ಚಂಪೈ ಸೊರೇನ್ ಜಾರ್ಖಂಡ್ ಪೊಲೀಸರ ಕಣ್ಗಾವಲಿನಲ್ಲಿದ್ದರು: ಹಿಮಂತ ಬಿಸ್ವಾ ಶರ್ಮಾ

ಚಂಪೈ ಸೊರೇನ್ ಅವರು ಇಂದು(ಶುಕ್ರವಾರ) ರಾಂಚಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚಂಪೈ ಸೊರೇನ್ ಅವರನ್ನು ಜಾರ್ಖಂಡ್ ಪೊಲೀಸರು ಆರು ತಿಂಗಳ ಕಾಲ ನಿಗಾ ಇರಿಸಿದ್ದರು. ನಾನು ಯಾವ ಮುಖ್ಯಮಂತ್ರಿಯಿಂದಲೂ ಇಂತಹ ಉದಾಹರಣೆ ಕೇಳಿಲ್ಲ. ನಾನು ನಿಮಗೆ (ಮುಖ್ಯಮಂತ್ರಿ ಹೇಮಂತ್ ಸೊರೇನ್) ಎಚ್ಚರಿಕೆ ನೀಡುತ್ತೇನೆ, ನಾವು ಎರಡು ತಿಂಗಳ ನಂತರ ಸೂಕ್ತ ಉತ್ತರವನ್ನು ನೀಡುತ್ತೇವೆ ಎಂದ್ದಿದ್ದಾರೆ ಶರ್ಮಾ.

ಚಂಪೈ ಸೊರೇನ್ ಜಾರ್ಖಂಡ್ ಪೊಲೀಸರ ಕಣ್ಗಾವಲಿನಲ್ಲಿದ್ದರು: ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ
ರಶ್ಮಿ ಕಲ್ಲಕಟ್ಟ

Updated on: Aug 30, 2024 | 7:21 PM

ರಾಂಚಿ ಆಗಸ್ಟ್ 30: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren), ಚಂಪೈ ಸೊರೇನ್ (Champai Soren) ಮೇಲೆ ಬೇಹುಗಾರಿಕೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಆರೋಪಿಸಿದ್ದಾರೆ. “ನಾನು ಕೂಡ ಒಂದು ರಾಜ್ಯದ ಸಿಎಂ. ನಮ್ಮ ದೇಶದ ಯಾವುದೇ ಸಿಎಂ ತನ್ನ ರಾಜ್ಯದ ಮಂತ್ರಿಗಳ ಮೇಲೆ ಕಣ್ಣಿಡಲು ಪ್ರಯತ್ನಿಸುವುದಿಲ್ಲ, ಆದರೆ ಅದನ್ನು ಹೇಮಂತ್ ಸೊರೇನ್ ಮಾಡಿದ್ದಾರೆ. ದೆಹಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಚಂಪೈ ಸೊರೇನ್ ಮೇಲೆ ಬೇಹುಗಾರಿಕೆ ಮಾಡಿದ್ದಕ್ಕೆ ಬಂಧಿಸಿದ್ದಾರೆ, ಆದರೆ ಹೇಮಂತ್ ಸೊರೇನ್ ಅವರನ್ನು ಭದ್ರತೆಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು. ಹಾಗಿದ್ದಲ್ಲಿ, ಅವರ ಬಳಿ ಶಸ್ತ್ರಾಸ್ತ್ರಗಳು ಏಕೆ ಇರಲಿಲ್ಲ, ”ಎಂದು ಚಂಪೈ ಸೊರೇನ್ ಅವರು ಬಿಜೆಪಿಗೆ ಸೇರಿದ ಕಾರ್ಯಕ್ರಮವೊಂದರಲ್ಲಿ ಶರ್ಮಾ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.

ಚಂಪೈ ಸೊರೇನ್ ಅವರು ಇಂದು(ಶುಕ್ರವಾರ) ರಾಂಚಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚಂಪೈ ಸೊರೇನ್ ಅವರನ್ನು ಜಾರ್ಖಂಡ್ ಪೊಲೀಸರು ಆರು ತಿಂಗಳ ಕಾಲ ನಿಗಾ ಇರಿಸಿದ್ದರು. ನಾನು ಯಾವ ಮುಖ್ಯಮಂತ್ರಿಯಿಂದಲೂ ಇಂತಹ ಉದಾಹರಣೆ ಕೇಳಿಲ್ಲ. ನಾನು ನಿಮಗೆ (ಮುಖ್ಯಮಂತ್ರಿ ಹೇಮಂತ್ ಸೊರೇನ್) ಎಚ್ಚರಿಕೆ ನೀಡುತ್ತೇನೆ, ನಾವು ಎರಡು ತಿಂಗಳ ನಂತರ ಸೂಕ್ತ ಉತ್ತರವನ್ನು ನೀಡುತ್ತೇವೆ ಎಂದು ಜಾರ್ಖಂಡ್‌ನ ಬಿಜೆಪಿಯ ಸಹ-ಪ್ರಭಾರಿ ಶರ್ಮಾ ಹೇಳಿದರು.

ನಾಲ್ಕು ತಿಂಗಳ ಕಾಲ ಸಿಎಂ ಆಗಿದ್ದರು ಚಂಪೈ ಸೊರೇನ್

ಹೇಮಂತ್ ಸೊರೇನ್ ಅವರ ಅನುಪಸ್ಥಿತಿಯಲ್ಲಿ ನಾಲ್ಕು ತಿಂಗಳ ಕಾಲ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಸೊರೇನ್ ಸೇವೆ ಸಲ್ಲಿಸಿದರು, ಅವರು ಜನವರಿ 31 ರಂದು ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧಿಸುವ ಮೊದಲು ರಾಜೀನಾಮೆ ನೀಡಿದ್ದರು. 67 ವರ್ಷದ ನಾಯಕ, ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ನಿಕಟವರ್ತಿ ಎಂದು ಹೇಳಲಾಗಿದ್ದು, ಜೂನ್‌ನಲ್ಲಿ ಜಾರ್ಖಂಡ್ ಹೈಕೋರ್ಟ್‌ನಿಂದ ಹೇಮಂತ್ ಸೊರೇನ್ ಅವರಿಗೆ ಜಾಮೀನು ನೀಡಿದ ನಂತರ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಕೇಳಲಾಯಿತು.

“ನನಗೆ ಕುಟುಂಬದಂತಿರುವ ಜೆಎಂಎಂ ಪಕ್ಷವನ್ನು ನಾನು ತೊರೆಯುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಹಿಂದಿನ ಘಟನೆಗಳ ತಿರುವು ನನ್ನನ್ನು ಬಹಳ ನೋವಿನಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿತು. ಪಕ್ಷ ತನ್ನ ತತ್ವದಿಂದ ಹೊರಗುಳಿದಿದೆ ಎಂದು ಹೇಳಲು ನನಗೆ ನೋವಾಗಿದೆ ”ಎಂದು ಸೊರೇನ್ ಬುಧವಾರ ಬರೆದಿದ್ದಾರೆ.

ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ: ಮಹಾರಾಷ್ಟ್ರ ಜನತೆಯ ಕ್ಷಮೆ ಕೋರಿದ ಪ್ರಧಾನಿ ಮೋದಿ

ಬಿಜೆಪಿ ಸೇರುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಚಂಪೈ ಸೊರೇನ್, “ಬಾಂಗ್ಲಾದೇಶದಿಂದ ಅತಿರೇಕದ” ಒಳನುಸುಳುವಿಕೆಯಿಂದಾಗಿ ರಾಜ್ಯದ ಸಂತಾಲ್ ಪರಗಣ ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಗುರುತು ಮತ್ತು ಅಸ್ತಿತ್ವವು ಅಪಾಯದಲ್ಲಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us