‘ಅಫ್ಘಾನ್​​ನಲ್ಲಿ ಭಾರತದ ಹೂಡಿಕೆ ಮುಂದುವರಿಯಲಿದೆಯಾ’-ಅಮೆರಿಕ ಮಾಧ್ಯಮಗಳ ಈ ಪ್ರಶ್ನೆಗೆ ಎಸ್​.ಜೈಶಂಕರ್​ ಕೊಟ್ಟ ಚುಟುಕು ಉತ್ತರ ಹೀಗಿದೆ

| Updated By: Lakshmi Hegde

Updated on: Aug 19, 2021 | 1:06 PM

ಅಫ್ಘಾನಿಸ್ತಾನದಲ್ಲಿರು ಭಾರತೀಯರು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಮರಳುವಂತೆ ಕ್ರಮ ಕೈಗೊಳ್ಳುವುದು ಮೊದಲ ಆದ್ಯತೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಹೇಳಿದ್ದಾರೆ.

‘ಅಫ್ಘಾನ್​​ನಲ್ಲಿ ಭಾರತದ ಹೂಡಿಕೆ ಮುಂದುವರಿಯಲಿದೆಯಾ’-ಅಮೆರಿಕ ಮಾಧ್ಯಮಗಳ ಈ ಪ್ರಶ್ನೆಗೆ ಎಸ್​.ಜೈಶಂಕರ್​ ಕೊಟ್ಟ ಚುಟುಕು ಉತ್ತರ ಹೀಗಿದೆ
ಎಸ್.ಜೈಶಂಕರ್​
Follow us on

ಮತ್ತೆ ತಾಲಿಬಾನಿಗಳ ವಶವಾಗಿರುವ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗಳಲ್ಲೂ ವಿಶ್ವದ ಪ್ರತಿರಾಷ್ಟ್ರಗಳೂ ಸೂಕ್ಷ್ಮವಾಗಿ ಗಮನಿಸುತ್ತಿವೆ. ಅದಕ್ಕೆ ಭಾರತವೂ ಹೊರತಾಗಿಲ್ಲ. ಅಫ್ಘಾನಿಸ್ತಾನದ ನಿರಾಶ್ರಿತರಿಗೆ ನೆರವು ನೀಡುವ ದೊಡ್ಡ ಮನಸನ್ನು ಬಹುತೇಕ ರಾಷ್ಟ್ರಗಳು ತೋರಿಸುತ್ತಿವೆ. ಈ ಮಧ್ಯೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಮತ್ತು ಬ್ರಿಟನ್​ ವಿದೇಶಾಂಗ ವ್ಯವಹಾರಗಳ ಸಚಿವ ಡೊಮಿನಿಕ್​ ರಾಬ್​ ಅಫ್ಘಾನ್​ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದು, ಅಫ್ಘಾನಿಸ್ತಾನಕ್ಕೆ ನೆರವು ನೀಡಲು ಒಟ್ಟಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.

ಅಫ್ಘಾನ್​ ಭದ್ರತಾ ವ್ಯವಸ್ಥೆ ತೀವ್ರ ಅಪಾಯದಲ್ಲಿರುವುದರಿಂದ ಅಲ್ಲಿನ ಅನೇಕಾನೇಕರು ನಿರಾಶ್ರಿತರಾಗಿದ್ದಾರೆ. ಅಂಥ ನಿರಾಶ್ರಿತರಿಗೆ ನೆರವು ನೀಡಲು, ತೀವ್ರ ಸಂಕಷ್ಟದಲ್ಲಿರುವ ಸಾಮಾನ್ಯ ಜನರ ಬೆಂಬಲಕ್ಕೆ ನಿಲ್ಲಲು ಭಾರತ ಮತ್ತು ಬ್ರಿಟನ್ ಒಟ್ಟಾಗಿ ಕೆಲಸ ಮಾಡಲು ಎಸ್​.ಜೈಶಂಕರ್​ ಮತ್ತು ಡೊಮಿನಿಕ್​ ಇಬ್ಬರೂ ಪರಸ್ಪರ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಂತ್ರಜ್ಞಾನ, ಶಾಂತಿಪಾಲನೆ ಮತ್ತು ಭಯೋತ್ಪಾದನೆ ನಿಗ್ರಹದ ಕುರಿತಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಲು ಜೈಶಂಕರ್​ ಅವರು ಆಗಸ್ಟ್​ 16ರಂದೇ ನ್ಯೂಯಾರ್ಕ್​ಗೆ ತೆರಳಿದ್ದರು. ಈ ವೇಳೆ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್​ ಮತ್ತು ಇತರ ದೇಶಗಳ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ. ಸಭೆಯಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ, ಬೆಳವಣಿಗೆಗಳ ಬಗ್ಗೆಯೇ ಕೇಂದ್ರೀಕರಿಸಿ ಚರ್ಚೆಗಳು ನಡೆದಿವೆ. ಅದಾದ ಬಳಿಕ ಟ್ವೀಟ್ ಮಾಡಿರುವ ಬ್ರಿಟನ್​ ವಿದೇಶಾಂಗ ಸಚಿವ ರಾಬ್​, ಅಫ್ಘಾನಿಸ್ತಾನದ ಜನರ ಹಿತಾಸಕ್ತಿಯನ್ನು ಕಾಪಾಡಿ, ನಿರಾಶ್ರಿತರಿಗೆ ನೆರವು ನೀಡಲು ಭಾರತ ಮತ್ತು ಯುಕೆ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ.

ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸ್ತಿದ್ದೇವೆ..
ಸಭೆಯ ಬಳಿಕ ನ್ಯೂಯಾರ್ಕ್​ನಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಎಸ್​.ಜೈಶಂಕರ್​, ನಾವು ಅಫ್ಘಾನಿಸ್ತಾನದ ಎಲ್ಲ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದೇವೆ. ಅಲ್ಲಿನ ಜನರಿಗೆ ಸಹಾಯ ಮಾಡಲು ಬದ್ಧರಿದ್ದೇವೆ. ಆದರೆ ಅಪಾಯದ ಪರಿಸ್ಥಿತಿಯಿರುವ ಅಫ್ಘಾನಿಸ್ತಾನದಿಂದ ಭಾರತೀಯರು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಮರಳುವಂತೆ ಕ್ರಮ ಕೈಗೊಳ್ಳುವುದು ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಇನ್ನು ತಾಲಿಬಾನ್​ ಜತೆ ಭಾರತದ ಸಂಬಂಧ ಹೇಗಿರಲಿದೆ? ಹೇಗೆ ವ್ಯವಹರಿಸಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಎಸ್​.ಜೈಶಂಕರ್​, ಮುಂದೆ ನೋಡೋಣ..ಈಗಿನ್ನೂ ತಾಲಿಬಾನಿಗಳ ಆಡಳಿತ ಶುರುವಾಗಿದೆ ಎಂದಷ್ಟೇ ಹೇಳಿ ಬಿಟ್ಟರು. ತಾಲಿಬಾನ್​ ಜತೆ ಭಾರತ ಸಂಪರ್ಕ ಹೊಂದಲಿದೆಯಾ? ಇಲ್ಲವಾ ಎಂಬುದನ್ನೂ ಸ್ಪಷ್ಟವಾಗಿ ಹೇಳಿಲ್ಲ.

ಹೂಡಿಕೆ ಮುಂದುವರಿಯಲಿದೆಯಾ?
ಇನ್ನು ಅಮೆರಿಕ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿಯೇ ಉತ್ತರ ನೀಡುತ್ತ ಬಂದ ಎಸ್​.ಜೈಶಂಕರ್​ ಮತ್ತೊಂದು ಪ್ರಶ್ನೆಗೂ ಹಾಗೇ ಮಾಡಿದರು. ತಾಲಿಬಾನ್​ ಉಗ್ರರ ಆಡಳಿತ ಶುರುವಾಗಿದೆ. ಹೀಗಿದ್ದಾಗ್ಯೂ ಕೂಡ ಮುಂದೆ ಭಾರತ ಅಫ್ಘಾನಿಸ್ತಾನದಲ್ಲಿ ವಿವಿಧ ಯೋಜನೆಗಳಿಗೆ ಹೂಡಿಕೆ ಮಾಡುವುದನ್ನು ಮುಂದುವರಿಸಲಿದೆಯಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಅಫ್ಘಾನಿಸ್ತಾನದ ಜನರೊಂದಿಗೆ ಇರುವ ಐತಿಹಾಸಿಕ ಸಂಬಂಧ ಮುಂದುವರಿಯಲಿದೆ ಎಂದಷ್ಟೇ ಉತ್ತರಿಸಿದರು. ತಾಲಿಬಾನ್​ಗೆ ಸಂಬಂಧಿತ ಯಾವುದೇ ಪ್ರಶ್ನೆಗಳಿದ್ದರೂ ಇದು ಉತ್ತರ ನೀಡುವ ಸಮಯವಲ್ಲ. ಯಾಕೆಂದರೆ ಇನ್ನೂ ಮೂರ್ನಾಲ್ಕು ದಿನಗಳಷ್ಟೇ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಕ್ಫ್ ಆಸ್ತಿ ಕಬಳಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ, ಮುಜರಾಯಿ ದೇವಸ್ಥಾನಗಳ ಸ್ವಚ್ಛತೆ, ಮೂಲ ಸೌಕರ್ಯಕ್ಕೆ ಆದ್ಯತೆ: ಶಶಿಕಲಾ ಜೊಲ್ಲೆ

Facebook Content Report: ಪೇಸ್​ಬುಕ್​ನಲ್ಲಿ ಯಾರು ಏನನ್ನು ಹೆಚ್ಚು ನೋಡಿದ್ದಾರೆ?: 2021 ಕ್ವಾರ್ಟರ್ 2 ವರದಿ ಬಿಡುಗಡೆ

(Historical relationship with the Afghan people will Continue Says S Jaishankar)

Published On - 1:04 pm, Thu, 19 August 21