ಪಶ್ಚಿಮ ಬಂಗಾಳ ‘ಹಿಂಸಾಚಾರ ಸಂಸ್ಕೃತಿ ಮತ್ತು ಅಧರ್ಮದ ಹಿಡಿತದಲ್ಲಿದೆ’ ಎಂದ ರಾಜ್ಯಪಾಲ

| Updated By: ರಶ್ಮಿ ಕಲ್ಲಕಟ್ಟ

Updated on: Mar 22, 2022 | 5:31 PM

ತೃಣಮೂಲ ಕಾಂಗ್ರೆಸ್ ನಾಯಕ ಬಹದ್ದೂರ್ ಶೇಖ್ ಅವರ ಹತ್ಯೆಯ ನಂತರ ಜನರ ಗುಂಪು ಮನೆಗಳಿಗೆ ಬೆಂಕಿ ಹಚ್ಚಿ ಎಂಟು ಜನರು ಸುಟ್ಟು ಸಾವಿಗೀಡಾದ ಬಿರ್ಭೂಮ್‌ನ ರಾಮ್‌ಪುರಹತ್‌ನಲ್ಲಿ "ಭಯಾನಕ ಬರ್ಬರತೆ" ಬಗ್ಗೆ ನನಗೆ ನೋವಾಗಿದ್ದು ತುಂಬಾ ಗಲಿಬಿಲಿಗೊಂಡಿದ್ದೇನೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳ ‘ಹಿಂಸಾಚಾರ ಸಂಸ್ಕೃತಿ ಮತ್ತು ಅಧರ್ಮದ ಹಿಡಿತದಲ್ಲಿದೆ ಎಂದ ರಾಜ್ಯಪಾಲ
ಜಗದೀಪ್ ಧಂಖರ್
Follow us on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಖರ್ (Jagdeep Dhankhar) ಅವರು ಇಂದು ರಾಜ್ಯದ ಬಿರ್ಭುಮ್ (Birbhum) ಜಿಲ್ಲೆಯಲ್ಲಿ ನಡೆದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದು, ಮಾನವ ಹಕ್ಕುಗಳನ್ನು “ನಾಶಗೊಳಿಸಲಾಗಿದೆ” ಮತ್ತು ಕಾನೂನು ಸುವ್ಯವಸ್ಥೆ “ಕುಸಿದಿದೆ” ಎಂದು ಹೇಳಿದ್ದಾರೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ರಾಜ್ಯಪಾಲರು, ರಾಜ್ಯವು ‘ಹಿಂಸಾಚಾರ ಸಂಸ್ಕೃತಿ ಮತ್ತು ಅಧರ್ಮದ ಹಿಡಿತದಲ್ಲಿದೆ’ ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ ನಾಯಕ ಬಹದ್ದೂರ್ ಶೇಖ್ (Bahadur Shaikh)ಅವರ ಹತ್ಯೆಯ ನಂತರ ಜನರ ಗುಂಪು ಮನೆಗಳಿಗೆ ಬೆಂಕಿ ಹಚ್ಚಿ ಎಂಟು ಜನರು ಸುಟ್ಟು ಸಾವಿಗೀಡಾದ ಬಿರ್ಭೂಮ್‌ನ ರಾಮ್‌ಪುರಹತ್‌ನಲ್ಲಿ “ಭಯಾನಕ ಬರ್ಬರತೆ” ಬಗ್ಗೆ ನನಗೆ ನೋವಾಗಿದ್ದು ತುಂಬಾ ಗಲಿಬಿಲಿಗೊಂಡಿದ್ದೇನೆ ಎಂದು ಅವರು ಹೇಳಿದರು. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೊ ಸಂದೇಶದಲ್ಲಿ ಅವರು ಘಟನೆಯನ್ನು “ಭಯಾನಕ ಹಿಂಸಾಚಾರ ಮತ್ತು ಬೆಂಕಿಯ ತಾಂಡವ” ಎಂದು ಕರೆದಿದ್ದಾರೆ. ಘಟನೆಯ ಕುರಿತು ತುರ್ತು ಮಾಹಿತಿಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯಿಂದ ಕೋರಿರುವುದಾಗಿ ಅವರು ಹೇಳಿದರು. “ಇದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುಸಿತವನ್ನು ತೋರಿಸುತ್ತದೆ. ರಾಜ್ಯವು ಹಿಂಸಾಚಾರ ಮತ್ತು ಕಾನೂನುಬಾಹಿರತೆಯ ಸಂಸ್ಕೃತಿಗೆ ಸಮಾನಾರ್ಥಕವಾಗಲು ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.  ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ಮಾಡಿದ ಅವರು ಆಡಳಿತವು “ಪಕ್ಷಪಾತದ ಹಿತಾಸಕ್ತಿಗಳಿಗಿಂತ ಮೇಲಕ್ಕೆ ಏರುವ ಅಗತ್ಯವಿದೆ”. ಇದು “ವಾಸ್ತವದಲ್ಲಿ ಪ್ರತಿಫಲಿಸುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕನ ಹತ್ಯೆ ಆರೋಪದ ವಿರುದ್ಧ ಪ್ರತಿಭಟನೆಯಲ್ಲಿ ಪಶ್ಚಿಮ ಬಂಗಾಳದ ಬಿರ್ಭೂಮ್‌ನ ಹಳ್ಳಿಯೊಂದರಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಇಂದು ಬೆಳಿಗ್ಗೆ 8 ಜನರ ಸುಟ್ಟ ಶವಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮನೋಜ್ ಮಾಳವಿಯಾ ತಿಳಿಸಿದ್ದಾರೆ.

“ಇಂದು ಬೆಳಿಗ್ಗೆ ಒಂದೇ ಮನೆಯಿಂದ ಏಳು ಜನರ ಶವಗಳನ್ನು ಹೊರತೆಗೆಯಲಾಗಿದೆ. ಮೊದಲು ಹತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮೊದಲು ನೀಡಲಾದ ಸಾವಿನ ಅಂಕಿಅಂಶಗಳು ಸರಿಯಾಗಿಲ್ಲ. ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ” ಎಂದು ಮಾಳವಿಯಾ ಹೇಳಿದರು.

ತೃಣಮೂಲ ನಾಯಕ ಬಹದ್ದೂರ್ ಶೇಖ್ ಅವರ ಮೃತದೇಹ ಸೋಮವಾರ ಪತ್ತೆಯಾದ ನಂತರ ಪ್ರತಿಭಟನೆಗಳು ಪ್ರಾರಂಭವಾದವು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಈ ಬಗ್ಗೆ ಸರಣಿ ಟ್ವೀಟ್‌ ಮಾಡಿದ್ದು ಕೇಂದ್ರ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ “ಭಯೋತ್ಪಾದನೆ ಮತ್ತು ಉದ್ವಿಗ್ನತೆ” ಇದೆ ಎಂದು ಆರೋಪಿಸಿದ್ದಾರೆ.
ಸದನದಲ್ಲಿ ಈ ಹಿಂಸಾಚಾರದ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿ 22 ಬಿಜೆಪಿ ಶಾಸಕರು ಮಂಗಳವಾರ  ಅಧಿವೇಶನದ ಮೊದಲಾರ್ಧದ ಕೊನೆಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಹೊರನಡೆದರು.


ಬಿಜೆಪಿ ಶಾಸಕ ಶಂಕರ್ ಘೋಷ್ ಶೂನ್ಯ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲು ಬಯಸಿದ್ದರು. ಆದರೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಅದನ್ನು ಪ್ರಶ್ನೆಗಳಲ್ಲಿ ಪಟ್ಟಿ ಮಾಡಿಲ್ಲ ಎಂದು ಹೇಳಿದರು.
‘ವಂದೇ ಮಾತರಂ’ ಮತ್ತು ‘ಧಿಕ್ಕರ್ ಧಿಕ್ಕರ್’ (ಖಂಡನೆ) ಘೋಷಣೆಗಳನ್ನು ಕೂಗುತ್ತಾ, ಘೋಷ್ ಮತ್ತು ಬಿಜೆಪಿಯ 40 ಸದಸ್ಯರು ಸದನದಿಂದ ಹೊರನಡೆದರು. ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ರಾಜಕೀಯ ಕೊಲೆಗಳು ನಡೆಯುತ್ತಿವೆ ಎಂದಿದ್ದಾರೆ.

ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಕಾರಣಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಪಕ್ಷವು ಬಯಸುತ್ತದೆ ಎಂದು ಘೋಷ್ ಹೇಳಿದರು. ಉಳಿದ ದಿನಗಳಲ್ಲಿ ಸದನಕ್ಕೆ ಗೈರಾಗಬೇಕೇ ಎಂಬುದನ್ನು ಶಾಸಕಾಂಗ ಪಕ್ಷ ನಿರ್ಧರಿಸುತ್ತದೆ ಎಂದು ಬಿಜೆಪಿ ಮುಖ್ಯ ಸಚೇತಕ ಮನೋಜ್ ತಿಗ್ಗಾ ಹೇಳಿದ್ದಾರೆ.

ಸಚಿವ ಫಿರ್ಹಾದ್ ಹಕೀಮ್ ನೇತೃತ್ವದ ಇಬ್ಬರು ಸದಸ್ಯರ ತೃಣಮೂಲ ಕಾಂಗ್ರೆಸ್ ನಿಯೋಗವು ರಾಮಪುರಹಟ್‌ಗೆ ತೆರಳಿದೆ ಎಂದು ಟಿಎಂಸಿ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ. ರಾಮ್‌ಪುರಹತ್‌ನ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ (ಐಸಿ) ಅವರನ್ನು ತೆಗೆದುಹಾಕಲಾಗಿದೆ ಮತ್ತು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಸಿಐಡಿ ಜ್ಞಾನವಂತ್ ಸಿಂಗ್, ಪಶ್ಚಿಮ ವಲಯದ ಎಡಿಜಿ ಸಂಜಯ್ ಸಿಂಗ್ ಮತ್ತು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಸಿಐಡಿ (ಆಪ್ಸ್) ಮೀರಜ್ ಖಾಲಿದ್ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

“ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಬಿರ್ಭುಮ್ ಜಿಲ್ಲೆಯ ರಾಮ್‌ಪುರಹತ್ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತು ಭಯ ಆವರಿಸಿದೆ.  ಪಂಚಾಯತ್ ಉಪಪ್ರಧಾನ (ಉಪ ಮುಖ್ಯಸ್ಥ) ನಂತರ ಭದು ಶೇಕ್ ಅವರು ಬಾಂಬ್ ದಾಳಿಯಲ್ಲಿ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ,” ಎಂದು ಬಂಗಾಳದ ವಿರೋಧ ಪಕ್ಷದ ನಾಯಕ ಹಾಗೂ ನಂದಿಗ್ರಾಮದ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ. ರಾತ್ರಿಯ ಭೀಕರತೆಯು ಇಲ್ಲಿಯವರೆಗೆ ಕನಿಷ್ಠ 12 ಜನರ ಸಾವಿಗೆ ಕಾರಣವಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಾಗಿ ಮಹಿಳೆಯರು. ಸದ್ಯಕ್ಕೆ ಸುಟ್ಟು ಕರಕಲಾದ ದೇಹಗಳನ್ನು ಹೊರತೆಗೆಯಲಾಗುತ್ತಿದೆ. ಮೃತದೇಹಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡುವುದರೊಂದಿಗೆ ಆಡಳಿತಾತ್ಮಕ ಕವರ್ ಅಪ್ ಈಗಾಗಲೇ ಪ್ರಾರಂಭವಾಗಿದೆ. ತಕ್ಷಣವೇ ಕೇಂದ್ರದ ಮಧ್ಯಸ್ಥಿಕೆ ಅಗತ್ಯವಿದೆ ಎಂದು ಎಂದು ಮಾಜಿ ತೃಣಮೂಲ ನಾಯಕ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಗೋಮಾಂಸ ಸಾಗಿಸುತ್ತಿದ್ದ ಆರೋಪ; ವ್ಯಾನ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

Published On - 5:30 pm, Tue, 22 March 22