ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲು: ಟೀಂ ಗೆದ್ದು ಕ್ಯಾಪ್ಟನ್ ಸೋತಂತೆ ಆಗಿದೆ ಟಿಎಂಸಿ ಸ್ಥಿತಿ

Mamata Banerjee: ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿದ್ದರೂ, ಟಿಎಂಸಿಗೆ ವಿಧಾನಸಭೆಯಲ್ಲಿ ಮೂರನೇ ಎರಡರಷ್ಟು ನಿಚ್ಚಳ ಬಹುಮತ ಇರುವುದರಿಂದ ಮಮತಾ ದೀದಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಕಾನೂನಿನ ಯಾವುದೇ ಅಡ್ಡಿ ಆತಂಕ ಇಲ್ಲ.

ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲು: ಟೀಂ ಗೆದ್ದು ಕ್ಯಾಪ್ಟನ್ ಸೋತಂತೆ ಆಗಿದೆ ಟಿಎಂಸಿ ಸ್ಥಿತಿ
ಮಮತಾ ಬ್ಯಾನರ್ಜಿ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: preethi shettigar

Updated on:May 03, 2021 | 8:38 AM

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಫಲಿತಾಂಶ ಹೊಸ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ನಂತರ ಕಾಂಗ್ರೆಸ್, ಎಡಪಕ್ಷಗಳು ಬಂಗಾಳದಲ್ಲಿ ಶೂನ್ಯ ಸಂಪಾದನೆ ಮಾಡಿವೆ. ಟಿಎಂಸಿ ಮೂರನೇ ಎರಡರಷ್ಟು ಬಹುಮತವನ್ನು ಮತ್ತೆ ಪಡೆದು ಅಧಿಕಾರದ ಗಾದಿಯನ್ನು ತನ್ನದಾಗಿಸಿಕೊಂಡಿದೆ. ಆದರೆ, ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ವಿವಾದ ಶುರುವಾಗಿದೆ. ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕೂಡ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಚಿಂತನೆ ನಡೆಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಂಗಾಳದ ಹೆಣ್ಣು ಹುಲಿ ಮತ್ತೆ ಜೋರಾಗಿಯೇ ಗರ್ಜಿಸಿದೆ. ಬಿಜೆಪಿ, ಎಡಪಕ್ಷ, ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿ ಮತ್ತೆ ಅಧಿಕಾರಕ್ಕೇರಲು ಬಂಗಾಳದ ಮನೆ ಮಗಳು ಮಮತಾ ದೀದಿ ಯಶಸ್ವಿಯಾಗಿದ್ದಾರೆ. ಟಿಎಂಸಿ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತ ಕೂಡ ಸಿಕ್ಕಿದೆ. ಆದರೇ, ಟಿಎಂಸಿ ಸೇನೆಯ ದಂಡನಾಯಕಿ ಮಮತಾ ಬ್ಯಾನರ್ಜಿಯೇ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಟಿಎಂಸಿ ಕಾರ್ಯಕರ್ತರ ನೈತಿಕ ಬಲ ಕುಸಿಯಬಾರದು ಎಂಬ ಕಾರಣದಿಂದ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆ ಭವಾನಿಪುರ ಕ್ಷೇತ್ರವನ್ನು ಆಪ್ತ ಶೋಭನ್ ದೇಬ್ ಚಟ್ಟೋಪಾಧ್ಯಾಯಗೆ ಬಿಟ್ಟುಕೊಟ್ಟು ನಂದಿಗ್ರಾಮದಿಂದ ಸ್ಪರ್ಧೆ ಮಾಡಿದ್ದರು. ಇದರಿಂದ ಟಿಎಂಸಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಾಗಿದ್ದು ನಿಜ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲೂ ತಾವು 50 ಸಾವಿರ ಮತಗಳಿಂದ ಗೆಲ್ಲುವುದಾಗಿ ಮಮತಾ ಆತ್ಮವಿಶ್ವಾಸದಿಂದ ಹೇಳಿದ್ದು ಉಂಟು. ಆದರೆ, ಈಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮಮತಾ ಬ್ಯಾನರ್ಜಿ 1,736 ಮತಗಳಿಂದ ಸೋತಿದ್ದಾರೆ. ಹಳೆಯ ಶಿಷ್ಯ, ಈಗಿನ ಎದುರಾಳಿ ಬಿಜೆಪಿಯ ಸುವೇಂದು ಅಧಿಕಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟೀಮ್ ಗೆದ್ದು, ಟೀಮ್ ಕ್ಯಾಪ್ಟನ್ ಸೋತ ಅನುಭವ ಟಿಎಂಸಿಗೆ ಆಗುತ್ತಿದೆ. ಭಾನುವಾರ ಸಂಜೆ ಮೊದಲಿಗೆ ಮಮತಾ ಬ್ಯಾನರ್ಜಿಯೇ ಗೆದ್ದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಒಂದು ಗಂಟೆ ಬಳಿಕ ಫಲಿತಾಂಶ ಉಲ್ಟಾ ಆಗಿತ್ತು. ಮಮತಾ ಬ್ಯಾನರ್ಜಿ ಸೋತು, ಬಿಜೆಪಿಯ ಸುವೇಂದು ಅಧಿಕಾರ ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿತ್ತು. ಇದು ಗೊಂದಲ, ಅನುಮಾನಕ್ಕೆ ಕಾರಣವಾಯಿತು. ಆದರೆ, ಭಾನುವಾರ ಸಂಜೆ ಮಾತನಾಡಿದ ಮಮತಾ ಬ್ಯಾನರ್ಜಿ, ನಂದಿಗ್ರಾಮದ ಬಗ್ಗೆ ಮರೆತುಬಿಡಿ, ಇದು ಪಂದ್ಯ ಇದ್ದ ಹಾಗೆ. ನಂದಿಗ್ರಾಮದ ಜನರ ತೀರ್ಪುನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಅಗತ್ಯಬಿದ್ದರೇ, ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದ್ದರು.

ನಂದಿಗ್ರಾಮ ಕ್ಷೇತ್ರದ ಮತಎಣಿಕೆಯಲ್ಲಿ ಲೋಪ ಆಗಿದೆ. ಅಮಾನ್ಯ ಮತಗಳನ್ನು ಬಿಜೆಪಿ ಮತಗಳೆಂದು ಘೋಷಿಸಲಾಗಿದೆ. ಇವಿಎಂ ಟ್ಯಾಂಪರ್ ಮಾಡಲಾಗಿದೆೆ. ಆಗಿಂದ್ದಾಗ್ಗೆ ಮತ ಎಣಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಂಚೆ ಮತಗಳನ್ನು ಸರಿಯಾಗಿ ಎಣಿಕೆ ಮಾಡದೆ ವಂಚಿಸಲಾಗಿದೆ. ಹೀಗಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಚುನಾವಣಾ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಮರು ಮತಎಣಿಕೆ ಮಾಡಬೇಕೆಂದು ಆಗ್ರಹಿಸಿ ಚುನಾವಣಾ ಅಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ ಬರೆದು ಒತ್ತಾಯಿಸಿದೆ. ಆದರೆ, ಚುನಾವಣಾ ಅಧಿಕಾರಿ ಮರು ಮತಎಣಿಕೆಯ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ .

ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ 1,089 ನೋಟಾ ಮತ ಚಲಾವಣೆಯಾಗಿವೆ. ಎಡಪಕ್ಷದ ಅಭ್ಯರ್ಥಿ 6,198 ಮತಗಳನ್ನು ಪಡೆದಿದ್ದಾರೆ. ಮಮತಾ ಬ್ಯಾನರ್ಜಿ 1,07,937 ಮತಗಳನ್ನು ಪಡೆದರೆ, ಬಿಜೆಪಿಯ ಅಭ್ಯರ್ಥಿ ಸುವೇಂದು ಅಧಿಕಾರಿ 1,09,673 ಮತಗಳನ್ನು ಪಡೆದಿದ್ದಾರೆ, ಇದರಿಂದಾಗಿ ಸುವೇಂದು ಅಧಿಕಾರಿಗೆ 1,736 ಮತಗಳ ಅಂತರದಿಂದ ಗೆಲುವು ಲಭಿಸಿದೆ ಎಂದು ಚುನಾವಣಾ ಆಯೋಗ ಹೇಳಿದೆ. ರಾತ್ರಿ ಹನ್ನೊಂದು ಗಂಟೆಯಾದರೂ ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ನಂದಿಗ್ರಾಮ ಕ್ಷೇತ್ರದ ಮತಎಣಿಕೆಯ ಪೂರ್ಣ ವಿವರ ಅಪ್​ಡೇಟ್ ಆಗಿರಲಿಲ್ಲ. ಈಗ ಟಿಎಂಸಿ ಪಕ್ಷವು ನಂದಿಗ್ರಾಮ ಕ್ಷೇತ್ರದಲ್ಲಿ ಮರು ಮತಎಣಿಕೆಗೆ ಮನವಿ ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಚಿಂತಿಸುತ್ತಿದೆ.

ಮಮತಾ ಸೋತಿದ್ದರೂ, ಸಿಎಂ ಗಾದಿಗೇರಬಹುದು ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿದ್ದರೂ, ಟಿಎಂಸಿಗೆ ವಿಧಾನಸಭೆಯಲ್ಲಿ ಮೂರನೇ ಎರಡರಷ್ಟು ನಿಚ್ಚಳ ಬಹುಮತ ಇರುವುದರಿಂದ ಮಮತಾ ದೀದಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಕಾನೂನಿನ ಯಾವುದೇ ಅಡ್ಡಿ ಆತಂಕ ಇಲ್ಲ. ಮುಂದಿನ 6 ತಿಂಗಳಲ್ಲಿ ತಮ್ಮ ಬೆಂಬಲಿಗ ಶಾಸಕರೊಬ್ಬರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಆ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದರೇ, ಸಿಎಂ ಗಾದಿಯಲ್ಲಿ ಮಮತಾ ಬ್ಯಾನರ್ಜಿ ಮುಂದುವರೆಯಬಹುದು. ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲ. ಹೀಗಾಗಿ ಮುಂದಿನ 6 ತಿಂಗಳಲ್ಲಿ ವಿಧಾನಸಭೆಗೆ ಆಯ್ಕೆಯಾಗಲೇಬೇಕು. ಮಮತಾ ಬ್ಯಾನರ್ಜಿ ಮತ್ತೆ ಹಳೆಯ ಕ್ಷೇತ್ರ ಕೋಲ್ಕತ್ತಾದ ಭವಾನಿಪುರ ಕ್ಷೇತ್ರ ಅಥವಾ ಬೇರೆ ಯಾವುದಾದರೂ ಗೆಲುವಿನ ಭರವಸೆ ಇರುವ ಕ್ಷೇತ್ರದ ಉಪಚುನಾವಣೆಗೆ ಮುಖ ಮಾಡಬಹುದು.

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ: ಭಾರತದಲ್ಲಿ ಬಿಜೆಪಿ ಮೇಲುಗೈಗೆ ಕಡಿವಾಣ ಹಾಕಲು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬಳಸಿದ ತಂತ್ರಗಳು ಮಾದರಿಯಾಗಬಲ್ಲವೇ?

S-Nijalingappa

ದಿವಂಗತ ಎಸ್.ನಿಜಲಿಂಗಪ್ಪ

ಕರ್ನಾಟಕದಲ್ಲೂ ಸಿಎಂ ಅಭ್ಯರ್ಥಿ ಸೋತಿದ್ದರು! ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಈಗ ಎದುರಾಗಿರುವ ಪರಿಸ್ಥಿತಿಯೇ ಕರ್ನಾಟಕದಲ್ಲೂ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರಿಗೆ ಎದುರಾಗಿತ್ತು. 1962ರಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿ ಎಸ್.ನಿಜಲಿಂಗಪ್ಪ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಆದರೆ, ತಮ್ಮ ಸ್ವಂತ ಜಿಲ್ಲೆಯಾದ ಚಿತ್ರದುರ್ಗದ ಹೊಸದುರ್ಗ ಕ್ಷೇತ್ರದಲ್ಲಿ ನಿಜಲಿಂಗಪ್ಪ ಸೋಲು ಅನುಭವಿಸಿದ್ದರು. ದೊಡ್ಡ ನಾಯಕರೇನೂ ಆಗಿರದಿದ್ದ ಟಿ.ಜಿ.ರಂಗಪ್ಪ ವಿರುದ್ಧ ನಿಜಲಿಂಗಪ್ಪ ಹೊಸದುರ್ಗ ಕ್ಷೇತ್ರದಲ್ಲಿ 1962ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಬಳಿಕ ಬಾಗಲಕೋಟೆ ಕ್ಷೇತ್ರದ ಬಿ.ಟಿ.ಮುರನಾಲ್ ಅವರಿಂದ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ನಿಜಲಿಂಗಪ್ಪ ಗೆದ್ದು ಬಂದಿದ್ದರು. ಈಗ ಮಮತಾ ಬ್ಯಾನರ್ಜಿಯ ಮುಂದೆಯೂ 1962ರಲ್ಲಿ ನಿಜಲಿಂಗಪ್ಪ ಹಿಡಿದ ಹಾದಿಯನ್ನೇ ಹಿಡಿಯುವ ಮಾರ್ಗ ಇದೆ.

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್

ಇದನ್ನೂ ಓದಿ: Karnataka By-Elections ಫಲಿತಾಂಶ ವಿಶ್ಲೇಷಣೆ: ಉಪಚುನಾವಣೆಯ ಗೆಲುವು ಬಿಜೆಪಿ ಕಣ್ಣು ತೆರೆಸಲು ಸಾಧ್ಯವೇ?

Published On - 8:29 am, Mon, 3 May 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ