ವಿದ್ಯಾರ್ಥಿನಿಯರ ಖಾಸಗಿ ವಿಡಿಯೊಗಳು ಆನ್​ಲೈನ್​ನಲ್ಲಿ ಲೀಕ್: ರೊಚ್ಚಿಗೆದ್ದ ಯುವತಿಯರಿಂದ  ಪ್ರತಿಭಟನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 18, 2022 | 10:50 AM

ಪ್ರಕರಣ ಸಂಬಂಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ವಿಡಿಯೊ ಲೀಕ್ (Video Leak) ಮಾಡಿದ ಬಾಲಕಿಯನ್ನು ಬಂಧಿಸಲಾಗಿದೆ.

ವಿದ್ಯಾರ್ಥಿನಿಯರ ಖಾಸಗಿ ವಿಡಿಯೊಗಳು ಆನ್​ಲೈನ್​ನಲ್ಲಿ ಲೀಕ್: ರೊಚ್ಚಿಗೆದ್ದ ಯುವತಿಯರಿಂದ  ಪ್ರತಿಭಟನೆ
ಚಂಡಿಗಡ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ
Follow us on

ಚಂಡೀಗಢ: ವಿದ್ಯಾರ್ಥಿನಿಯೊಬ್ಬರು ತನ್ನ ಹಾಸ್ಟೆಲ್ ಸಹಪಾಠಿಗಳ ಖಾಸಗಿ ವಿಡಿಯೊಗಳನ್ನು ಆನ್​ಲೈನ್​ನಲ್ಲಿ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪಂಜಾಬ್​ನ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದಲ್ಲಿ  (Chandigarh University) ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ವಿಡಿಯೊ ಲೀಕ್ (Video Leak) ಮಾಡಿದ ಬಾಲಕಿಯನ್ನು ಬಂಧಿಸಲಾಗಿದೆ.

ಹಾಸ್ಟೆಲ್​ನಲ್ಲಿ ಯುವತಿಯರು ಸ್ನಾನ ಮಾಡುತ್ತಿರುವಾಗ ಯಾರೋ ವಿಡಿಯೊ ಚಿತ್ರೀಕರಿಸಿ, ಆನ್​ಲೈನ್​ನಲ್ಲಿ ಸೋರಿಕೆ ಮಾಡಿದ್ದಾರೆ. ಈ ಬೆಳವಣಿಗೆಯ ನಂತರ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ವಿಶ್ವವಿದ್ಯಾಲಯದ ಆಡಳಿತವು ಪ್ರತಿಭಟನೆಯನ್ನು ಹತ್ತಿಕ್ಕಲು, ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ ಎಂದು ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾವು ಅಥವಾ ಆತ್ಮಹತ್ಯೆಯ ಪ್ರಯತ್ನಗಳು ವರದಿಯಾಗಿಲ್ಲ ಎಂದು ಮೊಹಾಲಿ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೋನಿ ಹೇಳಿದ್ದಾರೆ.

‘ಇದು ಹಾಸ್ಟೆಲ್​ನ ವಿದ್ಯಾರ್ಥಿನಿಯೊಬ್ಬರು ಚಿತ್ರೀಕರಿಸಿ, ಆನ್​ಲೈನ್​ನಲ್ಲಿ ಹಂಚಿಕೊಂಡ ವಿಡಿಯೊಗೆ ಸಂಬಂಧಿಸಿದ ವಿವಾದವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ (ಫೊರೆನ್ಸಿಕ್) ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿಯವರೆಗೆ ಆತ್ಮಹತ್ಯೆಯ ಯಾವುದೇ ಪ್ರಯತ್ನ (ಸಾಯುವ ಮೂಲಕ) ವರದಿಯಾಗಿಲ್ಲ. ವಿದ್ಯಾರ್ಥಿಗಳ ವೈದ್ಯಕೀಯ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಅವರು ಹೇಳಿದ್ದಾರೆ.

ವೀಡಿಯೊ ಸೋರಿಕೆಯಾದ ನಂತರ ಹಲವು ಹುಡುಗಿಯರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್​ಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಪೊಲೀಸರು ತಳ್ಳಿಹಾಕಿದ್ದಾರೆ. ಮೂರ್ಛೆ ಹೋಗಿದ್ದ ಒಬ್ಬ ಒಬ್ಬ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವಳ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟಿ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅವರು, ‘ಇದು ಗಂಭೀರ ವಿಷಯ. ಪ್ರಸ್ತುತ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ವಿದ್ಯಾರ್ಥಿಗಳ ಪೋಷಕರಿಗೆ ಭರವಸೆ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.

ಪಂಜಾಬ್​ ಶಿಕ್ಷಣ ಸಚಿವ ಹರ್​ಜೋತ್ ಸಿಂಗ್ ಬೈನ್ಸ್ ಮಾತನಾಡಿ, ‘ಇದು ತುಂಬಾ ಸೂಕ್ಷ್ಮ ವಿಷಯ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಶಾಂತವಾಗಿರಬೇಕು. ಮಾಧ್ಯಮಗಳೂ ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದರು. ‘ತಪ್ಪು ಮಾಡಿದವರನ್ನು ರಕ್ಷಿಸುವ ಪ್ರಯತ್ನ ನಾನು ಮಾಡುವುದಿಲ್ಲ. ಇದು ನಮ್ಮ ಹೆಣ್ಣುಮಕ್ಕಳ ಘನತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯವಾಗಿದೆ. ಒಂದು ಸಮಾಜವಾಗಿ ಇದು ನಮ್ಮ ಪರೀಕ್ಷೆಯಾಗಿದೆ’ ಎಂದು ಅವರು ಹೇಳಿದ್ದಾರೆ.

Published On - 10:49 am, Sun, 18 September 22