ದಕ್ಷಿಣ ಭಾರತದಲ್ಲಿ ಮುಂದಿನ ಮೂರು ದಿನಗಳ ಕಾಲ ವಿಪರೀತ ಮಳೆ: ಹವಾಮಾನ ಇಲಾಖೆ ವರದಿ

| Updated By: Lakshmi Hegde

Updated on: Oct 03, 2021 | 3:25 PM

Cyclone Shaheen: ತಮಿಳುನಾಡಿನ ಕೊಯಂಬತ್ತೂರ್​, ಸೇಲಂ, ಧರ್ಮಪುರಿ, ಪೇರಂಬೂರ್​ ಸೇರಿ ದಕ್ಷಿಣದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಅತ್ಯಂತ ಹೆಚ್ಚು ಮಳೆ ಬೀಳುವ ನಿರೀಕ್ಷೆ ಇದೆ.

ದಕ್ಷಿಣ ಭಾರತದಲ್ಲಿ ಮುಂದಿನ ಮೂರು ದಿನಗಳ ಕಾಲ ವಿಪರೀತ ಮಳೆ: ಹವಾಮಾನ ಇಲಾಖೆ ವರದಿ
ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿರುವುದು
Follow us on

ದಕ್ಷಿಣ ಭಾರತದ ಹಲವು ಕಡೆ ಮುಂದಿನ ಮೂರು ದಿನಗಳ ಕಾಲ ಸಿಕ್ಕಾಪಟೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಶಾಹೀನ್​ ಚಂಡಮಾರುತ ಒಮಾನ್​​ ಕಡೆಗೆ ಸ್ಥಿರವಾಗಿ ಚಲಿಸುತ್ತಿರುವ ಕಾರಣ, ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಪರೀತ ಮಳೆಯಾಗಲಿದೆ ಎಂದು ಐಎಂಡಿ ತನ್ನ ಹೊಸ ಬುಲೆಟಿನ್​​ನಲ್ಲಿ ಹೇಳಿದೆ. ಮಹಾರಾಷ್ಟ್ರ ಮತ್ತು ಗೋವಾವನ್ನೊಳಗೊಂಡ ಕೊಂಕಣ ತೀರದ ಪ್ರದೇಶಗಳಲ್ಲೂ ಸಹ ಅಕ್ಟೋಬರ್​ 3ರಿಂದ 6ರವರೆಗೆ ತೀವ್ರ ಮಳೆಯಾಗಲಿದೆ.

ಕೇರಳದ ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ
ಕೇರಳದಲ್ಲಿ ಮಂಗಳವಾರದವರೆಗೆ ಸಿಕ್ಕಾಪಟೆ ಮಳೆಯಾಗಲಿದೆ ಎಂದು ಹೇಳಿರುವ ಕೇಂದ್ರ ಹವಾಮಾನ ಇಲಾಖೆ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯಾನಾಡ್​ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ ಮಾಡಿದೆ.  ಕೇರಳದ ಉತ್ತರ ಭಾಗಗಳಲ್ಲಿ ವಿಪರೀತ ಮಳೆಯಿಂದ ಈಗಾಗಲೇ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಾಗೇ ಕೋಯಿಕ್ಕೋಡ್​-ವಯಾನಾಡ್​ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅದರೊಂದಿಗೆ ಕಾಸರಗೋಡಿನ ಬೆಟ್ಟಗಳಲ್ಲಿ ಭೂಕುಸಿತವೂ ಉಂಟಾಗಿದೆ.

ದಕ್ಷಿಣ ತಮಿಳುನಾಡಿನಲ್ಲಿ ಗುಡುಗು ಸಹಿತ ಮಳೆ
ತಮಿಳುನಾಡಿನ ಕೊಯಂಬತ್ತೂರ್​, ಸೇಲಂ, ಧರ್ಮಪುರಿ, ಪೇರಂಬೂರ್​ ಸೇರಿ ದಕ್ಷಿಣದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಅತ್ಯಂತ ಹೆಚ್ಚು ಮಳೆ ಬೀಳುವ ನಿರೀಕ್ಷೆ ಇದೆ ಎಂದು ಚೆನ್ನೈನ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ತಮಿಳುನಾಡಿನ ಉತ್ತರ ಒಳನಾಡು ಮತ್ತು ಕರಾವಳಿ ತೀರಗಳಲ್ಲಿ ನಾಳೆ (ಅಕ್ಟೋಬರ್​4)  ಹೆಚ್ಚಿನ ಮಳೆ ಬೀಳಬಹುದು ಎಂದೂ ಹೇಳಲಾಗಿದೆ.  ಅದರಂತೆ ಕರ್ನಾಟಕದ ಕರಾವಳಿ ಭಾಗಗಳಲ್ಲೂ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದ್ದು, ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ.

ನಾಳೆ ಒಮಾನ್​ ಕರಾವಳಿ ದಾಟಳಿರುವ ಶಾಹೀನ್​
ಶಾಹೀನ್​ ಚಂಡಮಾರುತ ಅಕ್ಟೋಬರ್​ 4ರ ಮುಂಜಾನೆ ಹೊತ್ತಲ್ಲಿ ಒಮಾನ್​ ಕರಾವಳಿಯನ್ನು ದಾಟಲಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 80-90 ಕಿಮೀ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗೇ, ಒಮಾನ್ ಕರಾವಳಿ ತೀರದ ನಿವಾಸಿಗಳಿಗೆ ಅದಾಗಲೇ ಎಚ್ಚರಿಕೆ ನೀಡಲಾಗಿದ್ದು, ಸಾದ್ಯವಾದಷ್ಟು ಬೇಗ ಬೇರೆಕಡೆಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.

ಇದನ್ನೂ ಓದಿ: Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ

ಪರಿಸರ ಶಾಲೆಯೆಂದೇ ಖ್ಯಾತಿ ಗಳಿಸಿದೆ ವಿಜಯಪುರದ ಸರ್ಕಾರಿ ಶಾಲೆ; ತಮ್ಮ ಮಕ್ಕಳು ಇಲ್ಲೇ ಓದಬೇಕು ಅಂತಾರೆ ಪೋಷಕರು