ಕೊಲ್ಕತ್ತಾ: ಪೂರ್ವ ಮೇದಿನಿಪುರ ಜಿಲ್ಲೆಯ ಪ್ರಭಾವಿ ರಾಜಕೀಯ ಕುಟುಂಬ ಎನಿಸಿದ ಅಧಿಕಾರಿ ಕುಟುಂಬದ ನಿಜಮುಖ ತಿಳಿಯಲು ಸಾಧ್ಯವಾಗಲೇ ಇಲ್ಲ. ನಿಜಕ್ಕೂ ನಾನೊಬ್ಬಳು ದೊಡ್ಡ ಕತ್ತೆಯೇ ಸರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈಚೆಗಷ್ಟೇ ಟಿಎಂಸಿಯಿಂದ ಹೊರನಡೆದು, ನಂದಿಗ್ರಾಮದಲ್ಲಿ ಮಮತಾ ಎದುರು ಸ್ಪರ್ಧಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧದ ಆಕ್ರೋಶ ಹೊರಹಾಕಿದ ಮಮತಾ ಬ್ಯಾನರ್ಜಿ, ಭಾನುವಾರ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡಿ, ‘ಅಧಿಕಾರಿ ಕುಟುಂಬವು ₹ 5000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಸ್ಥಾಪಿಸಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ನಾನು ಅಧಿಕಾರಕ್ಕೆ ಬಂದರೆ ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ತನಿಖೆ ಮಾಡಿಸುತ್ತೇನೆ’ ಎಂದು ಪ್ರತಿಜ್ಞೆ ಮಾಡಿದರು.
ಪೂರ್ವ ಮೇದಿನಿ ಜಿಲ್ಲೆಯಲ್ಲಿ ವ್ಯಾಪಕ ಪ್ರಭಾವ ಹೊಂದಿರುವ ಅಧಿಕಾರಿ ಕುಟುಂಬದ ಬಹುತೇಕರು ರಾಜಕಾರಣದಲ್ಲಿದ್ದಾರೆ. ಜಿಲ್ಲೆಯ ರಾಜಕಾರಣವನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸುತ್ತಾರೆ. ಹಲವರು ಈಗಾಗಲೇ ಬಿಜೆಪಿಗೆ ಸೇರ್ಪಡೆಯಾಗಿದ್ದರೆ, ಕೆಲವರು ಕೇಸರಿ ಪಕ್ಷಕ್ಕೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸುವೇಂದು ಅಧಿಕಾರಿಯ ತಂದೆಯೂ ಆಗಿರುವ ಟಿಎಂಸಿಯ ಹಿರಿಯ ನಾಯಕ ಮತ್ತು ಸಂಸದ ಸಿಸಿರ್ ಅಧಿಕಾರಿ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಹಿರಿಯ ನಾಯಕರ ಸಮ್ಮುಖ ಬಿಜೆಪಿಗೆ ಸೇರ್ಪಡೆಯಾದರು.
ಅಧಿಕಾರಿ ಕುಟುಂಬವನ್ನು ಮೀರ್ ಜಾಫರ್ ಮಾಡಿದ ವಂಚನೆಗೆ ಹೋಲಿಸಿದ ಮಮತಾ ಬ್ಯಾನರ್ಜಿ, ನಂದಿಗ್ರಾಮದ ಜನರು ಈ ಅಕ್ರಮವನ್ನು ಸಹಿಸುವುದಿಲ್ಲ. ಮತದಾನದ ಮೂಲಕ ತಮ್ಮ ಉತ್ತರ ನೀಡುತ್ತಾರೆ ಎಂದರು. ನವಾಬ್ ಸಿರಾಜುದ್ದೌಲನ ಬಳಿ ಸೇನಾಧಿಕಾರಿಯಾಗಿದ್ದ ಮೀರ್ ಜಾಫರ್ 1757ರಲ್ಲಿ ನಡೆದ ಪ್ಲಾಸಿ ಕದನದಲ್ಲಿ ಬ್ರಿಟಿಷರೊಂದಿಗೆ ಕೈಜೋಡಿಸಿ ನವಾಬನ ಸೋಲಿಗೆ ಕಾರಣನಾಗಿದ್ದ. ಭಾರತದಲ್ಲಿ ಅನಂತರ ಬ್ರಿಟಿಷರ ಆಡಳಿತ ಆರಂಭವಾಗಲು ಇದು ಮುನ್ನುಡಿ ಬರೆದಿತ್ತು.
‘ಅಧಿಕಾರಿ ಕುಟುಂಬದ ಉದ್ದೇಶವನ್ನು ಇಷ್ಟು ಕಾಲ ತಿಳಿಯದ ನಾನು ನಾನೊಂದು ದೊಡ್ಡ ಕತ್ತೆ. ನನಗೆ ಈಗ ನನ್ನ ತಪ್ಪು ಮನವರಿಕೆಯಾಗ್ತಿದೆ. ಅವರ ಸಂಪತ್ತಿನ ಮೌಲ್ಯ 5000 ಸಾವಿರ ಕೋಟಿ ಎಂದು ಜನರು ಹೇಳುತ್ತಾರೆ. ನನಗೆ ಅದರ ಬಗ್ಗೆ ಖಚಿತವಾಗಿ ಗೊತ್ತಿಲ್ಲ. ಅವರು ಮತಗಳನ್ನು ಖರೀದಿಸಲು ಹಣ ಬಳಸುತ್ತಾರೆ. ಅವರಿಗೆ ಮತ ಹಾಕಬೇಡಿ’ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದರು.
ಬಿಜೆಪಿ ಪಕ್ಷಕ್ಕೆ ಸೇರಿದವರನ್ನು ಗೂಂಡಾಗಳು ಮತ್ತು ಕೆಲಸಕ್ಕೆ ಬಾರದವರ ಪಕ್ಷ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಅಧಿಕಾರಿ ಕುಟುಂಬದವರು ಜಿಲ್ಲೆಯನ್ನು ಜಮೀನ್ದಾರರಂತೆ ಆಳುತ್ತಿದೆ. ನನಗೆ ಸಾರ್ವಜನಿಕ ಸಭೆಗಳನ್ನು ನಡೆಸಲೂ ಅಡ್ಡಿಯುಂಟು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ನಡೆದ ಆರೋಗ್ಯ, ರಸ್ತೆ ಮತ್ತು ಇತರ ಕಾಮಗಾರಿಗಳನ್ನು ನಿರ್ವಹಿಸಿದ್ದು ರಾಜ್ಯ ಸರ್ಕಾರವೇ ಹೊರತು ಅಧಿಕಾರಿಯ ಕುಟುಂಬ ಅಲ್ಲ. ಬಿಜೆಪಿಯನ್ನು ಗಾಳದಿಂದ ದೂರ ಇಡಿ, ಅಭಿವೃದ್ಧಿಯ ವೇಗ ಕಾಪಾಡಿಕೊಳ್ಳಿ ಎಂದು ಮಮತಾ ಬ್ಯಾನರ್ಜಿ ಮತದಾರರಲ್ಲಿ ಮನವಿ ಮಾಡಿದರು.
ಈ ಹಿಂದೆಯೂ ಸುವೇಂದು ಅಧಿಕಾರಿಯ ಬಗ್ಗೆ ಮಾತನಾಡಿದ್ದ ಮಮತಾ, ಅವನೊಬ್ಬ ವಂಚಕ. ನನಗೆ ಅದು ತಿಳಿಯದೇ ಕುರುಡಾಗಿ ಬೆಂಬಲಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಮಮತಾ ಸಹ ಹೋದಲ್ಲಿ ಬಂದಲ್ಲಿ ವಂದೇ ಮಾತರಂ ಮತ್ತು ಜೈ ಹಿಂದ್ ಘೋಷಣೆಗಳನ್ನು ಮೊಳಗಿಸಿ ತಾನೊಬ್ಬ ರಾಷ್ಟ್ರೀಯವಾದಿ ಎಂದು ತೋರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಕೊಲ್ಕತ್ತಾದ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಮಮತಾ ಬ್ಯಾನರ್ಜಿ ಈ ಬಾರಿ ಸುವೇಂದು ಅಧಿಕಾರಿಯನ್ನು ಮಣಿಸಲೆಂದೇ ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸಿದ್ದಾರೆ. ನಂದಿಗ್ರಾಮದಲ್ಲಿ ನಡೆದಿದ್ದ ಭೂಸ್ವಾಧೀನ ವಿರೋಧಿ ಹೋರಾಟವನ್ನೇ ಚಿಮ್ಮುಹಲಗೆಯಾಗಿಸಿಕೊಂಡು ಟಿಎಂಸಿ ಪಕ್ಷವು 2011ರಲ್ಲಿ ಅಧಿಕಾರಕ್ಕೆ ಬಂದಿತ್ತು.
ಮೇ 2ಕ್ಕೆ ಫಲಿತಾಂಶ
ಪಶ್ಚಿಮ ಬಂಗಾಳದ ಚುನಾವಣೆಗೆ ಮೊದಲ ಹಂತದ ಮತದಾನ ಮಾರ್ಚ್ 27ರಂದು ಆರಂಭವಾಗಲಿದೆ. ಇಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದ ಚುನಾವಣೆ ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದು, ಟಿವಿ9 ಬಾಂಗ್ಲಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಗಾಗಿ ವಿವಿಧ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮ ಮೊದಲ ಆಯ್ಕೆ ಯಾರು ಎಂದು ಜನರಲ್ಲಿ ಕೇಳಿದಾಗ ಯಾವುದೇ ಪಕ್ಷಕ್ಕೆ ಸೇರದ ಜನರ ಪೈಕಿ ಶೇ.39.7 ಮಂದಿ ಮಮತಾ ಬ್ಯಾನರ್ಜಿ ಎಂದು ಹೇಳಿದ್ದಾರೆ. ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದವರು ಶೇ.19.2 ಮಂದಿ. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಯಾವ ಪಕ್ಷ ಅಭಿವೃದ್ಧಿ ತರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದವರಲ್ಲಿ ಶೇ.40.7 ಮಂದಿ ಟಿಎಂಸಿ ಎಂದು ಹೇಳಿದ್ದಾರೆ. ಬಿಜೆಪಿ ಬಗ್ಗೆ ನಿರೀಕ್ಷೆ ಇರಿಸಿಕೊಂಡವರು ಶೇ.38.3. ರಾಜ್ಯದ ಒಟ್ಟಾರೆ ಅಭಿಮತವನ್ನು ನೋಡುವುದಾದರೆ ಟಿಎಂಸಿ ಪರ ಶೇ.51.1 ಮತ್ತು ಬಿಜೆಪಿ ಪರ ಶೇ.38.6 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಬಿಜೆಪಿ ಚುನಾವಣಾ ಪ್ರಣಾಳಿಕೆ; ಸೋನಾರ್ ಬಾಂಗ್ಲಾ ಕನಸು ಪುನರುಚ್ಚರಿಸಿದ ಅಮಿತ್ ಶಾ
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ
Published On - 7:48 pm, Sun, 21 March 21