ಪರಿಸರ ಶಾಲೆಯೆಂದೇ ಖ್ಯಾತಿ ಗಳಿಸಿದೆ ವಿಜಯಪುರದ ಸರ್ಕಾರಿ ಶಾಲೆ; ತಮ್ಮ ಮಕ್ಕಳು ಇಲ್ಲೇ ಓದಬೇಕು ಅಂತಾರೆ ಪೋಷಕರು
ಸರ್ಕಾರಿ ಶಾಲೆಗಳೆಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಬಾಗಿಲು, ಇಟಕಿಗಳಿರಲ್ಲ. ಮೂಲ ಸೌಕರ್ಯಗಳಿರಲ್ಲ. ಸರಿಯಾಗಿ ಶಿಕ್ಷಕರ ನೇಮಕವಾಗಿರಲ್ಲ ಅಂತ ಬಹುತೇಕ ಪಾಲಕರು ಕಷ್ಟಪಟ್ಟಾದರೂ ತಮ್ಮ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ, ಕಾನ್ವೆಂಟ್ಗಳಲ್ಲಿ ಅಡ್ಮಿಷನ್ ಮಾಡಿಸುತ್ತಾರೆ.
ವಿಜಯಪುರ: ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲೆಂದು ಖಾಸಗಿ ಶಾಲೆಗಳ ಮೊರೆ ಹೋಗುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ಶುಲ್ಕ ನೀಡುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾದಂತೆ ಜಿಲ್ಲೆಯ ಸರ್ಕಾರಿ ಮಾಧ್ಯಮಿಕ ಶಾಲೆಯೊಂದರಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದು ಪೋಷಕರು ಆಸೆ ಪಡುತ್ತಾರೆ. ಖಾಸಗಿ ಶಾಲೆ ಬೇಡಾ, ನಮಗೆ ಇದೇ ಸರ್ಕಾರಿ ಶಾಲೆ ಬೇಕೆಂದು ವಿದ್ಯಾರ್ಥಿಗಳು ಕೂಡಾ ದುಂಬಾಲು ಬೀಳುತ್ತಾರೆ.
ಸರ್ಕಾರಿ ಶಾಲೆಗಳೆಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಬಾಗಿಲು, ಇಟಕಿಗಳಿರಲ್ಲ. ಮೂಲ ಸೌಕರ್ಯಗಳಿರಲ್ಲ. ಸರಿಯಾಗಿ ಶಿಕ್ಷಕರ ನೇಮಕವಾಗಿರಲ್ಲ ಅಂತ ಬಹುತೇಕ ಪಾಲಕರು ಕಷ್ಟಪಟ್ಟಾದರೂ ತಮ್ಮ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ, ಕಾನ್ವೆಂಟ್ಗಳಲ್ಲಿ ಅಡ್ಮಿಷನ್ ಮಾಡಿಸುತ್ತಾರೆ. ಆದರೆ ಈ ಸಮಸ್ಯೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿಲ್ಲ. ಭೀಮಾತೀರದಲ್ಲಿರುವ ನಾದ ಕೆಡಿ ಗ್ರಾಮದ ಹೊರ ಭಾಗದಲ್ಲಿರುವ ಶಾಲೆಯನ್ನು ಪ್ರವೇಶ ಮಾಡಬೇಕಾದರೆ ಹಸಿರು ವನಸಿರಿಯನ್ನು ದಾಟಿಕೊಂಡು ಮುಂದೆ ಹೋಗಬೇಕು. ಹಸಿರು ಗಿಡ ಮರಗಳ ಮಧ್ಯೆ ಶಾಲೆಯ ಕಟ್ಟಡ ಕಾಣ ಸಿಗುತ್ತದೆ. ಎರಡು ಎಕರೆ ಜಾಗದಲ್ಲಿ 2007 ರಲ್ಲಿ ನಿರ್ಮಾಣವಾದ ಈ ಶಾಲೆ ಇದೀಗ ಪರಿಸರ ಶಾಲೆಯೆಂದೇ ಖ್ಯಾತಿಗೆ ಪಾತ್ರವಾಗಿದೆ.
ಮರ ಗಿಡಗಳು 2010 ರಿಂದ ಇಲ್ಲಿನ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಬಿಂದಿಗೆಯಲ್ಲಿ ನೀರನ್ನು ತಂದು ಸಸಿಗಳನ್ನು ಪೋಷಣೆ ಮಾಡಿದ್ದಾರೆ. ಸದ್ಯ ಶಾಲೆಯ ಆವರಣದಲ್ಲಿ 701 ವಿವಿಧ ಮರ ಗಿಡಗಳು ಕಾಣ ಸಿಗುತ್ತವೆ. 2013ರ ಬರಗಾಲದ ಸಮಯದಲ್ಲಿ ಸಸಿಗಳನ್ನು, ಪುಟ್ಟ ಪುಟ್ಟ ಮರಗಳನ್ನು ಉಳಿಸಲು ಪಟ್ಟ ಪರಿಶ್ರಮ ಅಪಾರ. ಸದ್ಯ ಕೊಳವೆ ಬಾವಿ ಕೊರೆಸಲಾಗಿದ್ದು, ನೀರಿನ ಕೊರತೆ ಇಲ್ಲದಾಗಿದೆ.
ಬರೀ ಮರಗಳು ಮಾತ್ರವಲ್ಲ, ಶಾಲೆಯ ಆವರಣದಲ್ಲಿ ಸಾವಯವ ಗೊಬ್ಬರ ತಯಾರಿಕೆ ಹಾಗೂ ಮಳೆ ಕೊಯ್ಲು ಮಾಡಲಾಗಿದ್ದು, ಸಾವಯವ ಗೊಬ್ಬರನ್ನು ಮರಗಳಿಗೆ ಹಾಕಲಾಗುತ್ತದೆ. ಮಳೆ ನೀರು ಕೊಯ್ಲು ಕೊಳವೆ ಬಾವಿಯ ಅಂತರ್ಜಲ ಮಟ್ಟ ಕಾಪಾಡಲು ಸಹಾಯಕವಾಗಿದೆ. ಇವೆಲ್ಲದರ ಫಲವಾಗಿ ಶಾಲೆಗೆ ಹಳದಿ ಪರಿಸರ ಪ್ರಶಸ್ತಿ, ಹಸಿರು ಮಿತ್ರ ಪರಿಸರ ಶಾಲೆ, ಪರಿಸರ ಮಿತ್ರ ಶಾಲೆ ಹಾಗೂ ಇಂಡಿ ತಾಲೂಕಿನ ಉತ್ತಮ ಶಾಲೆ ಎಂಬ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಇದು ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆ ಹಸಿರು ಶಾಲೆ, ಪರಿಸರ ಸ್ನೇಹಿ ಶಾಲೆಯಾಗಿ ನಿರ್ಮಾಣವಾಗಿದೆ. ಸುತ್ತಮುತ್ತಲ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ನಾದ ಕೆಡಿ ಗ್ರಾಮದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಪೋಷಕರು ಸಹ ತಮ್ಮ ಮಕ್ಕಳು ಇಲ್ಲಿಯೇ ವಿದ್ಯಾಭ್ಯಾಸ ಮಾಡಬೇಕು ಅಂತಾರೆ. 2007ರಲ್ಲಿ 30 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ ಇದೀಗ ಒಂದೊಂದು ತರಗತಿಯಲ್ಲಿ 140 ಕ್ಕೂ ಆಧಿಕ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಒಂದೊಂದು ತರಗತಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಇಂಡಿ ತಾಲೂಕಿನಲ್ಲಿಯೇ ಉತ್ತಮ ಸರ್ಕಾರಿ ಶಾಲೆ ಎಂಬ ಗರಿಮೆ ನಾದ ಕೆಡಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಗಿದೆ. ಜೊತೆಗೆ ಇತರೆ ಖಾಸಗಿ ಶಾಲೆಗಳಿಗೆ ಸಖತ್ ಪೈಪೋಟಿ ನೀಡುತ್ತಿದೆ. ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿಯೂ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಈ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತಿದ್ದಾರೆ.
ವರದಿ: ಅಶೋಕ ಯಡಳ್ಳಿ
ಇದನ್ನೂ ಓದಿ
‘ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವವರ ಮೇಲೆ ದಯೆ ತೋರಬೇಡಿ’; ನಾಗ ಚೈತನ್ಯಗೆ ಕಂಗನಾ ಟಾಂಟ್
‘ಕರ್ನಾಟಕ ಬಿಟ್ಟು ಹೋಗುತ್ತೇನೆ, ಯಾರ ಕಣ್ಣಿಗೂ ಕಾಣಿಸಲ್ಲ’; ನಟಿ ವಿಜಯಲಕ್ಷ್ಮೀ ಬಹಿರಂಗ ಹೇಳಿಕೆ