ಮೃತ ತಂದೆಯ ಕೊನೇ ಆಸೆಯನ್ನು ನೆರವೇರಿಸುವ ಸಲುವಾಗಿ ಈ ಇಬ್ಬರು ಸೋದರಿಯರು ತಮ್ಮ ಕುಟುಂಬಕ್ಕೆ ಸೇರಿದ 4 ಬಿಘಾಗಳಷ್ಟು ( ಸುಮಾರು 3 ಎಕರೆ) ಭೂಮಿಯನ್ನು ಈದ್ಗಾಕ್ಕೆ ದಾನವಾಗಿ ಕೊಟ್ಟಿದ್ದಾರೆ. ಈದ್ಗಾ ಎಂದರೆ ಮುಸ್ಲಿಮರು ಈದ್ ಹಬ್ಬದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ತೆರೆದ ಪ್ರದೇಶ. ಅಂದಹಾಗೇ, 1.5 ಕೋಟಿ ರೂಪಾಯಿಯೂ ಅಧಿಕ ಮೌಲ್ಯದ ಭೂಮಿಯನ್ನು ದೇಣಿಗೆ ನೀಡಿದ್ದು ಹಿಂದು ಸೋದರಿಯರು. ಇಂಥದ್ದೊಂದು ಅಪರೂಪದ ಘಟನೆ ನಡೆದದ್ದು ಉತ್ತರಾಖಂಡ್ನ ಉಧಾಮ್ ಸಿಂಗ್ ನಗರದ ಕಾಶಿಪುರ ಎಂಬ ಹಳ್ಳಿಯಲ್ಲಿ. ಹೀಗೆ ನೆಲವನ್ನು ಕೊಟ್ಟಿದ್ದಕ್ಕೆ ಮುಸ್ಲಿಂ ಸಮುದಾಯದವರು ಧನ್ಯವಾದ ಸಲ್ಲಿಸಿದ್ದಾರೆ. ಇಬ್ಬರು ಯುವತಿಯರ ಮೃತ ತಂದೆಗೆ ಈದ್ ಹಬ್ಬದಂದು ಗೌರವವನ್ನೂ ಸಮರ್ಪಿಸಿದ್ದಾರೆ. ದೇಶಾದ್ಯಂತ ಹಲವು ಕಡೆಗಳಲ್ಲಿ ಈಗ ಕೋಮುಗಲಾಟೆ ಶುರುವಾಗಿದೆ. ವಿವಿಧ ರಾಜ್ಯಗಳಲ್ಲಿ ಹಿಂದು-ಮುಸ್ಲಿಂ ಗಲಾಟೆ ನಡೆಯುತ್ತಿದೆ. ಈ ಮಧ್ಯೆ ಹಿಂದು ಸೋದರಿಯರು ಮಾಡಿದ ಕೆಲಸ ಅಪಾರ ಮೆಚ್ಚುಗೆ ಪಡೆದಿದೆ.
ಈ ಸೋದರಿಯರ ತಂದೆ ಬ್ರಜನಂದನ್ ಪ್ರಸಾದ್ ರಸ್ಟೋಗಿ. ಸುಮಾರು 20ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಅದಕ್ಕೂ ಮೊದಲು ಅವರೊಮ್ಮೆ ತಮ್ಮ ಸಂಬಂಧಿಯೊಬ್ಬರ ಬಳಿ ಮಾತನಾಡುತ್ತ, ‘ನನಗೆ ನನ್ನ 4 ಬಿಘಾಗಳಷ್ಟು ಕೃಷಿ ಭೂಮಿಯನ್ನು ಈದ್ಗಾಕ್ಕೆ ದೇಣಿಗೆ ಕೊಡಬೇಕು ಎಂಬ ಇರಾದೆಯಿದೆ. ನಾನು ಇಷ್ಟು ನೆಲ ಅಲ್ಲಿಗೆ ಕೊಟ್ಟರೆ, ಈದ್ಗಾ ವಿಸ್ತರಣೆಗೆ ಸಹಾಯವಾಗುತ್ತದೆ’ ಎಂದಿದ್ದರಂತೆ. ಆದರೆ ಅದನ್ನು ತನ್ನ ಮಕ್ಕಳ ಬಳಿ ಹೇಳಿ, ಭೂಮಿಯನ್ನು ಕೊಡುವುದಕ್ಕೂ ಮೊದಲು, 2003ರಲ್ಲಿಯೇ ತೀರಿ ಹೋಗಿದ್ದಾರೆ. ಈ ವಿಷಯ ಈಗ ಹೆಣ್ಣುಮಕ್ಕಳಾದ ಸರೋಜಾ ಮತ್ತು ಅನಿತಾಗೆ ತಿಳಿದಿದೆ. ಸರೋಜಾ ದೆಹಲಿಯಲ್ಲಿ ಮತ್ತು ಅನಿತಾ ಮೀರತ್ನಲ್ಲಿ ವಾಸವಾಗಿದ್ದು, ಇವರಿಗೆ ಇನ್ನೊಬ್ಬ ಸಹೋದರನೂ ಇದ್ದಾನೆ. ಆತನ ಹೆಸರು ರಾಕೇಶ್ ರಾಸ್ಟೋಗಿ. ಅನಿತಾ ಮತ್ತು ಸರೋಜಾ ಮೊದಲು ಈ ಬಗ್ಗೆ ತಮ್ಮ ಸೋದರ ರಾಕೇಶ್ ಜತೆ ಈ ಬಗ್ಗೆ ಚರ್ಚಿಸಿದರು. ಅದಕ್ಕೆ ಆತ ಕೂಡ ಖುಷಿಯಿಂದಲೇ ಒಪ್ಪಿಕೊಂಡಿದ್ದಾನೆ.
ತಂದೆಯ ಕೊನೇ ಆಸೆಯನ್ನು ತೀರಿಸುವುದು ತುಂಬ ಮುಖ್ಯ. ನನ್ನ ಸೋದರಿಯರು ಅದಕ್ಕೆ ಮುಂದಾಗಿದ್ದಾರೆ. ಅವರ ಕೊನೇ ಆಸೆ ನೆರವೇರಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ರಾಕೇಶ್ ಹೇಳಿದ್ದಾರೆ. ಹಾಗೇ, ಈದ್ಗಾ ಕಮಿಟಿಯ ಹಸೀನ್ ಖಾನ್ ಮಾತನಾಡಿ, ಕೋಮು ಸೌಹಾರ್ದತೆಗೆ ಈ ಇಬ್ಬರು ಹಿಂದು ಯುವತಿಯರು ಜ್ವಲಂತ ಉದಾಹರಣೆ. ನಾವು ಅವರಿಗೆ ಸದಾ ಕೃತಜ್ಞರಾಗಿರುತ್ತೇವೆ. ಶೀಘ್ರದಲ್ಲೇ ಅವರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: IPL 2022: ಆರೆಂಜ್ ಕ್ಯಾಪ್ ಬಟ್ಲರ್ ಬಳಿ ಭದ್ರ; ಪರ್ಪಲ್ ಕ್ಯಾಪ್ ರೇಸ್ನಲ್ಲಿ ಇರೋರು ಯಾರೆಲ್ಲಾ?
Published On - 10:35 am, Thu, 5 May 22