ಭಾರತದಲ್ಲಿ ಅಮೆರಿಕ 200 ವರ್ಷ ಆಳ್ವಿಕೆ ನಡೆಸಿತ್ತು: ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್

‘ನಮ್ಮನ್ನು 200 ವರ್ಷಗಳ ಕಾಲ ಗುಲಾಮರನ್ನಾಗಿಸಿಕೊಂಡಿದ್ದ ಅಮೆರಿಕ ಈಗ ವಿಶ್ವವನ್ನೇ ಆಳುತ್ತಿದೆ. ಆದರೂ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೆಣಗಾಡುತ್ತಿದೆ’ ಎಂದು ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.

ಭಾರತದಲ್ಲಿ ಅಮೆರಿಕ 200 ವರ್ಷ ಆಳ್ವಿಕೆ ನಡೆಸಿತ್ತು: ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್
ತಿರತ್​ ಸಿಂಗ್​ ರಾವತ್​
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ganapathi bhat

Updated on:Mar 21, 2021 | 9:06 PM

ಡೆಹ್ರಾಡೂನ್: ರಿಪ್​ಡ್ ಜೀನ್ಸ್​ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ದೇಶವ್ಯಾಪಿ ಸುದ್ದಿಯಾಗಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಭಾರತದಲ್ಲಿ 200 ವರ್ಷ ಆಳ್ವಿಕೆ ನಡೆಸಿದ್ದಕ್ಕಾಗಿ ಇಂಗ್ಲೆಂಡ್ ಬದಲು ಅಮೆರಿಕವನ್ನು ದೂರಿದ್ದಾರೆ. ತೀರಥ್ ಸಿಂಗ್ ಮಾತನಾಡಿರುವ ವಿಡಿಯೊ ತುಣುಕೊಂದು ಇದೀಗ ವೈರಲ್ ಆಗಿದೆ. ‘ನಮ್ಮನ್ನು 200 ವರ್ಷಗಳ ಕಾಲ ಗುಲಾಮರನ್ನಾಗಿಸಿಕೊಂಡಿದ್ದ ಅಮೆರಿಕ ಈಗ ವಿಶ್ವವನ್ನೇ ಆಳುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೆಣಗಾಡುತ್ತಿದೆ ಎಂದು ರಾವತ್ ಹೇಳಿದ್ದಾರೆ.

ಕೋವಿಡ್-19 ಪ್ರಕರಣಗಳ ನಿರ್ವಹಣೆ ವಿಚಾರದಲ್ಲಿ ಭಾರತವನ್ನು ಅಮೆರಿಕ ಜೊತೆಗೆ ಅವರು ಹೋಲಿಕೆ ಮಾಡಿದರು. ‘ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಕೊರೊನಾ ಪಿಡುಗನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದೆ. ಅಮೆರಿಕ ಪರದಾಡುತ್ತಿದೆ’ ಎಂದು ಹೇಳಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಲ್ಲಿ 50 ಲಕ್ಷಕ್ಕೂ ಹೆಚ್ಚ ಜನರು ಕೋವಿಡ್​ನಿಂದಾಗಿ ಮೃತಪಟ್ಟಿದ್ದಾರೆ. ಅವರು ಮತ್ತೊಮ್ಮೆ ಲಾಕ್​ಡೌನ್​ನತ್ತ ಮುನ್ನಡೆಯುತ್ತಿದ್ದಾರೆ ಎಂದು ರಾವತ್ ಟೀಕಿಸಿದ್ದಾರೆ.

‘ಈ ಕಾಲದಲ್ಲಿ ನರೇಂದ್ರ ಮೋದಿಯಲ್ಲದೆ ಬೇರೆ ಯಾರಾದರೂ ಪ್ರಧಾನಿಯಾಗಿದ್ದರೆ ಭಾರತದ ಪರಿಸ್ಥಿತಿ ಏನಾಗುತ್ತಿತ್ತೋ. ನಮ್ಮ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು. ಅವರು ನಮ್ಮನ್ನು ಕಾಪಾಡಿದರು. ನಾವು ಅವರ ಸಲಹೆಗಳನ್ನು ಪಾಲಿಸಲಿಲ್ಲ. ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಸುವುದು, ಕೈಗಳನ್ನು ಆಗಾಗ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಲವು ವಿಚಾರಗಳಲ್ಲಿ ಅವರ ಸಲಹೆಗಳನ್ನು ಕೆಲ ಜನರು ಮಾತ್ರ ಪಾಲಿಸಿದರು’ ಎಂದು ತಿಳಿಸಿದರು.

ಈ ವಾರದ ಆರಂಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಮಹಿಳೆಯರು ರಿಪ್​ಡ್ ಜೀನ್ಸ್​ ಧರಿಸುವ ಬಗ್ಗೆ ಆಕ್ಷೇಪಕಾರಿ ಹೇಳಿಕೆ ನೀಡಿದ್ದರು. ರಿಪ್​ಡ್ ಜೀನ್ಸ್ ಧರಿಸಿದ ಮಹಿಳೆಯೊಬ್ಬರು ಸರ್ಕಾರೇತರ ಸಂಸ್ಥೆ ನಡೆಸುವುದನ್ನು ಕಂಡು ಬೇಸರವಾಯಿತು. ಆಕೆ ಸಮಾಜಕ್ಕೆ ಅದೆಂಥ ಮಾದರಿಯನ್ನು ನೀಡುತ್ತಿರಬಹುದು ಎಂದು ಲೇವಡಿ ಮಾಡಿದ್ದರು. ‘ಇಂಥ ಮಹಿಳೆ ಸಮಾಜದ ಮಧ್ಯೆ ನಿಂತು ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ? ಸಮಾಜಕ್ಕೆ ಮತ್ತು ನಮ್ಮ ಮಕ್ಕಳಿಗೆ ಈಕೆ ಎಂಥ ಸಂದೇಶ ನೀಡುತ್ತಿರಬಹುದು. ಮನೆಯಿಂದಲೇ ಎಲ್ಲವೂ ಶುರುವಾಗುತ್ತದೆ. ನಾವು ಏನು ಮಾಡ್ತೀವೋ ಅದನ್ನೇ ನಮ್ಮ ಮಕ್ಕಳು ಅನುಸರಿಸುತ್ತಾರೆ. ಮನೆಯಲ್ಲಿ ಮಗುವಿಗೆ ಸರಿಯಾದ ಸಂಸ್ಕೃತಿ ಕಲಿಸಿದರೆ ಅದು ಬೆಳೆದು ದೊಡ್ಡದಾದ ಮೇಲೆ ಎಷ್ಟೇ ಮಾಡರ್ನ್​ ಆದರೂ ಜೀವನದಲ್ಲಿ ವಿಫಲವಾಗುವುದಿಲ್ಲ’ ಎಂದು ಹೇಳಿದ್ದರು. ತೀರಥ್ ಸಿಂಗ್ ರಾವತ್ ಅವರ ಈ ಹೇಳಿಕೆಯು ಮಹಿಳಾದ್ವೇಷಿ ಎಂಬ ಟೀಕೆಗೆ ಒಳಗಾಗಿತ್ತು. #RippedJeans ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಟ್ರೆಂಡಿಂಗ್ ಆಗಿತ್ತು. ಸಾವಿರಾರು ಜನರು ಮೀಮ್​ ಮತ್ತು ಜೋಕುಗಳನ್ನು ಹಂಚಿಕೊಂಡಿದ್ದರು.

ಹಲವು ರಾಜಕಾರಿಣಿಗಳು ಮತ್ತು ನಟರು ಸಹ ಈ ಹೇಳಿಕೆಯನ್ನು ಖಂಡಿಸಿದ್ದರು. ಪ್ರತಿರೋಧದ ಒತ್ತಡಕ್ಕೆ ಮಣಿದು ತೀರಥ್ ಸಿಂಗ್ ರಾವತ್ ಕ್ಷಮೆಯಾಚಿಸಿದ್ದರು. ಅದೇ ವೇಳೆ ಮತ್ತೊಮ್ಮೆ ರಿಪ್​ಡ್ ಜೀನ್ಸ್​ ಬಳಕೆ ಬಗ್ಗೆ ಆಕ್ಷೇಪಿಸಿದ್ದರು. ‘ನನಗೆ ಜೀನ್ಸ್ ಧರಿಸುವ ಬಗ್ಗೆ ಆಕ್ಷೇಪವಿಲ್ಲ, ರಿಪ್​ಡ್ ಜೀನ್ಸ್​ ಧರಿಸುವುದಕ್ಕೆ ಆಕ್ಷೇಪವಿದೆ’ ಎಂದಿದ್ದರು.

ಇದನ್ನೂ ಓದಿ: ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ಮಹಿಳೆಯರ ಕರ್ತವ್ಯ: ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್ ಹೇಳಿಕೆ ಸಮರ್ಥಿಸಿಕೊಂಡ ಪತ್ನಿ ರಶ್ಮಿ ತ್ಯಾಗಿ

ಇದನ್ನೂ ಓದಿ: ಹರಿದ ಜೀನ್ಸ್ ಧರಿಸುವ ಮಹಿಳೆಯರು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಾರೆ : ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್

Published On - 8:53 pm, Sun, 21 March 21