ಹೈದರಾಬಾದ್: ರೂಪಾಯಿ 21,000 ಕೋಟಿ ಆನ್‌ಲೈನ್ ಸಾಲ ಹಗರಣದ ಕಿಂಗ್‌ಪಿನ್ ಎನಿಸಿಕೊಂಡಿರುವ ಚೀನಾ ಮೂಲದ 27 ವರ್ಷದ ವ್ಯಕ್ತಿಯನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಚೀನಾದ ಜಿಯಾಂಗ್ಕ್ಸಿ ಪ್ರಾಂತ್ಯದ ನಿವಾಸಿಯಾಗಿರುವ ಲ್ಯಾಂಬೊ ಬಂಧಿತ ಆರೋಪಿಯಾಗಿದ್ದು, ಈತ ಆಗ್ಲೋ ಟೆಕ್ನಾಲಜೀಸ್, ಲಿಯುಫಾಂಗ್ ಟೆಕ್ನಾಲಜೀಸ್, ನಬ್ಲೂಮ್ ಟೆಕ್ನಾಲಜೀಸ್ ಮತ್ತು ಪಿನ್ಪ್ರಿಂಟ್ ಟೆಕ್ನಾಲಜೀಸ್ ಕಂಪನಿಗಳು ನಡೆಸುತ್ತಿರುವ ಅಕ್ರಮ ಸಾಲ ಆ್ಯಪ್‌ಗಳ ಮುಖ್ಯಸ್ಥನಾಗಿದ್ದ ಎಂಬುದು ವರದಿಯಾಗಿದೆ. ಈ ಕಂಪನಿಗಳು ಸಾಲಗಾರರಿಂದ ಶೇಕಡಾ 36 ರಷ್ಟು ಬಡ್ಡಿ ವಿಧಿಸುವುದಲ್ಲದೆ ಸಾಲ ಪಡೆದವರಿಗೆ ಬಡ್ಡಿ ಪಾವತಿಸುವಂತೆ ಕಿರುಕುಳ ನೀಡುತ್ತಿವೆ ಎಂದು ಆರೋಪ ಕೇಳಿಬಂದಿತ್ತು.
ದೇಶ ಬಿಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದ..
ದೆಹಲಿ ವಿಮಾನ ನಿಲ್ದಾಣದಿಂದ ದೇಶ ಬಿಡಲು ಪ್ರಯತ್ನಿಸುತ್ತಿದ್ದಾಗ ಲ್ಯಾಂಬೊನನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೀ ಸಂಸ್ಥೆಯ ಉದ್ಯೋಗಿ ಕೆ ನಾಗರಾಜು ಎಂಬುವವರನ್ನೂ ಸಹ ಬಂಧಿಸಲಾಗಿದ್ದು, ಬಂಧಿತ ನಾಗರಾಜು ಕಾಲ್ ಸೆಂಟರ್ಗಳ ಮೇಲುಸ್ತುವಾರಿ ವಹಿಸಿದ್ದ ಎಂಬುದು ತಿಳಿದುಬಂದಿದೆ. ಈ ಕಾಲ್ ಸೆಂಟರ್ಗಳಲ್ಲಿ ಸಾಲಗಾರರಿಗೆ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಸುಮಾರು, 21,000 ಕೋಟಿ ಲಾಭ ಗಳಿಸಿವೆ..
ಆನ್‌ಲೈನ್ ಸಾಲದಾತರಿಂದ ಕಿರುಕುಳ ನೀಡಿದ ಆರೋಪದಡಿ ಟೆಕ್ಕಿ ಸೇರಿದಂತೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ತನಿಖೆಯಲ್ಲಿ ಮೇಲಿನ ನಾಲ್ಕು ಕಂಪನಿಗಳು ದಂಧೆಯಲ್ಲಿ ಭಾಗಿಯಾಗಿದ್ದು, 1.4 ಕೋಟಿ ಹಣಕಾಸು ವಹಿವಾಟಿನ ಮೂಲಕ ಸುಮಾರು, 21,000 ಕೋಟಿ ಲಾಭ ಗಳಿಸಿವೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಹೆಚ್ಚಿನ ವಹಿವಾಟನ್ನು ಈ ಕಂಪನಿಗಳ ಪಾವತಿ ಗೇಟ್‌ವೇಗಳು ಮತ್ತು ಬ್ಯಾಂಕ್ ಖಾತೆಗಳ ಮೂಲಕ ಮಾಡಲಾಗಿದೆ. ಜೊತೆಗೆ ಅಂತರರಾಷ್ಟ್ರೀಯ ವಹಿವಾಟುಗಳನ್ನು ಬಿಟ್ ನಾಣ್ಯಗಳ ಮೂಲಕ ಮಾಡಲಾಗಿದೆ ಎಂದು ವರದಿಯಾಗಿದೆ. ದೇಶಾದ್ಯಂತ ನಡೆದ ಈ ಹಗರಣ ದೆಹಲಿ, ಗಾಜಿಯಾಬಾದ್, ಗುರಗಾಂವ್, ಮುಂಬೈ, ಪುಣೆ, ನಾಗ್ಪುರ ಮತ್ತು ಬೆಂಗಳೂರು ಮೂಲದ ಕಾಲ್ ಸೆಂಟರ್ ಮೂಲಕ ಕಾರ್ಯರೂಪಕ್ಕೆ ಬಂದಿತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಈವರೆಗೆ 18 ಜನರನ್ನು ಬಂಧಿಸಿದ್ದು, ಹಗರಣದಲ್ಲಿ ಚೀನಾದ ಯುವಾನ್ ಅಲಿಯಾಸ್ ಸಿಸ್ಸಿ ಅಲಿಯಾಸ್ ಜೆನ್ನಿಫರ್ ಅವರ ಪಾತ್ರವೂ ಇದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
Play Store ನಲ್ಲಿದೆ ಸಾಲ ನೀಡುವ 426 ಕಿರಿಕಿರಿ ಕಿರಿಕ್ ಆ್ಯಪ್ಗಳು! ಇವುಗಳಿಗಿದೆ ಚೀನಾ ನಂಟು
Published On - 6:14 pm, Thu, 31 December 20