ನಮಗೆ ಮಾಹಿತಿ ನೀಡದೆ ರೇಜರ್ ಪೇ ಪೊಲೀಸರೊಂದಿಗೆ ವಹಿವಾಟು ವಿವರ ಹಂಚಿಕೊಂಡಿದೆ: ಆಲ್ಟ್ನ್ಯೂಸ್ ಆರೋಪ
ದೆಹಲಿ ಪೊಲೀಸರು ಬಂಧಿತನಾಗಿರುವ ಆಲ್ಟ್ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಮತ್ತು ಆಲ್ಟ್ ನ್ಯೂಸ್ ಪಡೆದಿರುವ ದೇಣಿಗೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ
ದೆಹಲಿ: ತಮಗೆ ಮಾಹಿತಿ ನೀಡದೆಯೇ ಪೇಮೆಂಟ್ ಗೇಟ್ವೇ ರೇಜರ್ಪೇ (Razorpay) ಪೊಲೀಸರಿಗೆ ವಹಿವಾಟು ವಿವರ ಹಂಚಿಕೊಂಡಿದೆ ಎಂದು ಫ್ಯಾಕ್ಟ್ ಚೆಕ್ ವೆಬ್ಸೈಟ್ ಆಲ್ಟ್ನ್ಯೂಸ್ (Alt News) ಆರೋಪ ಮಾಡಿದೆ. ಆಲ್ಟ್ ನ್ಯೂಸ್ ಮಾಡಿದ ನಿರ್ದಿಷ್ಟ ಆರೋಪವನ್ನು ಉಲ್ಲೇಖಿಸದೆ ಹೇಳಿಕೆ ನೀಡಿರುವ ರೇಜರ್ ಪೇ, ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಕಾನೂನು ಅಧಿಕಾರಿಗಳ ನೀಡಿದ ಲಿಖಿತ ಆದೇಶವನ್ನು ಪಾಲಿಸುವುದು ಕಡ್ಡಾಯವಾಗಿತ್ತು ಎಂದು ಹೇಳಿದೆ. ಪೊಲೀಸರ ಮನವಿ ಮೇರೆಗೆ ರೇಜರ್ ಪೇ ತಮ್ಮ ಡೊನೇಷನ್ ಪ್ಲಾಟ್ ಫಾರ್ಮ್ ನಲ್ಲಿ ಆಲ್ಟ್ನ್ಯೂಸ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದು ನಂತರ ಸಕ್ರಿಯಗೊಳಿಸಿತ್ತು. ಕೆಲವು ಸ್ಪಷ್ಟತೆ ಸಿಕ್ಕಿದ ನಂತರವೇ ಖಾತೆಯನ್ನು ಆಕ್ಟಿವೇಟ್ ಮಾಡಲಾಗಿದೆ ಎಂದು ರೇಜರ್ಪೇ ಹೇಳಿದ್ದು, ಆದಾಗ್ಯೂ ಯಾವುದರ ಬಗ್ಗೆ ಸ್ಪಷ್ಟತೆ ಎಂದು ಅದು ಹೇಳಿಲ್ಲ ಎಂಬುದಾಗಿ ಎಂದು ಆಲ್ಟ್ ನ್ಯೂಸ್ ಹೇಳಿಕೆ ನೀಡಿದೆ. ಅದೇ ವೇಳೆ ತಮ್ಮ ವಹಿವಾಟು ವಿವರವನ್ನು ರೇಜರ್ಪೇ ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಆಲ್ಟ್ ನ್ಯೂಸ್ ಆರೋಪಿಸಿದೆ. ನಮಗೆ ಮಾಹಿತಿ ನೀಡದೇ, ಆಲ್ಟ್ ನ್ಯೂಸ್ ಕಡೆಯಿಂದ ಯಾವುದಾದರೂ ಉಲ್ಲಂಘನೆ ಆಗಿದ್ದರೆ ಅದ ವಿಚಾರಣೆ ನಡೆಸದೆಯೇ ಈ ಕೆಲಸ ಮಾಡಲಾಗಿದೆ ಎಂದು ಆಲ್ಟ್ ನ್ಯೂಸ್ ಆಕ್ರೋಶ ವ್ಯಕ್ತಪಡಿಸಿದೆ .
ದೆಹಲಿ ಪೊಲೀಸರು ಬಂಧಿತನಾಗಿರುವ ಆಲ್ಟ್ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಮತ್ತು ಆಲ್ಟ್ ನ್ಯೂಸ್ ಪಡೆದಿರುವ ದೇಣಿಗೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆಲ್ಟ್ ನ್ಯೂಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ರೇಜರ್ಪೇ, ಸಿಆರ್ಪಿಸಿ ಸೆಕ್ಷನ್ 91ರ ಅಡಿಯಲ್ಲಿ ನಾವು ಕಾನೂನು ಅಧಿಕಾರಿಗಳಿಂದ ಲಿಖಿತ ಆದೇಶವನ್ನು ಪಡೆದಿದ್ದೇವೆ. ಕಾನೂನು ರೀತಿಯಲ್ಲಿ ನಾವು ಅದನ್ನು ಪಾಲಿಸಲೇ ಬೇಕಿತ್ತು ಎಂದು ಹೇಳಿದೆ.
ನಾವು ಡೇಟಾ ಸುರಕ್ಷತೆ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದು ನಮ್ಮ ಗ್ರಾಹಕರ ಮಾಹಿತಿಯನ್ನು ಕಾಪಾಡುತ್ತೇವೆ. ಭಾರತದಲ್ಲಿನ ಕಾನೂನು ಮತ್ತು ನಿಯಂತ್ರಣಗಳನ್ನು ನಾವು ಪಾಲಿಸುತ್ತೇವೆ ಎಂದು ರೇಜರ್ಪೇ ಹೇಳಿದೆ. ಭಾರತೀಯ ಬ್ಯಾಂಕ್ ಖಾತೆಗಳಿಂದ ಮಾತ್ರ ದೇಣಿಗೆ ನೀಡಬಹುದು. ರೇಜರ್ ಪೇಯಲ್ಲಿ ವಿದೇಶಿ ಕ್ರೆಡಿಟ್ ಕಾರ್ಡ್ ನಿಂದ ಪಾವತಿ ಮಾಡುವಂತೆ ಮಾಡಲಾಗಿಲ್ಲ. ಹಾಗಾಗಿ ವಿದೇಶದಿಂದ ಆಲ್ಟ್ ನ್ಯೂಸ್ ದೇಣಿಗೆ ಪಡೆದಿದೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ಆಲ್ಟ್ ನ್ಯೂಸ್ ಹೇಳಿದೆ .
ಆದಾಗ್ಯೂ, ಪರ್ಯಾಯ ವ್ಯವಸ್ಥೆಯನ್ನು ನಾವು ನೋಡುತ್ತಿದ್ದರೂ ಸದ್ಯ ನಾವು ರೇಜರ್ ಪೇಯನ್ನೇ ಡೊನೇಷನ್ ಫ್ಲಾಟ್ ಫಾರ್ಮ್ ಆಗಿ ಬಳಸುತ್ತಿದ್ದೇವೆ ಎಂದಿದೆ ಆಲ್ಟ್ ನ್ಯೂಸ್.
Published On - 2:42 pm, Wed, 6 July 22