
ಮುಂಬೈ, ಮೇ 29: ಮಧ್ಯಪ್ರದೇಶದ ಶಿವಪುರಿಯಲ್ಲಿ (Shivpuri) ಮಂಗಳವಾರ ರಾತ್ರಿ ಚಲಿಸುವ ರೈಲಿನಿಂದ ಬಿದ್ದು 21 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಉಳಿಸಲು ಪತಿ ಕೂಡ ರೈಲಿನಿಂದ ಹಾರಿದ್ದಾರೆ. ಇದರ ನಂತರ ಆಕೆಯ ಶವ ಸುಮಾರು ಒಂದೂವರೆ ಕಿಲೋಮೀಟರ್ ಹಿಂದಕ್ಕೆ ಪತ್ತೆಯಾಗಿದೆ. ಆಕೆಯ ಪತಿ ಶವವನ್ನು ಭುಜದ ಮೇಲೆ ಹೊತ್ತುಕೊಂಡು ಅರ್ಧ ಕಿಲೋಮೀಟರ್ ನಡೆದಿದ್ದಾರೆ. ರಸ್ತೆ ತಲುಪಿದ ನಂತರ ಅವರು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ತಲುಪಿದ್ದಾರೆ.
ಇದಕ್ಕೂ ಮೊದಲು, ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಅವರನ್ನು ತಡೆದಿದ್ದು, ನೀವು ಓಡಿಹೋಗುತ್ತಿದ್ದೀರಿ, ಇಲ್ಲಿ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರವೇ ನಾವು ನಿಮ್ಮನ್ನು ಹೋಗಲು ಬಿಡುತ್ತೇವೆ ಎಂದು ಹೇಳುತ್ತಿದ್ದರು ಎಂದು ಮೃತ ಯುವತಿಯ ಪತಿ ಆರೋಪಿಸಿದ್ದಾರೆ.
ಗ್ವಾಲಿಯರ್‌ನ ವಕೀಲ ವಿಕಾಸ್ ಜೋಶಿ ಏಪ್ರಿಲ್ 16ರಂದು ಉತ್ತರ ಪ್ರದೇಶದ ಜಲೌನ್‌ನ ಒರೈ ಮೂಲದ ಶಿವಾನಿ ಶರ್ಮಾ ಅವರನ್ನು ವಿವಾಹವಾಗಿದ್ದರು. ವಿಕಾಸ್ ಜೋಶಿ ಇಂದೋರ್‌ನ ಗೋವಿಂದ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಕಾನೂನು ಅಭ್ಯಾಸ ಮಾಡುತ್ತಿದ್ದರು. ಅವರ ಪತ್ನಿ ಶಿವಾನಿ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿದ್ದರು. ಮದುವೆಯಾದ ನಂತರ ಆಕೆಗೆ ಪರೀಕ್ಷೆ ಇದ್ದುದರಿಂದ ವಿಕಾಸ್ ಪರೀಕ್ಷೆಗೆ ಒರೈಗೆ ಕರೆದೊಯ್ದಿದ್ದರು. ಪರೀಕ್ಷೆಯ ನಂತರ ಇಬ್ಬರೂ ಮಂಗಳವಾರ ಗ್ವಾಲಿಯರ್‌ಗೆ ಹಿಂತಿರುಗಿದ್ದರು. ನಂತರ ಸಂಜೆ 6.50ಕ್ಕೆ ಇಂದೋರ್ಗೆ ವಾಪಾಸ್ ಹೋಗಲು ಅವರು ಉಜ್ಜಯಿನಿ ಎಕ್ಸ್‌ಪ್ರೆಸ್ ರೈಲು ಹತ್ತಿದರು.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದವಳನ್ನ 10 ಬಾರಿ ಇರಿದು ಕೊಂದ ಪತಿ: ಪ್ರೀತಿಕೊಂದ ಕೊಲೆಗಾರನಿಗೆ ಶೋಧ
ರೈಲು ಶಿವಪುರಿ ರೈಲ್ವೆ ನಿಲ್ದಾಣದಿಂದ ಹೊರಟ ಸುಮಾರು ನಾಲ್ಕು ಕಿಲೋಮೀಟರ್ ನಂತರ, ರಾತ್ರಿ 9 ಗಂಟೆಯ ಸುಮಾರಿಗೆ. ಶಿವಾನಿ ಇದ್ದಕ್ಕಿದ್ದಂತೆ ವಾಂತಿ ಮಾಡಲು ಪ್ರಾರಂಭಿಸಿದಳು. ಉಸಿರಾಟದ ತೊಂದರೆಯಿಂದ ನನಗೆ ವಾಕರಿಕೆ ಬರುತ್ತಿದೆ ಎಂದ ಆಕೆ ರೈಲಿನ ಬಾಗಿಲ ಬಳಿ ನಿಂತು ಉಸಿರಾಡತೊಡಗಿದರು. ನಾನು ಸ್ವಲ್ಪ ನೀರು ಕೊಟ್ಟೆ. ಅದನ್ನು ಕುಡಿದ ಆಕೆ ಬಾಗಿಲಲ್ಲೇ ನಿಂತಿದ್ದಳು. ಆದರೆ ಆಕೆ ತುಂಬ ಸುಸ್ತಾಗಿದ್ದಳು. ಅವಳು ರೈಲಿನ ಬಾಗಿಲ ಬಳಿ ಕುಳಿತು ವಾಂತಿ ಮಾಡಲು ಪ್ರಾರಂಭಿಸಿದಳು. ನಾನು ಮತ್ತೆ ನೀರು ತರಲು ಸೀಟಿನ ಬಳಿ ಹೋದೆ. ನಾನು ಹಿಂತಿರುಗಿದಾಗ ಆ ಬಾಗಿಲಲ್ಲಿ ನಿಂತಿದ್ದ ಒಬ್ಬ ಹುಡುಗ ಅವಳು ರೈಲಿನಿಂದ ಜಾರಿ ಬಿದ್ದಳು ಎಂದು ಹೇಳಿದನು. ಹೆದರಿದ ನಾನು ತಕ್ಷಣ ರೈಲಿನಿಂದ ಕೆಳಗೆ ಹಾರಿದೆ ಎಂದು ವಿಕಾಸ್ ಜೋಶಿ ಹೇಳಿದ್ದಾರೆ.
ಟಾರ್ಚ್ ಹಿಡಿದುಕೊಂಡು ಆಚೆ ಎಲ್ಲಾದರೂ ಕಾಣುತ್ತಿದ್ದಾಳಾ ಎಂದು ನಾನು ಹೆಂಡತಿಯನ್ನು ಹುಡುಕಿದೆ, ಯಾರೂ ಸಹಾಯ ಮಾಡಲಿಲ್ಲ. ಇದನ್ನು ಕೇಳಿ ಭಯಗೊಂಡು ಸರಪಳಿ ಎಳೆಯಲು ಓಡಿದೆ. ರೈಲು ನಿಲ್ಲಲು ಸಮಯ ತೆಗೆದುಕೊಳ್ಳುತ್ತಿತ್ತು, ನನಗೆ ಏನೂ ತೋಚಲಿಲ್ಲ, ಚಲಿಸುತ್ತಿದ್ದ ರೈಲಿನಿಂದ ಹಾರಿದೆ. ಈ ಸಮಯದಲ್ಲಿ ರೈಲು 1 ಕಿ.ಮೀ ಮುಂದೆ ಹೋಗಿತ್ತು. ನಾನು ಟಾರ್ಚ್ ಹಿಡಿದು ಅವಳನ್ನು ಹುಡುಕಿದೆ. ಸುಮಾರು ಅರ್ಧ ಕಿ.ಮೀ. ಹಿಂದೆ ಬಿದ್ದಿದ್ದ ಆಕೆಯನ್ನು ಹೊತ್ತುಕೊಂಡು ರಾಥೋಡ್ ಕ್ರಾಸಿಂಗ್ ಬಳಿಯ ರಸ್ತೆಗೆ ಕರೆತಂದೆ. ಸಹಾಯ ಮಾಡಲು ಯಾರೂ ಕಾಣಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬುರ್ಖಾ ಧರಿಸಿ ಸೊಸೆ ಮನೆಗೆ ನುಗ್ಗಿದ ಮಾವ, ಮುಂದೇನಾಯ್ತು?
ಈ ಘಟನೆಯ ಬಗ್ಗೆ ವರದಿ ಮಾಡಿದ ನಂತರವೂ, ಜಿಆರ್‌ಪಿ (ಸರ್ಕಾರಿ ರೈಲ್ವೆ ಪೊಲೀಸರು) ತನಗೆ ಯಾವುದೇ ಸಹಾಯವನ್ನು ನೀಡಲಿಲ್ಲ ಮತ್ತು ಕತ್ತಲೆಯಲ್ಲಿ ಟಾರ್ಚ್ ಸಹಾಯದಿಂದ ತನ್ನ ಹೆಂಡತಿಯನ್ನು ಹುಡುಕುವುದನ್ನು ಮುಂದುವರೆಸಿದೆ ಎಂದು ಪತಿ ವಿಕಾಸ್ ಹೇಳಿದ್ದಾರೆ. ತನ್ನ ಹೆಂಡತಿ ಸಿಕ್ಕಿದ ನಂತರ, ಅವನು ಅವಳನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಅರ್ಧ ಕಿಲೋಮೀಟರ್ ನಡೆದನು. ನಂತರ, ಜಿಆರ್‌ಪಿ ಸಿಬ್ಬಂದಿ ಬಂದು ನಿಯಮಗಳನ್ನು ಚರ್ಚಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರ ಹೆಂಡತಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಆದರೆ, ರೈಲ್ವೆ ಅಧಿಕಾರಿಗಳು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನ ಕೆಲವು ದಾಖಲೆಗಳಿಗೆ ಸಹಿ ಹಾಕುವಂತೆ ಸೂಚಿಸಿದರು. ಅದರಿಂದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ತಡವಾಯಿತು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು ಎಂದು ವೈದ್ಯರು ತಿಳಿಸಿದರು ಎಂದು ವಿಕಾಸ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 pm, Thu, 29 May 25