನರ ಎದೆ ನಡುಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಹುಜನ ಸಮಾಜ ಪಕ್ಷದ ಮಾಯಾವತಿ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ವಿರೋಧಪಕ್ಷಗಳ ನಾಯಕರು ಯೋಗಿ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ, ಉತ್ತರಪ್ರದೇಶದ ಬಲರಾಮ್ಪುರದಲ್ಲಿ ಅತ್ಯಾಚಾರಕ್ಕೊಳಗಾದ 22 ವರ್ಷದ ಇನ್ನೊಬ್ಬ ಯುವತಿ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದ್ದು ಯೋಗಿ ಆಡಳಿತದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
Published On - 11:23 pm, Thu, 1 October 20