‘ಟ್ರಂಪ್ ಮುಂದೆ ಶರಣಾಗಬೇಡಿ’; ಯುಪಿಐ ತೆರಿಗೆಗೆ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

2,000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶೇಕಡಾ 0.4ರಷ್ಟು 'ಮರ್ಚೆಂಟ್ ಡಿಸ್ಕೌಂಟ್ ರೇಟ್' ವಿಧಿಸುವ ಕೇಂದ್ರ ಸರ್ಕಾರದ ನೂತನ ಯುಪಿಐ ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಕೆಲವು ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸಲು ಅವಕಾಶ ನೀಡುವ ಸರ್ಕಾರದ ಹೊಸ ನೀತಿಯ ವಿರುದ್ಧ ಕಿಡಿಕಾರಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಅಮೆರಿಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮುಂದೆ 'ಸಂಪೂರ್ಣ ಶರಣಾಗಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

ಟ್ರಂಪ್ ಮುಂದೆ ಶರಣಾಗಬೇಡಿ; ಯುಪಿಐ ತೆರಿಗೆಗೆ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ- ಪ್ರಧಾನಿ ಮೋದಿ
Image Credit source: PTI

Updated on: Sep 16, 2026 | 9:46 PM

ನವದೆಹಲಿ, ಸೆಪ್ಟೆಂಬರ್ 16: ಯುಪಿಐ ವಹಿವಾಟುಗಳ ಮೇಲಿನ ಹೊಸ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (ಎಂಡಿಆರ್​) ಕಟ್ಟುಪಾಡುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರ ಸರ್ಕಾರವು ಅಮೆರಿಕದ ಒತ್ತಡಕ್ಕೆ ಶರಣಾಗಿ ಭಾರತೀಯರ ಮೇಲೆ ಯುಪಿಐ ತೆರಿಗೆ ವಿಧಿಸುತ್ತಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೋ ಸಂದೇಶ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಅಮೆರಿಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮುಂದೆ ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ಇಂದಿರಾ ಗಾಂಧಿಯ ಉದಾಹರಣೆ ನೀಡಿದ ರಾಹುಲ್:

ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, “ಒಮ್ಮೆ ಇಂದಿರಾ ಗಾಂಧಿಯವರನ್ನು ನೀವು ಎಡಪಂಥೀಯರೇ ಅಥವಾ ಬಲಪಂಥೀಯರೇ ಎಂದು ಕೇಳಲಾಗಿತ್ತು. ಅದಕ್ಕೆ ಅವರು ‘ನಾನು ಎಡಕ್ಕೂ ಹೋಗುವುದಿಲ್ಲ, ಬಲಕ್ಕೂ ಹೋಗುವುದಿಲ್ಲ, ನೆಟ್ಟಗೆ ನಿಲ್ಲುತ್ತೇನೆ’ ಎಂದಿದ್ದರು. ಆದರೆ, ಮೋದಿಯವರು ಅದಕ್ಕೆ ಸಂಪೂರ್ಣ ಭಿನ್ನ. ಅವರು ಎಡಕ್ಕೂ ಇಲ್ಲ, ಬಲಕ್ಕೂ ಇಲ್ಲ, ಡೊನಾಲ್ಡ್ ಟ್ರಂಪ್ ಮುಂದೆ ಸಂಪೂರ್ಣವಾಗಿ ಅಡ್ಡಬಿದ್ದು ಶರಣಾಗಲು ನಿರ್ಧರಿಸಿದ್ದಾರೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್​ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್

ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆ:

“ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಮೂಲಕ ಭಾರತೀಯರ ಜೇಬಿಗೆ ಕನ್ನಹಾಕಿ, ಅಮೆರಿಕನ್ ಸಂಸ್ಥೆಗಳಿಗೆ ಹಾಗೂ ಅಮೆರಿಕಕ್ಕೆ ಅಪಾರ ಪ್ರಮಾಣದ ಹಣ ಹರಿದುಹೋಗುವಂತೆ ಮಾಡಲಾಗುತ್ತಿದೆ. ಅಮೆರಿಕದ ಎದುರು ಸಾಷ್ಟಾಂಗ ನಮಸ್ಕಾರ ಮಾಡುವುದನ್ನು ನಿಲ್ಲಿಸಿ, ಸ್ವಲ್ಪ ಬೆನ್ನೆಲುಬು ಪ್ರದರ್ಶಿಸಿ ದೇಶದ ಜನರ ಮೇಲಿನ ಈ ಹೊಸ ಯುಪಿಐ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಗ್ರಾಹಕರೋ ವ್ಯಾಪಾರಿಗಳೋ? ಇಲ್ಲಿದೆ ಉತ್ತರ

ಏನಿದು ಹೊಸ ಯುಪಿಐ ನಿಯಮ?:

ರಾಷ್ಟ್ರೀಯ ಪಾವತಿ ನಿಗಮದ ಅಧಿಸೂಚನೆ ಪ್ರಕಾರ, 2,000 ರೂ.ಗಿಂತ ಹೆಚ್ಚಿನ ವ್ಯಾಪಾರ- ವಹಿವಾಟುಗಳ ಮೇಲೆ ಶೇ. 0.4ರಷ್ಟು MDR ಶುಲ್ಕ ಅನ್ವಯಿಸಲಿದೆ. 75,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ದೊಡ್ಡ ವಹಿವಾಟುಗಳಿಗೆ ಈ ಶುಲ್ಕವನ್ನು ಗರಿಷ್ಠ ರೂ. 300ಕ್ಕೆ ಸೀಮಿತಗೊಳಿಸಲಾಗಿದೆ. ಈ ಶುಲ್ಕವನ್ನು ನೇರವಾಗಿ ಗ್ರಾಹಕರಿಂದ ವಸೂಲಿ ಮಾಡುವುದಿಲ್ಲ, ಬದಲಾಗಿ ವ್ಯಾಪಾರಿಗಳಷ್ಟೇ ಪಾವತಿಸಲಿದ್ದಾರೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಸಾಮಾನ್ಯ ಯುಪಿಐ ಪಾವತಿಗಳು ಸಂಪೂರ್ಣ ಉಚಿತವಾಗಿರಲಿವೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಆದರೆ, ಸರ್ಕಾರವು ನೇರವಾಗಿ ಗ್ರಾಹಕರಿಗೆ ವಿಧಿಸುವುದಿಲ್ಲ ಎಂದಿದ್ದರೂ, ವ್ಯಾಪಾರಿಗಳು ಅಂತಿಮವಾಗಿ ವಸ್ತುಗಳ ಬೆಲೆ ಏರಿಸಿ ಈ ವೆಚ್ಚವನ್ನು ಗ್ರಾಹಕರ ಮೇಲೆಯೇ ಹೊರಿಸಲಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Wed, 16 September 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us