ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವೆಡೆ ಭಾರೀ ಮಳೆ (Heavy rains) ಆಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ನಗರಗಳು ಜಲಾವೃತಗೊಂಡ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ಜೊತೆಗೆ ಮುಂಗಾರು ಮಳೆಯಿಂದಾಗಿ ರೈಲ್ವೆ ಸಂಚಾರಕ್ಕೂ ಹೊಡೆತ ಬಿದ್ದಿದೆ. ಉತ್ತರ ರೈಲ್ವೆ ಭಾನುವಾರ ಸುಮಾರು 17 ರೈಲುಗಳ ಸಂಚಾರ ರದ್ದುಗೊಳಿಸಿದ್ದು, ಸುಮಾರು 12 ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.
ಭಾರೀ ಮಳೆಯಿಂದಾಗಿ ಎಲ್ಲೆಡೆ ಜಲಾವೃತಗೊಂಡ ಕಾರಣ ನಾಲ್ಕು ಸ್ಥಳಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಇದನ್ನೂ ಓದಿ: ಮುಂದುವರೆದ ಮಳೆ, ನಾಳೆ ದೆಹಲಿಯಲ್ಲಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿಯಲ್ಲಿ ಕಳೆದ 40 ವರ್ಷಗಳ ಬಳಿಕ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆಯಾದ ಪರಿಣಾಮ ರಸ್ತೆಗಳು ಮತ್ತು ಅಂಡರ್‌ಪಾಸ್ ಮುಳುಗಿ ಹೋಗಿವೆ. ಕೆಲವೆಡೆ ಅಂಗಡಿ, ಮನೆಗಳಿಗೂ ನೀರು ನುಗ್ಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ದೆಹಲಿಯಿಂದ ಸಂಚರಿಸುವ ರೈಲುಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.
Due to heavy rain, following trains are cancelled, diverted and short terminated or short originated. pic.twitter.com/hlRGbIjd9L
— DRM Ferozpur NR (@drm_fzr) July 9, 2023
ದೆಹಲಿ-ಸಬ್ಜಿ ಮಂಡಿ ಪ್ರದೇಶ ಮತ್ತು ನಿಲ್ದಾಣದ ತರಬೇತಿ ಪ್ರದೇಶದಲ್ಲಿ ಎಂಟು ಪಂಪ್ಗಳ ಮೂಲಕ ಹಳಿಗಳಲ್ಲಿ ತುಂಬಿಕೊಂಡ ನೀರನ್ನು ತೆಗೆಯಲಾಗುತ್ತಿದ್ದು, ರದ್ದುಗೊಳಿಸಿದ ರೈಲುಗಳನ್ನು ಬಿಟ್ಟು ಇತರೆ ರೈಲುಗಳ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ.
ಫಿರೋಜ್‌ಪುರ ಕ್ಯಾಂಟ್ ಎಕ್ಸ್‌ಪ್ರೆಸ್, ಅಮೃತಸರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಚಂಡೀಗಢ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮತ್ತು ಚಂಡೀಗಢದಿಂದ ಅಮೃತಸರ ಜಂಕ್ಷನ್ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದು ಮಾಡಿದರೆ, ಮುಂಬೈ ಸೆಂಟ್ರಲ್‌ಗೆ ಅಮೃತಸರ ಎಕ್ಸ್‌ಪ್ರೆಸ್, ಅಮೃತಸರ ಎಕ್ಸ್‌ಪ್ರೆಸ್, ದೌಲತ್‌ಪುರ್ ಚೌಕ್ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗ ಬದಲಾವಣೆ ಮಾಡಲಾಗಿದೆ. ಮಳೆಯಿಂದಾಗಿ ಹವಾಮಾನ ಹದಗೆಟ್ಟ ಹಿನ್ನೆಲೆ ಶಿಮ್ಲಾ-ಕಲ್ಕಾ ಮಾರ್ಗದ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: West Bengal: ಹಿಂಸಾಚಾರ ಹಿನ್ನೆಲೆ ಪಶ್ಚಿಮ ಬಂಗಾಳದ 604 ಪಂಚಾಯತ್ ಬೂತ್‌ಗಳಲ್ಲಿ ಮರು ಮತದಾನ
ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 153 ಮಿಮೀ ದಾಖಲೆಯ ಮಳೆಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.