Prashant Kishor: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದುರು ಟಿಎಂಸಿ ಗೆಲ್ಲಿಸಲು ಪ್ರಶಾಂತ್ ಕಿಶೋರ್ ಅನುಸರಿಸಿದ ಚುನಾವಣಾ ತಂತ್ರಗಳು ಒಂದೆರೆಡಲ್ಲ

2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಪ್ರಶಾಂತ್ ಕಿಶೋರ್ ಬಗ್ಗೆ ದೇಶ ನಿಬ್ಬೆರಗಾಗಿ ಗಮನಿಸಿತು. ಇದೀಗ ಅದೇ ಪಕ್ಷದ ಬಿರುಸಿನ ಪ್ರಚಾರವನ್ನು ಪಶ್ಚಿಮ ಬಂಗಾಳದಲ್ಲಿ ವಿಫಲಗೊಳಿಸುವ ಮೂಲಕ ಮತ್ತೊಮ್ಮೆ ಪ್ರಶಾಂತ್ ರಾಷ್ಟ್ರ ರಾಜಕಾರಣಗಳಲ್ಲಿ ಮುನ್ನೆಲೆಗೆ ಬಂದಿದ್ದಾರೆ.

Prashant Kishor: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದುರು ಟಿಎಂಸಿ ಗೆಲ್ಲಿಸಲು ಪ್ರಶಾಂತ್ ಕಿಶೋರ್ ಅನುಸರಿಸಿದ ಚುನಾವಣಾ ತಂತ್ರಗಳು ಒಂದೆರೆಡಲ್ಲ
ಪ್ರಶಾಂತ್​ ಕಿಶೋರ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:May 03, 2021 | 1:38 PM

ಚುನಾವಣಾ ಕಾರ್ಯತಂತ್ರಜ್ಞ ಎಂಬ ಹೊಸ ಪರಿಕಲ್ಪನೆಯನ್ನು ಭಾರತದಲ್ಲಿ ಚಾಲ್ತಿಗೆ ತಂದ ಯಶಸ್ವಿ ರಾಜಕೀಯ ಕಾರ್ಯತಂತ್ರ ನಿಪುಣ (political strategist) ಪ್ರಶಾಂತ್ ಕಿಶೋರ್. 10 ವರ್ಷಗಳ ತಮ್ಮ ವೃತ್ತಿಪಯಣದಲ್ಲಿ 2021ರ ಎರಡು ವಿಧಾನಸಭಾ ಚುನಾವಣೆಗಳು ಅವರಿಗೆ ಅತಿಹೆಚ್ಚು ಸಂತೋಷ ಕೊಟ್ಟಿವೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಪ್ರಶಾಂತ್ ಕಿಶೋರ್ ಬಗ್ಗೆ ದೇಶ ನಿಬ್ಬೆರಗಾಗಿ ಗಮನಿಸಿತು. ಇದೀಗ ಅದೇ ಪಕ್ಷದ ಬಿರುಸಿನ ಪ್ರಚಾರವನ್ನು ಪಶ್ಚಿಮ ಬಂಗಾಳದಲ್ಲಿ ವಿಫಲಗೊಳಿಸುವ ಮೂಲಕ ಮತ್ತೊಮ್ಮೆ ಪ್ರಶಾಂತ್ ರಾಷ್ಟ್ರ ರಾಜಕಾರಣಗಳಲ್ಲಿ ಮುನ್ನೆಲೆಗೆ ಬಂದಿದ್ದಾರೆ.

2019ರಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ತೃಣಮೂಲ ಕಾಂಗ್ರೆಸ್​ ತನ್ನ ಚುನಾವಣಾ ಸಿದ್ಧತೆಯ ಮಾರ್ಗದರ್ಶನಕ್ಕಾಗಿ ನೇಮಿಸಿಕೊಂಡಿತ್ತು. ಟಿಎಂಸಿ ಕರೆಯನ್ನು ಒಪ್ಪಿಕೊಂಡ ಪ್ರಶಾಂತ್, ಬಿಜೆಪಿಯಂಥ ಬೃಹತ್ ಮತ್ತು ಚುರುಕಿನ ರಾಜಕೀಯ ಪಕ್ಷದ ಎದುರು ಪ್ರಾದೇಶಿಕ ಪಕ್ಷವನ್ನು ಗೆಲ್ಲಿಸಲು ತನ್ನಿಂದ ಸಾಧ್ಯವಿದೆ ಎಂದು ಈ ಬಾರಿ ನಿರೂಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಚಾರ ತಂತ್ರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೋಡಿಕೊಳ್ಳುತ್ತಿದ್ದರು. ‘ಚುನಾವಣಾ ಚಾಣಕ್ಯ’ ಎಂದೇ ಬಿಜೆಪಿಯ ಅಭಿಮಾನಿಗಳು ಕರೆಯುವ ಅಮಿತ್​ ಶಾ ಹಲವು ರಾಜ್ಯಗಳಲ್ಲಿ ಪಕ್ಷವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದವರು. ಹಿಂದೆ ಬಿಜೆಪಿಯೊಂದಿಗೆ ಪ್ರಶಾಂತ್ ಕಿಶೋರ್ ಹೊಂದಿದ್ದ ಆಪ್ತ ಒಡನಾಟದ ನಂಟು ಕಡಿಯಲು ಅಮಿತ್​ ಶಾ ಪ್ರಭಾವವೇ ಕಾರಣ ಎಂಬ ಮಾತುಗಳಿವೆ. ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಬಿಜೆಪಿಯ ತಂತ್ರಗಳನ್ನು ರೂಪಿಸಿದರೆ, ಪ್ರಶಾಂತ್ ಕಿಶೋರ್ ಟಿಎಂಸಿಯ ತಂತ್ರಗಳನ್ನು ರೂಪಿಸಿದ್ದರು. ಹೀಗಾಗಿಯೇ ಈಗ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಾಧಿಸಿರುವ ಗೆಲುವು ಪ್ರಶಾಂತ್​ ಕಿಶೋರ್ ಪಾಲಿಗೆ ‘ಸಿಹಿಯಾದ ಸೇಡು’ ತೀರಿಸಿಕೊಂಡ ಖುಷಿಯನ್ನೂ ನೀಡಿದೆ ಎಂದು ಟಿಎಂಸಿಯ ಹಿರಿಯ ನಾಯಕರು ಹೇಳುತ್ತಾರೆ.

ಈ ಬಾರಿ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ. ಪ್ರಶಾಂತ್ ಕಿಶೋರ್ ಮತ್ತು ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (I-PAC) ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷಕ್ಕೂ ಚುನಾವಣಾ ಸಲಹೆಗಳನ್ನು ನೀಡಿತ್ತು. 2018ರಲ್ಲಿ ಹಿರಿಯ ಮುತ್ಸದಿ ಎಂ.ಕರುಣಾನಿಧಿ ನಿಧನದ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದು. ಈ ಬಾರಿ ಡಿಎಂಕೆ ನೆಮ್ಮದಿಯಾಗಿ ಅಧಿಕಾರ ಹಿಡಿಯುವಷ್ಟು ಬಹುಮತ ಪಡೆದು, ಅಧಿಕಾರಕ್ಕೆ ಬಂದಿದೆ. ಈ ಬಾರಿಯ ಚುನಾವಣೆ ಪ್ರಶಾಂತ್ ಕಿಶೋರ್ ಪಾಲಿಗೆ ‘ಹಂಸಗೀತೆ’ ಎಂದು ಹೇಳಲಾಗುತ್ತಿದೆ. ಅಂದರೆ ಇಲ್ಲಿಂದಾಚೆಗೆ ಪ್ರಶಾಂತ್ ಕಿಶೋರ್ ಚುನಾವಣೆ ಗೆಲ್ಲಿಸಿಕೊಡುವ ತಮ್ಮ ಕಸುಬಿನಿಂದ ದೂರ ಉಳಿಯಲಿದ್ದೇನೆ ಎಂದು ಪ್ರಶಾಂತ್ ಘೋಷಿಸಿಕೊಂಡಿದ್ದಾರೆ. ಬದುಕಿನಲ್ಲಿ ಬೇರೆ ಏನಾದರೂ ಮಾಡುತ್ತೇನೆ ಎಂದು ಹೇಳಿದ್ದಾರೆ ಪ್ರಶಾಂತ್.

ಇದನ್ನೂ ಓದಿ: ‘ದೀದೀ.. ಓ ದೀದಿ’ ಎಂದು ಕರೆದ ಪ್ರಧಾನಿ ಮೋದಿ; ‘ಒಂದೇ ಕಾಲಲ್ಲಿ ಪಶ್ಚಿಮ ಬಂಗಾಳವನ್ನು ಗೆಲ್ಲುತ್ತೇನೆಂದು’ ಗುಡುಗಿದ ಮಮತಾ ಬ್ಯಾನರ್ಜಿ

Mamata Banerjee

ಮಮತಾ ಬ್ಯಾನರ್ಜಿ

ಗೆಲುವಿಗಾಗಿ ಅವಿರತ ಶ್ರಮ ಟಿಎಂಸಿ ನಾಯಕರು ಪ್ರಶಾಂತ್ ಕಿಶೋರ್ ಅವರನ್ನು ಸಂಪರ್ಕಿಸಿದ್ದು 2019ರಲ್ಲಿ. ಪಶ್ಚಿಮ ಬಂಗಾಳದ ಬಗ್ಗೆ ಬಿಜೆಪಿ ಹೊಂದಿರುವ ಮಹತ್ವಾಕಾಂಕ್ಷೆಯ ಅರಿವಿದ್ದ ಪ್ರಶಾಂತ್ ಕಿಶೋರ್ ಟಿಎಂಸಿಯನ್ನು ಗೆಲುವಿನ ದಡ ಸೇರಿಸುವುದು ಸುಲಭದ ಕೆಲಸವಲ್ಲ ಎಂದು ಅರ್ಥ ಮಾಡಿಕೊಂಡಿದ್ದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎಂದಿಗೂ ಅಧಿಕಾರದಲ್ಲಿ ಇರಲಿಲ್ಲ. ಆದರೆ ತನ್ನನ್ನು ಅಧಿಕಾರದಿಂದ ದೂರ ಇಡಬಹುದಾದ ಹಲವು ಅಡೆತಡೆಗಳನ್ನು ಬಿಜೆಪಿ ನಾಜೂಕಾಗಿ ದೂರ ಸರಿಸಿಕೊಂಡಿತ್ತು. ಇದನ್ನು ಅರ್ಥ ಮಾಡಿಕೊಂಡೇ ಪ್ರಶಾಂತ್ ಕಿಶೋರ್ ಕೆಲಸ ಆರಂಭಿಸಿದರು.

ಕಚೇರಿ ಆರಂಭಿಸಲೆಂದು ಐ-ಪ್ಯಾಕ್​ನ ಮೊದಲ ತಂಡ ಕೊಲ್ಕತ್ತಾಕ್ಕೆ ಬಂದಿದ್ದು ಜುಲೈ 2019ರಲ್ಲಿ. ಟಿಎಂಸಿಯ ಪ್ರಚಾರದ ಮೇಲೆ ಪ್ರಶಾಂತ್ ಕಿಶೋರ್​ರ ಪ್ರಭಾವ ಎಲ್ಲ ಹಂತದಲ್ಲಿಯೂ ಇತ್ತು. ಜನರನ್ನು ಕೇಂದ್ರೀಕರಿಸಿ ರೂಪಿಸಿದ ದೀದಿ-ಕೆ-ಬೋಲೋ (ದೀದಿಗೆ ಹೇಳಿ) ಕಾರ್ಯಕ್ರಮದಿಂದ ದುವಾರೆ ಸರ್ಕಾರ್ (ನಿಮ್ಮ ಮನೆ ಬಾಗಿಲಿಗೆ ಸರ್ಕಾರ) ಯೋಜನೆಯವರೆಗೂ ಹಲವು ಘೋಷಣೆಗಳಲ್ಲಿ ಕಿಶೋರ್ ಕೈಚಳಕವಿತ್ತು. ಆಕರ್ಷಕ ಘೋಷವಾಕ್ಯಗಳು ಕಿಶೋರ್​ರ ಕೈಚಳಕದಲ್ಲಿ ಮೂಡಿಬಂದವು.

ಪಶ್ಚಿಮ ಬಂಗಾಳದಲ್ಲಿ ಒಳಗಿನವರು-ಹೊರಗಿನವರು ಕಥನ ಕಟ್ಟಿದ್ದು ಸಹ ಇದೇ ಪ್ರಶಾಂತ್ ಕಿಶೋರ್. ದೆಹಲಿಯಿಂದ ಬರುತ್ತಿದ್ದ ಬಿಜೆಪಿ ನಾಯಕರು ಬಂಗಾಳದ ಸಾಂಸ್ಕೃತಿಕ ರಾಯಭಾರಿಗಳ ಬಗ್ಗೆ ಮಾತನಾಡಲು ಆರಂಭಿಸಿದಾಗ ಪ್ರಶಾಂತ್ ಕಿಶೋರ್ ಒಳಗಿನವರು-ಹೊರಗಿನವರು ವಿಚಾರವನ್ನು ಮುನ್ನೆಲೆಗೆ ಬರುವಂತೆ ಮಾಡಿ ತಿರುಗೇಟು ನೀಡಿದರು.

West-Bengal-Win

ಪಶ್ಚಿಮ ಬಂಗಾಳದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಬಂಗಾಳದ ಮಗಳು ‘ಬಾಂಗ್ಲಾ ನಿಜೆರ್ ಮೆಯೆಕಿ ಚಾಯ್ (ಬಂಗಾಳಕ್ಕೆ ಅದರ ಮಗಳು ಮಾತ್ರ ಬೇಕು) ಎಂಬ ಘೋಷಣೆಯನ್ನು ನಾವು ಮುನ್ನೆಲೆಗೆ ತಂದೆವು. ಜನರು ಇದನ್ನು ಮೆಚ್ಚಿಕೊಂಡರು. ಬಿಜೆಪಿ ತನ್ನ ಸಕಲ ಸಾಮರ್ಥ್ಯವನ್ನೂ ಬಂಗಾಳದಲ್ಲಿ ವಿನಿಯೋಗಿಸಿತು. ಇತರ ರಾಜ್ಯಗಳ ಶಾಸಕರು, ಸಂಸದರು, ಕೇಂದ್ರ ಸಚಿವರು ಬಂಗಾಳದಲ್ಲಿ ಪ್ರಚಾರ ನಡೆಸಿದರು. ಬಿಜೆಪಿಯ ಈ ಪ್ರಯತ್ನ ಉಲ್ಟಾ ಹೊಡೆಯಿತು’ ಎಂದು ಐ-ಪ್ಯಾಕ್​ ಸಂಸ್ಥೆಯಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಅರ್ಜುನ್ ದತ್ತಾ ಹೇಳುತ್ತಾರೆ. ಬಹುಕಾಲದಿಂದ ಪ್ರಶಾಂತ್​ ಕಿಶೋರ್ ಜೊತೆಗಿರುವ ದತ್ತಾ, ಐ-ಪ್ಯಾಕ್​ ಆರಂಭವಾದ ದಿನದಿಂದಲೂ ಅದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಐ-ಪ್ಯಾಕ್ ಬಂದ ನಂತರ ಸುಮಾರು 300 ಸ್ವಯಂಸೇವಕರನ್ನು ಗುರುತಿಸಿಕೊಳ್ಳಲಾಯಿತು. ಇದರಲ್ಲಿ ಬಹುತೇಕರು ಸ್ಥಳೀಯರು ಎನ್ನುವುದು ಗಮನಾರ್ಹ ಸಂಗತಿ. ಇವರನ್ನು ರಾಜ್ಯದ ವಿವಿಧ ಭಾಗಗಳಿಗೆ, ತಾಲ್ಲೂಕು, ಹಳ್ಳಿಗಳಿಗೆ ಕಳುಹಿಸಿ ವಾಸ್ತವ ಸ್ಥಿತಿ ಏನು ಎಂಬುದನ್ನು ಗ್ರಹಿಸಲಾಯಿತು.

2016ರಿಂದ ಟಿಎಂಸಿ ರಾಜ್ಯದಲ್ಲಿ ಏನೆಲ್ಲಾ ಕೆಲಸ ಮಾಡಿದೆ ಎಂಬುದನ್ನು ಪರಿಶೀಲಿಸಿದ ತಂಡವು ಕಳೆದ ಡಿಸೆಂಬರ್​ನಲ್ಲಿ ‘ದೀದಿ-ಕೆ-ಬೋಲೊ’ (ದೀದಿಗೆ ಹೇಳಿ) ಆಂದೋಲನ ಆರಂಭಿಸಿತು. ಜನರು ತಮ್ಮ ಸಮಸ್ಯೆಗಳನ್ನು ದೂರವಾಣಿ ಮೂಲಕ ಅಥವಾ ಇಮೇಲ್ ಮೂಲಕ ದಾಖಲಿಸಲು ಅವಕಾಶ ಮಾಡಿಕೊಡುವ ಯೋಜನೆಯಿದು. ಈ ಕಾರ್ಯಕ್ರಮವು ಪಕ್ಷಕ್ಕೆ ಜನರೊಂದಿಗೆ ನೇರ ಸಂಪರ್ಕ ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇದಾದ ನಂತರ ‘ಬಾಂಗ್ಲಾರ್ ಗರ್ಬೊ ಮಮತಾ’ (ಬಂಗಾಳದ ಹೆಮ್ಮೆ ಮಮತಾ) ಘೋಷವಾಕ್ಯ ಬಳಕೆ ಆರಂಭವಾಯಿತು.

‘ಬಂಗಧ್ವನಿ ಯಾತ್ರಾ’ ಮೂಲಕ ಟಿಎಂಸಿಯ ಹಲವು ಹಂತಗಳ ನಾಯಕರು ಮತ್ತು ಕಾರ್ಯಕರ್ತರು ವಾರ್ಡ್​ ಮಟ್ಟಮಟ್ಟದಲ್ಲಿ ಮನೆಮನೆಗೆ ಭೇಟಿ ನೀಡಿದರು. ಜನ ಸೇರುವ ಕಡೆ ಸಭೆಗಳನ್ನು ನಡೆಸಿ, ಟೀಸ್ಟಾಲ್​ಗಳಲ್ಲಿ ಚರ್ಚೆಗೆ ಚಾಲನೆ ನೀಡಿ ಮತ್ತು ಸಾರ್ವಜನಿಕ ಉದ್ಯಾನಗಳಲ್ಲಿದ್ದವರನ್ನು ಮಾತಿಗೆಳೆದು ಟಿಎಂಸಿ ಕಾರ್ಯಕರ್ತರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಆರಂಭಿಸಿದರು. ಅವುಗಳ ಲೋಪದೋಷಗಳ ಬಗ್ಗೆ ಜನರ ಮಾತನ್ನು ಕೇಳಿಸಿಕೊಳ್ಳುತ್ತಿದ್ದರು. ಆಡಳಿತ ಚುಕ್ಕಾಣಿ ಹಿಡಿದವರಿಗೆ ಜನರ ಅಭಿಪ್ರಾಯಗಳನ್ನು ತಿಳಿಸಿದರು.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ: ದಕ್ಷಿಣದಲ್ಲಿ ನಡೆಯಲಿಲ್ಲ ಬಿಜೆಪಿ ಜಾದೂ, ಎಲ್ಲೆಡೆ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್​, ಟಿಎಂಸಿ ಗೆಲುವಿನಲ್ಲಿದೆ ಹಲವು ಪಾಠ

Narendra Modi And Mamata Banerjee

ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ

ಟಿಎಂಸಿ ಡಿಜಿಟಲ್ ವೇದಿಕೆಗಳಿಗೆ ಹೊಸ ಸ್ಪರ್ಶ ತೃಣಮೂಲ ಕಾಂಗ್ರೆಸ್​ನ ಸಾಮಾಜಿಕ ಮತ್ತು ಡಿಜಿಟಲ್​ ವೇದಿಕೆಗಳನ್ನು ಪ್ರಶಾಂತ್ ಕಿಶೋರ್ ಹೊಸ ವೇಗದಲ್ಲಿ ಬಳಸಲು ಆರಂಭಿಸಿದರು. ಬಿಜೆಪಿ ಮಾಡುತ್ತಿದ್ದ ಆರೋಪಕ್ಕೆ ಉತ್ತರಿಸಲು, ಮಮತಾ ಬ್ಯಾನರ್ಜಿ ಸರ್ಕಾರದ ಸಾಧನೆಗಳ ಬಗ್ಗೆ ಈ ವೇದಿಕೆಗಳಲ್ಲಿ ನಿಯಮಿತವಾಗಿ ಪ್ರಸ್ತಾಪಿಸಲಾಗುತ್ತಿತ್ತು. ಪಕ್ಷ ಮತ್ತು ಮಮತಾರ ಇಮೇಜ್​ ಬೆಳೆಸಲು ಈ ವೇದಿಕೆಗಳನ್ನು ಪ್ರಶಾಂತ್ ಕಿಶೋರ್ ಉತ್ಸಾಹದಿಂದ ಬಳಸಿಕೊಂಡರು.

ಬಿಜೆಪಿಯು ಅಖಿಲ ಭಾರತ ಐಟಿ ಘಟಕದ ಅಧ್ಯಕ್ಷ ಅಮಿತ್ ಮಾಳವೀಯರನ್ನೇ ಪಶ್ಚಿಮ ಬಂಗಾಳಕ್ಕೆ ಕರೆತಂದಿತ್ತು. ಸಾಮಾಜಿಕ ಮತ್ತು ಡಿಜಿಟಲ್ ಮೀಡಿಯಾ ಪ್ರಚಾರದಲ್ಲಿ ಬಿಜೆಪಿ ಅಬ್ಬರದಿಂದ ತೊಡಗಿಸಿಕೊಂಡಿತ್ತು. ಆದರೆ ನಾವು ಅವರ ದಾರಿಯಲ್ಲೇ ನಡೆದು, ಅವರನ್ನೇ ಈ ಆಟದಲ್ಲಿ ಸೋಲಿಸಿದೆವು ಎಂದು ದತ್ತಾ ಹೆಮ್ಮೆಯಿಂದ ಹೇಳುತ್ತಾರೆ.

ಸಾರ್ವಜನಿಕವಾಗಿ ನೀಡುತ್ತಿದ್ದ ಹೇಳಿಕೆಗಳಲ್ಲಿ ಪ್ರಶಾಂತ್ ಕಿಶೋರ್ ಸದಾ ತೃಣಮೂಲ ಕಾಂಗ್ರೆಸ್ ಗೆಲುವಿನ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನೇ ಆಡುತ್ತಿದ್ದರು. ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ, ಎರಡಂಕಿ ದಾಟಿದರೆ ನಾನು ಈ ಕೆಲಸವನ್ನೇ ಬಿಟ್ಟುಬಿಡುತ್ತೇನೆ. ಇದಕ್ಕಿಂತಲೂ ಸಂಪೂರ್ಣ ಭಿನ್ನವಾದ ಬೇರೆ ಏನಾದರೂ ಮಾಡುತ್ತೇನೆ ಎಂದು ಕಿಶೋರ್ ಹೇಳುತ್ತಿದ್ದರು. ಈಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಸನಿಹಕ್ಕೆ ಬಂದಿಲ್ಲ, ಆದರೆ ಎರಡಂಕಿಯನ್ನು ದಾಟಿದೆ. ಈ ಹಿನ್ನೆಲೆಯಲ್ಲಿ ಕಿಶೋರ್ ತಮ್ಮ ಕೆಲಸ ಬದಲಿಸುವುದಾಗಿ ಘೋಷಿಸಿದ್ದಾರೆ.

ಗೆಲ್ಲುವ ಎತ್ತಿಗೇ ಮಾಲೀಷು: ಪ್ರಶಾಂತ್ ವಿರುದ್ಧದ ಪ್ರಮುಖ ಆರೋಪ ತಮಿಳುನಾಡಿನಲ್ಲಿಯೂ ಡಿಎಂಕೆ ಗೆಲುವಿನಲ್ಲಿ ಐ-ಪ್ಯಾಕ್ ಪ್ರಧಾನ ಪಾತ್ರ ನಿರ್ವಹಿಸಿತು. ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್​ರನ್ನು ಕಾರ್ಯಕರ್ತರ ಎದುರು ದೊಡ್ಡ ನಾಯಕನಾಗಿ ಬಿಂಬಿಸಿದದು ಮಾತ್ರವಲ್ಲದೇ ಕೊವಿಡ್ ಲಾಕ್​ಡೌನ್ ವೇಳೆ ಹಲವು ಕಾರ್ಯಕ್ರಮಗಳ ಮೂಲಕ ಪಕ್ಷಕ್ಕೆ ಜನಸಂಪರ್ಕ ಹೆಚ್ಚಾಗುವಂತೆ ಮಾಡಿತು.

ಸದಾ ಗೆಲ್ಲುವ ಪಕ್ಷದ ಪರವಾಗಿಯೇ ಪ್ರಶಾಂತ್ ಕಿಶೋರ್ ಕೆಲಸ ಮಾಡುತ್ತಾರೆ ಎಂಬ ಆರೋಪವೂ ಇದೆ. ಗುಜರಾತ್​ನಲ್ಲಿ ಬಿಜೆಪಿ ಪರ (2012), ಬಿಹಾರದಲ್ಲಿ ಜೆಡಿಯು ಪರ (2015), ಪಂಜಾಬ್​​ನಲ್ಲಿ ಕಾಂಗ್ರೆಸ್ ಪರ (2017), ಆಂಧ್ರ ಪ್ರದೇಶದಲ್ಲಿ ವೈಎಸ್​ಆರ್​ ಕಾಂಗ್ರೆಸ್ ಪರ (2019), ಮಹಾರಾಷ್ಟ್ರದಲ್ಲಿ ಶಿವಸೇನೆ ಪರ (2019) ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಪರ (2020) ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದಾರೆ.

ಪ್ರಶಾಂತ್ ಕಿಶೋರ್ ನೆರವಿನಿಂದಲೇ ನರೇಂದ್ರ ಮೋದಿ, ನಿತೀಶ್ ಕುಮಾರ್, ವೈ.ಎಸ್.ಜಗನ್​ಮೋಹನ್ ರೆಡ್ಡಿ, ಅಮರಿಂದರ್ ಸಿಂಗ್, ಉದ್ಧವ್ ಠಾಕ್ರೆ ಮತ್ತು ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಕೆಲವರು ವಿಶ್ಲೇಷಿಸುತ್ತಾರೆ. ಆದರೆ ಇವರೆಲ್ಲರೂ ಪ್ರಬಲ ನಾಯಕರಾಗಿದ್ದು, ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಅಧಿಕಾರಕ್ಕೆ ಬರುವಷ್ಟು ಪ್ರಬಲರಾಗಿದ್ದರು. ಇದನ್ನು ಗಮನಿಸಿಯೇ ಇವರ ಪರವಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದರು ಎಂದು ಹಲವರು ಅಪಸ್ವರ ತೆಗೆದಿದ್ದರು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವಿನ ನಂತರ ದೇಶದ ತೃತೀಯ ರಂಗದಲ್ಲಿ ಹೊಸ ಶಕ್ತಿಯೊಂದು ಪ್ರವಹಿಸುತ್ತಿದೆ. ಬಿಜೆಪಿಯನ್ನು ಎದುರುಹಾಕಿಕೊಂಡು ಪ್ರಾದೇಶಿಕಪಕ್ಷವೊಂದು ಜಯಗಳಿಸಿರುವುದು ಹಲವು ರಾಜ್ಯಗಳಲ್ಲಿ ಹೊಸ ಕನಸುಗಳನ್ನು ಬಿತ್ತಿದೆ. ಆದರೆ ಪ್ರಶಾಂತ್ ಕಿಶೋರ್ ಮಾತ್ರ ತಮ್ಮ ವೃತ್ತಿ ಬದಲಿಸುವುದಾಗಿ ಹೇಳುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟುವುದಿಲ್ಲ, ದಾಟಿದರೆ ನಾನು ಇನ್ನು ಮುಂದೆ ಈ ಕೆಲಸ ಮಾಡುವುದಿಲ್ಲ ಎಂದು ಪ್ರಶಾಂತ್ ಸವಾಲು ಹಾಕಿದ್ದರು. ಆದರೆ ಇದೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಪ್ರಶಾಂತ್​ ಕಿಶೋರ್​ರ ಮುಂದಿನ ನಡೆಯ ಬಗ್ಗೆ ಕಾಲವೇ ಉತ್ತರಿಸಬೇಕಿದೆ.

ಪಶ್ಚಿಮ ಬಂಗಾಳದ ಒಟ್ಟು 294 ಸ್ಥಾನಗಳ ಪೈಕಿ 291 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಟಿಎಂಸಿ 212, ಬಿಜೆಪಿ 77, ಪಕ್ಷೇತರರು 1, ಆರ್​ಎಸ್​ಎಂಪಿ 1 ಸ್ಥಾನದಲ್ಲಿ ಜಯಗಳಿಸಿದೆ. 1 ಸ್ಥಾನದ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಮತಗಳಿಕೆ ಪ್ರಮಾಣ ಲೆಕ್ಕ ಹಾಕುವುದಾದರೆ ಟಿಎಂಸಿ ಶೇ 47.9, ಬಿಜೆಪಿ ಶೇ 38.1 ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿವೆ.

(How Prashant Kishor faced challenge of Narendra Modi Amith Shah Duo in West Bengal Election Led TMC Mamata Banerjee Win)

ಇದನ್ನೂ ಓದಿ: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲು: ಟೀಂ ಗೆದ್ದು ಕ್ಯಾಪ್ಟನ್ ಸೋತಂತೆ ಆಗಿದೆ ಟಿಎಂಸಿ ಸ್ಥಿತಿ

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ: ಭಾರತದಲ್ಲಿ ಬಿಜೆಪಿ ಮೇಲುಗೈಗೆ ಕಡಿವಾಣ ಹಾಕಲು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬಳಸಿದ ತಂತ್ರಗಳು ಮಾದರಿಯಾಗಬಲ್ಲವೇ?

Published On - 1:29 pm, Mon, 3 May 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್