ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿದ್ದು ಹಲವೆಡೆ ಭೂಕುಸಿತ ಸಂಭವಿಸಿದೆ. ಕಳೆದ ರಾತ್ರಿಯಿಂದೀಚೆಗೆ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ನೈಸರ್ಗಿಕ ವಿಕೋಪದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಕುಲು ಜಿಲ್ಲೆಯ ಮಲಾನಾ ಮತ್ತು ಮಣಿಕರಣ್ ಪ್ರದೇಶಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಜಿಲ್ಲೆಯಲ್ಲಿ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯು ಮುಂದುವರಿಯಲಿದೆ. ಗುಡ್ಡಗಾಡು ಪ್ರದೇಶದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರಲಿದೆ. ಎತ್ತರದ ಪ್ರದೇಶಗಳಲ್ಲಿ ಸಿಡಿಲಿನ ಅಪಾಯವಿದೆ ಎಂದು ರಾಜ್ಯದ ಅಧಿಕಾರಿಗಳು ಹೇಳಿದ್ದಾರೆ. ಧಲ್ಲಿ ಸುರಂಗದಲ್ಲಿ ಭೂಕುಸಿತ ಸಂಭವಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳೆಲ್ಲರೂ ವಲಸೆ ಕಾರ್ಮಿಕರಾಗಿದ್ದು, ರಸ್ತೆಬದಿಯ ಟೆಂಟ್ನಲ್ಲಿ ಮಲಗಿದ್ದರು. ಗಾಯಾಳುಗಳನ್ನು ತಕ್ಷಣವೇ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಭೂಕುಸಿತದ ಅವಶೇಷಗಳಿಂದ ಹಲವು ವಾಹನಗಳು ಜಖಂಗೊಂಡಿವೆ.
ಕುಲು ಮತ್ತು ಕಿನೌರ್ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ವರದಿಯಾಗಿದೆ. ಘಟನೆಯಲ್ಲಿ ಕನಿಷ್ಠ ನಾಲ್ವರು ವ್ಯಕ್ತಿಗಳು ಮೃತಪಟ್ಟಿದ್ದು, ಐದು ಜಾನುವಾರುಗಳು ಕೊಚ್ಚಿಹೋಗಿವೆ. ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ.
ಮಲಾನಾ ವಿದ್ಯುತ್ ಘಟಕದಲ್ಲಿ ಸುಮಾರು 30 ನೌಕರರು ಕೆಲಸ ಮಾಡುತ್ತಿದ್ದರು. ಹಠಾತ್ ಪ್ರವಾಹದಿಂದ ಹಾನಿಗೀಡಾದ ಕಟ್ಟಡದಲ್ಲಿ ಸಿಲುಕಿದ್ದ ಈ ನೌಕರರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಮಣಿಕರ್ಣಾ ಕಣಿವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಲಾರ್ಜಿ, ಪಾಂಡೋ ಮತ್ತು ಬಿಲಾಸಪುರ ವಲಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
#WATCH | Himachal Pradesh: Flash flood hits Manikaran valley of Kullu district due to heavy rainfall, dozens of houses and camping sites damaged in Choj village: SP Kullu Gurdev Sharma pic.twitter.com/NQhq8o8JXC
— ANI (@ANI) July 6, 2022
Published On - 12:42 pm, Wed, 6 July 22