ಭಾರತದಲ್ಲಿ ಕೊರೊನಾ ಅಟ್ಟಹಾಸಕ್ಕೆ ಜನಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯ ವ್ಯಕ್ತಿಗಳು ಸಹ ನಲುಗಿಹೋಗಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡರೂ ಸೋಂಕಿನಿಂದ ಬಚಾವಾಗುವುದು ಸವಾಲಾಗಿಬಿಟ್ಟಿದೆ.
ಜನಸಾಮಾನ್ಯರು ಬದುಕಿನ ಅನಿವಾರ್ಯತೆಗೆ ಬೀದಿಗಿಳಿದ ಕಾರಣ ಸೋಂಕಿಗೆ ತುತ್ತಾದರೆಂದು ಭಾವಿಸಬಹುದು. ಆದರೆ, ಎಲ್ಲಾ ರೀತಿಯ ಜಾಗ್ರತಾ ಕ್ರಮಗಳನ್ನು ಅನುಸರಿಸುವ ಗಣ್ಯರಲ್ಲಿ ಸಹ ಸೋಂಕು ಪತ್ತೆಯಾಗುತ್ತಿರುವುದು ದೊಡ್ಡ ತಲೆನೋವಾಗಿದೆ. ಗೃಹ ಸಚಿವ ಅಮಿತ್ ಶಾ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಮೋದಿ ಸಂಪುಟದ ಹಲವು ಸಚಿವರಿಂದ ಹಿಡಿದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ತನಕ ಉನ್ನತ ಹುದ್ದೆಯಲ್ಲಿರುವ ಅನೇಕರಲ್ಲಿ ಪಾಸಿಟಿವ್ ಕಂಡು ಬಂದಿರುವುದು ಗಣ್ಯರ ವಲಯದಲ್ಲಿ ಅಚ್ಚರಿ ಮತ್ತು ಆತಂಕವನ್ನು ಹುಟ್ಟುಹಾಕಿರುವುದು ಸುಳ್ಳಲ್ಲ.
ಆದರೆ, ಸುತ್ತಮುತ್ತ ಇರುವ ಒಬ್ಬೊಬ್ಬರೇ ಸೋಂಕಿಗೆ ತುತ್ತಾಗುತ್ತಿದ್ದರೂ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕಚೇರಿಯ ಕೆಲವು ಅಧಿಕಾರಿಗಳು ಕೊರೊನಾದಿಂದ ಬಚಾವಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾವನ್ನು ಮಣಿಸಲು ಮೋದಿ ಹಾಗೂ ಅವರ ಕಾರ್ಯಾಲಯದ ಸಚಿವರು ಅನುಸರಿಸಿದ ಮಾರ್ಗಗಳೇನು? ಕೊರೊನಾದಿಂದ ಅವರು ಬಚಾವಾಗಿದ್ದು ಹೇಗೆ? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಮೋದಿಯನ್ನು ಭೇಟಿ ಮಾಡುವವರಿಗೆ ನಿಯಮಗಳು..
ಕೋವಿಡ್ 19 ಅಲೆ ಭಾರತದಲ್ಲಿ ಆರಂಭವಾದಾಗಿನಿಂದ ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವುದು ಸ್ವತಃ ಅವರ ಸಂಪುಟ ಸಚಿವರಿಗೇ ಕಷ್ಟವಾಗಿದೆ. ವೈಯಕ್ತಿಕ ಭೇಟಿಯನ್ನು ಸಾಧ್ಯವಾದಷ್ಟು ನಿಯಂತ್ರಿಸುತ್ತಿರುವ ಮೋದಿ ಎಲ್ಲರೊಂದಿಗೆ ಡಿಜಿಟಲ್ ಸಂವಹನ ನಡೆಸುತ್ತಿದ್ದಾರೆ. ಒಂದು ವೇಳೆ ಅನಿವಾರ್ಯ ಕಾರಣದಿಂದ ಮೋದಿಯವರನ್ನು ಭೇಟಿ ಮಾಡಲೇಬೇಕಿದ್ದರೆ ಅಂತಹ ಸಚಿವರು 24 ತಾಸು ಮುಂಚಿತವಾಗಿ ಮಾಡಿಸಿದ ಆರ್ಟಿ ಪಿಸಿಆರ್ ಪರೀಕ್ಷೆಯ ವರದಿಯನ್ನು ತೋರಿಸಿ, ಮಾಸ್ಕ್, ಸ್ಯಾನಿಟೈಸರ್ ಹಾಕಿಕೊಂಡು ಅವರ ಕಚೇರಿಯನ್ನು ಪ್ರವೇಶಿಸಬೇಕಾಗಿದೆ. ಒಳಗೆ ಹೋದ ನಂತರವೂ ಮೋದಿಯವರಿಂದ ಕನಿಷ್ಟ 15 ರಿಂದ 20 ಅಡಿಗಳಷ್ಟು ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದೆಲ್ಲವನ್ನೂ ಪಾಲಿಸುವುದಾದರೆ ಮಾತ್ರ ಮೋದಿಯವರ ಎದುರು ಹೋಗಬಹುದಾಗಿದೆ!
ಈಗಂತೂ ರಾಷ್ಟೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಮತ್ತು ಕೆಲವೇ ಕೆಲವು ಸಚಿವರೊಂದಿಗಿನ ಪ್ರಮುಖ ಸಭೆಗಳನ್ನು ಹೊರತುಪಡಿಸಿ ಬಹುತೇಕ ಸಭೆಗಳು ಆನ್ಲೈನ್ ಮೂಲಕವೇ ನಡೆಯುತ್ತಿವೆ. ಹಾಗೆ ನೋಡಿದರೆ, ಆನ್ಲೈನ್ ಸಭೆ ಆರಂಭವಾದ ಮೇಲೆ ಮೋದಿಗೆ ಮೊದಲಿಗಿಂತಲೂ ಹೆಚ್ಚಿನ ಸಭೆಗಳನ್ನು ನಡೆಸಲು ಸಮಯಾವಕಾಶ ಸಿಗುತ್ತಿದೆ ಎಂದು ಹೇಳಲಾಗುತ್ತಿದೆ.
ಮೋದಿ ಮನೆಯಲ್ಲಿ ಕೂತಿದ್ದೇ ಕಡಿಮೆಯಂತೆ!
ಮೂಲಗಳ ಪ್ರಕಾರ ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಇದ್ದಿದ್ದೇ ಕಡಿಮೆಯಂತೆ! ಕೊರೊನಾ ಆರ್ಭಟದ ನಡುವೆಯೂ ಕಚೇರಿಯ ಕೆಲಸ, ಸಭೆಗಳಲ್ಲಿ ನಿರತರಾಗಿರುವ ಮೋದಿ ಕೆಲವೆಡೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದೂ ಇದೆ. ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ಸೆಪ್ಟೆಂಬರ್ನಲ್ಲಿ ನಡೆದ ಮುಂಗಾರು ಅಧಿವೇಶನ, ಇತ್ತೀಚೆಗಿನ ಬಿಹಾರ ಚುನಾವಣಾ ರ್ಯಾಲಿ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮೋದಿ ಕಾಣಿಸಿಕೊಂಡಿದ್ದಾರೆ.
ಮೋದಿಯೊಟ್ಟಿಗೆ ಓಡಾಡುತ್ತಾ ಅವರ ಪ್ರಮುಖ ಸಭೆ, ಸಮಾರಂಭಗಳನ್ನು ವರದಿ ಮಾಡುವ ದೂರದರ್ಶನದ ವರದಿಗಾರ ಹಾಗೂ ಕ್ಯಾಮರಾಮನ್ ಅವರಿಗೂ ಸಹ ಸಾಕಷ್ಟು ನಿರ್ಬಂಧನೆಗಳನ್ನು ವಿಧಿಸಲಾಗಿದ್ದು ಅವರಿಗೆ ಕಚೇರಿಗೆ ತೆರಳಿ ಕಾರ್ಯ ನಿರ್ವಹಿಸುವುದರಿಂದ ವಿನಾಯಿತಿ ನೀಡುವುದರ ಜೊತೆಗೆ ಬಿಡುವಿನ ಸಂದರ್ಭದಲ್ಲಿ ಹೊರಗೆ ತೆರಳದಂತೆ, ಯಾರನ್ನೂ ಭೇಟಿಯಾಗದಂತೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
ಇನ್ನೇನು ಚಳಿಗಾಲ ಆರಂಭವಾಗಲಿದ್ದು ಕೊರೊನಾ ವ್ಯಾಪಿಸುವ ಸಾಧ್ಯತೆ ಅಧಿಕ ಎಂದು ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಚಿವರಿಗೆ ಮೋದಿಯವರ ಕಚೇರಿ ಪ್ರವೇಶಿಸುವುದು ಇನ್ನಷ್ಟು ಕಠಿಣವಾದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ವಯಸ್ಸಿನಲ್ಲಿ ಹಿರಿಯರಾಗಿರುವ ಮೋದಿ ತಮ್ಮ ಕರ್ತವ್ಯವನ್ನು ಪಾಲಿಸುವುದರ ಜೊತೆಜೊತೆಗೆ ಕೊರೊನಾದಿಂದ ಬಚಾವಾಗಲು ಕೈಗೊಂಡಿರುವ ಮಾರ್ಗಗಳು ಅನುಕರಣೀಯವಾಗಿದೆ.
Published On - 4:09 pm, Mon, 9 November 20