ರಸ್ತೆಯಲ್ಲಿ ಮಿನಿ ಸ್ವಿಮಿಂಗ್ ಪೂಲ್ ನಿರ್ಮಾಣ; ರಕ್ಕಸ ಮಳೆಗೆ ರಾಜಧಾನಿ ದೆಹಲಿಯ ನಡುರಸ್ತೆಯಲ್ಲಿ ಬೃಹತ್ ಗುಂಡಿ

ರಸ್ತೆಯಲ್ಲಿ ಮಿನಿ ಸ್ವಿಮಿಂಗ್ ಪೂಲ್ ನಿರ್ಮಾಣ; ರಕ್ಕಸ ಮಳೆಗೆ ರಾಜಧಾನಿ ದೆಹಲಿಯ ನಡುರಸ್ತೆಯಲ್ಲಿ ಬೃಹತ್ ಗುಂಡಿ

ಹರೀಶ್ ಜಿ.ಆರ್​. ನವದೆಹಲಿ
| Updated By: ಆಯೇಷಾ ಬಾನು

Updated on: Jul 10, 2023 | 7:59 AM

ಉತ್ತರ ಭಾರತದಲ್ಲಿ ವರುಣಾರ್ಭಟ ಮುಂದುವರೆದಿದೆ. ಈಗಾಗಲೇ ನದಿಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ದಾಖಲೆ ಮಳೆಗೆ ಅಕ್ಷರಶಃ ತತ್ತರಿಸಿದ ದೆಹಲಿ ನಗರ. ದೆಹಲಿಯ ರೋಹಿಣಿ ಪ್ರದೇಶದಲ್ಲಿ ರಸ್ತೆ ಕುಸಿತ. ಭಾರಿ ಪ್ರಮಾಣದಲ್ಲಿ ಕುಸಿದಿರುವ ರಸ್ತೆ.

ಕಳೆದ ಎರಡು ದಿನಗಳಿಂದ ಉತ್ತರ ಭಾರತದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ದೆಹಲಿ, ಪಂಜಾಬ್, ಹರಿಯಾಣ, ಉತ್ತರಖಂಡ, ಉತ್ತರಪ್ರದೇಶ, ಜಮ್ಮುಕಾಶ್ಮೀರದಲ್ಲಿ ನಿರಂತರ ಮಳೆ‌ಸುರಿಯುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ 40 ವರ್ಷಗಳಲ್ಲಿಯೇ ದಾಖಲೆಯ ಮಳೆ ಸುರಿದಿದೆ. ಜುಲೈನಲ್ಲಿ ಒಂದೇ ದಿನ ಅತೀ ಹೆಚ್ಚು ಪ್ರಮಾಣ ಮಳೆ‌ ಸುರಿದು 40 ವರ್ಷಗಳ ದಾಖಲೆ ಮುರಿದಿದೆ. ರಕ್ಕಸ ಮಳೆಗೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ರಸ್ತೆ ಕುಸಿದಿದೆ.

ದೆಹಲಿ ರಾಷ್ಟ್ರ ರಾಜಧಾನಿಯ ವಲಯದಲ್ಲಿ ಹೆಚ್ಚು ಮಳೆ ಸುರಿಯಿತ್ತಿರುವುದಿಂದ ಇಂದು ಶಾಲೆಗಳಿಗೆ ಸರಕಾರ ರಜೆ ಘೋಷಿಸಿದೆ. ದೆಹಲಿ, ನೋಯ್ಡಾ ಮತ್ತು ಗುರುಗ್ರಾಮ್‌ನ ಅಧಿಕಾರಿಗಳು ರಜೆ ಘೋಷಿಸಿದ್ದಾರೆ. ದೆಹಲಿಯ ಕನ್ನಾಟ್ ಪ್ಲೇಸ್, ಪ್ರಗತಿ ಮೈದಾನದಿಂದ ಲುಟ್ಯೆನ್ಸ್ ದೆಹಲಿ ಮತ್ತು ಮಜ್ನು ಕಾ ತಿಲಾ ಸೇರಿದಂತೆ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಐಟಿಒ, ಮಜ್ನು ಕಾ ತಿಲಾ, ರೋಹ್ಟಕ್ ರಸ್ತೆ, ರಿಂಗ್ ರಸ್ತೆ, ಪಾಂಡವ್ ನಗರ ಅಂಡರ್‌ಪಾಸ್, ಪುರಾನ ಕಿಲಾ ರಸ್ತೆ, ಸರಿತಾ ವಿಹಾರ್ ಚೌಕ್ ಮತ್ತು ಮಥುರಾ ರಸ್ತೆಯ ಪ್ರಗತಿ ಮೈದಾನದಲ್ಲಿ ಕೂಡ ಪ್ರವಾಹ ಪರಿಸ್ಥಿತಿ ಇದೆ.

ದೆಹಲಿಗೆ ಯಮುನ ನದಿಯ ಪ್ರವಾಹದ‌ ಭೀತಿ ಎದುರಾಗಿದೆ. ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಗೆ ಹರಿಯಾಣದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದ್ದರಿಂದ ದೆಹಲಿ ಸರ್ಕಾರ ಪ್ರವಾಹದ ಎಚ್ಚರಿಕೆ ನೀಡಿದೆ. ಇದು ಮೊದಲ ಎಚ್ಚರಿಕೆ ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ತಿಳಿಸಿದೆ.