ಹಿಮಾಚಲದಲ್ಲಿ 122 ವರ್ಷದ ದಾಖಲೆ ಮಳೆ; ವರ್ಷಧಾರೆಗೆ ಮಗು ಸೇರಿದಂತೆ 11 ಮಂದಿ ಬಲಿ

| Updated By: Ganapathi Sharma

Updated on: Aug 24, 2023 | 4:53 PM

Himachal Pradesh rains; ಕಂಗ್ರಾ ಜಿಲ್ಲೆಯ ಕೋಟ್ಲಾದಲ್ಲಿ ಭೂಕುಸಿತದಿಂದ ಮನೆಗಳಲ್ಲಿ ಒಂದು ಅಡಿಯಷ್ಟು ನೀರು ಮತ್ತು ಕೆಸರು ತುಂಬಿದೆ. ಏಳು ಮನೆಗಳು ಅಸುರಕ್ಷಿತವೆಂದು ಘೋಷಿಸಲಾಗಿದೆ. 30 ಮನೆಗಳನ್ನು ತೆರವು ಮಾಡಲಾಗಿದೆ. ಶಿಮ್ಲಾ ಪಟ್ಟಣದಲ್ಲಿಯೂ ಮರಗಳು ಮತ್ತು ಭೂಕುಸಿತದಿಂದಾಗಿ ಮುಖ್ಯ ರಸ್ತೆಗಳು ಸೇರಿದಂತೆ ಹತ್ತಾರು ಸಂಪರ್ಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.

ಹಿಮಾಚಲದಲ್ಲಿ 122 ವರ್ಷದ ದಾಖಲೆ ಮಳೆ; ವರ್ಷಧಾರೆಗೆ ಮಗು ಸೇರಿದಂತೆ 11 ಮಂದಿ ಬಲಿ
ಶಿಮ್ಲಾದಲ್ಲಿ ಭಾರೀ ಮಳೆ, ಭೂಕುಸಿತ ಸಂಭವಿಸಿದ್ದು ರಸ್ತೆಯ ಮೇಲೆ ಅವಶೇಷಗಳು ಬಿದ್ದಿರುವುದು
Image Credit source: PTI
Follow us on

ನವದೆಹಲಿ, ಆಗಸ್ಟ್ 24: ಹಿಮಾಚಲ ಪ್ರದೇಶದಲ್ಲಿ (Himachal Pradesh) ಮತ್ತೆ ಮಳೆಯ ಆರ್ಭಟ (Heavy Rains) ಜೋರಾಗಿದೆ. ಮಂಗಳವಾರ ಮತ್ತು ಬುಧವಾರ ಸುರಿದ ಭಾರೀ ಮಳೆ ಅವಾಂತರ ಸೃಷ್ಟಿಸಿದೆ. ಒಂದು ಮಗು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ. ಆರು ಮಂದಿ ನಾಪತ್ತೆಯಾಗಿದ್ದಾರೆ. ಶಿಮ್ಲಾದಲ್ಲಿ ದಂಪತಿ ಸಾವನ್ನಪ್ಪಿದ್ದಾರೆ. ಜುಂಗಾದಲ್ಲಿ ಐದು ವರ್ಷದ ಮಗುವಿನ ಮೇಲೆ ಗೇಟ್ ಬಿದ್ದಿದೆ. ಮಂಡಿಯಲ್ಲಿ ತಾಯಿಯ ಅಜ್ಜ, ಅಜ್ಜಿ, ಸೊಸೆ ಸೇರಿದಂತೆ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಂಡಿಯ ಕುಕ್ಲಾದಲ್ಲಿ ಶಾಲಾ ಕಟ್ಟಡ, ಖೋಳನಾಳದಲ್ಲಿ 50 ಮೇಕೆಗಳು ಮತ್ತು ಎರಡು ಡಜನ್ ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.

ಹಿಮಾಚಲದ ಶಿಮ್ಲಾದಲ್ಲಿ ಗುಡುಗು ಸಹಿತ ಮಳೆ‌ಬೀಳುತ್ತಿದೆ. ಮಂಡಿಯಲ್ಲಿ ಹೊಟೇಲ್‌ಗೆ ಸಿಡಿಲು ಬಡಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕಶೋಡ್ ನಲ್ಲಿ ಭೂ ಕುಸಿತಕ್ಕೆ ಐದು ಮನೆಗಳು ಕೊಚ್ಚಿ ಹೋಗಿವೆ. ಐದು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 709 ರಸ್ತೆಗಳನ್ನು ಮುಚ್ಚಲಾಗಿದೆ. 1,366 ಬಸ್ ಮಾರ್ಗಗಳು ಮತ್ತು 636 ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿವೆ.

ಶಿಮ್ಲಾದ ಬಾಲ್ಡೆಯನ್‌ನಲ್ಲಿ ಮನೆ‌ ಮೇಲೆ ಭೂ‌ಕುಸಿತ ಸಂಭವಿಸಿದೆ. ಮನೆಯಲ್ಲಿ‌ ವಾಸಿಸುತ್ತಿದ್ದ ಪತಿ ಮತ್ತು ಹೆಂಡತಿ ಸಾವನ್ನಪ್ಪಿದ್ದಾರೆ. ಕುಲು ಜಿಲ್ಲೆ ಮತ್ತೊಮ್ಮೆ ಸಂಪರ್ಕ ಕಡಿತಗೊಂಡಿದೆ. ಕುಲು-ಮಂಡಿ-ಚಂಡೀಗಢ ಹೆದ್ದಾರಿಯನ್ನು ಮುಚ್ಚಲಾಗಿದೆ.‌ ಶಿಮ್ಲಾ-ರಾಂಪುರ ರಾಷ್ಟ್ರೀಯ ಹೆದ್ದಾರಿಯೂ ಬಂದ್‌ ಆಗಿದೆ. ಪರ್ವಾನೂ-ಶಿಮ್ಲಾ ಚತುಷ್ಪಥದಲ್ಲಿ ದಿನವಿಡೀ ಸಂಚಾರ ಅಸ್ತವ್ಯಸ್ತಗೊಂಡಿದೆ. ಸೇತುವೆಯ ಪಿಲ್ಲರ್‌ ಮುರಿದು ಬಿದ್ದ ಪರಿಣಾಮ ಮುಖ್ಯರಸ್ತೆ ಬಂದ್‌ ಆಗಿದೆ. ಪಠಾಣ್‌ಕೋಟ್-ಮಂಡಿ ಎನ್‌ಎಚ್ 32 ಬೆಳಿಗ್ಗೆ ಎರಡು ಗಂಟೆಗಳ ಕಾಲ ಮುಚ್ಚಲಾಗಿತ್ತು. ಸುಮಾರು 10 ಕಿಲೋಮೀಟರ್ ರಸ್ತೆಯುದ್ದಕ್ಕೂ ವಾಹಗಳ ಟ್ರಾಫಿಕ್​​ನಲ್ಲಿ ನಿಂತಿವೆ.

ಕಂಗ್ರಾ ಜಿಲ್ಲೆಯ ಕೋಟ್ಲಾದಲ್ಲಿ ಭೂಕುಸಿತದಿಂದ ಮನೆಗಳಲ್ಲಿ ಒಂದು ಅಡಿಯಷ್ಟು ನೀರು ಮತ್ತು ಕೆಸರು ತುಂಬಿದೆ. ಏಳು ಮನೆಗಳು ಅಸುರಕ್ಷಿತವೆಂದು ಘೋಷಿಸಲಾಗಿದೆ. 30 ಮನೆಗಳನ್ನು ತೆರವು ಮಾಡಲಾಗಿದೆ. ಶಿಮ್ಲಾ ಪಟ್ಟಣದಲ್ಲಿಯೂ ಮರಗಳು ಮತ್ತು ಭೂಕುಸಿತದಿಂದಾಗಿ ಮುಖ್ಯ ರಸ್ತೆಗಳು ಸೇರಿದಂತೆ ಹತ್ತಾರು ಸಂಪರ್ಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ನಗರದಲ್ಲಿ ಒಂದೇ ದಿನ 250ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಮಳೆಯ ನಡುವೆ, ಸಿಎಂ ಸುಖವಿಂದರ್ ಸಿಂಗ್ ಸುಖು ತಮ್ಮ ಅಧಿಕೃತ ನಿವಾಸವಾದ ಓಕೋವರ್‌ನಿಂದ ಮಳೆ ಅನಾಹುತದ ಮಾಹಿತಿ ಪಡೆಯುತ್ತಲೇ ಇದ್ದಾರೆ.

ಇದನ್ನೂ ಓದಿ: Himachal Pradesh Rain: ಹಿಮಾಚಲದಲ್ಲಿ ಭಾರಿ ಮಳೆಯ ಮುನ್ಸೂಚನೆ, ಉತ್ತರ ಭಾರತದಾದ್ಯಂತ ಇದುವರೆಗೆ 145ಕ್ಕೂ ಹೆಚ್ಚು ಮಂದಿ ಸಾವು

ಜುಬ್ಬರಹಟ್ಟಿ ಮತ್ತು ಭುಂತರ್​​ನಲ್ಲಿ ವಿಮಾನ ಸಂಚಾರ ಸ್ಥಗಿತ

ಮಳೆಯಿಂದಾಗಿ, ಶಿಮ್ಲಾದ ಜುಬ್ಬರಹಟ್ಟಿ ಮತ್ತು ಭುಂತರ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 122 ವರ್ಷಗಳ ನಂತರ ಶಿಮ್ಲಾದಲ್ಲಿ 24 ಗಂಟೆಗಳಲ್ಲಿ 201 ಮಿಮೀ ಮೋಡಗಳ ಮಳೆ ಸುರಿದಿದೆ. ಮಂಗಳವಾರ ರಾತ್ರಿ 8:00 ಗಂಟೆಯಿಂದ ಬುಧವಾರ ರಾತ್ರಿ 8:00 ಗಂಟೆಯವರೆಗೆ ನಗರದಲ್ಲಿ 201 ಮಿ.ಮೀ ಮಳೆ ದಾಖಲಾಗಿದೆ. ಈ ಹಿಂದೆ ಆಗಸ್ಟ್ 1901 ರಲ್ಲಿ 227 ಮಿಮೀ ಮಳೆಯಾಗಿತ್ತು. ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ