
ನವದೆಹಲಿ, ಅಕ್ಟೋಬರ್ 22: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯಲ್ಲಿ ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸದ ಕುರಿತು ಕೇಳಲಾದ ಪ್ರಶ್ನೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ “ನಾನೇನು ಟ್ರಾವೆಲ್ ಏಜೆಂಟ್ ಅಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಕೇರಳದಲ್ಲಿದ್ದ ಶಶಿ ತರೂರ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ರಾಹುಲ್ ಗಾಂಧಿ ಅವರ ಪ್ರವಾಸದ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ನಾನು ಟ್ರಾವೆಲ್ ಏಜೆಂಟ್ ಅಲ್ಲ. ಆ ಪ್ರಶ್ನೆಯನ್ನು ನನ್ನಲ್ಲಿ ಕೇಳಿ ಯಾವುದೇ ಅರ್ಥವಿಲ್ಲ. ನಾನೇಕೆ ದೆಹಲಿ ಬಿಟ್ಟು ಈಗ ಇಲ್ಲಿಗೆ ಬಂದಿದ್ದೇನೆ? ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಜವಾಬ್ದಾರಿಗಳಿರುತ್ತವೆ. ಹಾಗಾಗಿ ಆ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ರಾಜಕೀಯ ಹೋರಾಟ ನಡೆಯುತ್ತಿರುವ ನಡುವೆಯೇ ರಾಹುಲ್ ಗಾಂಧಿ 4 ದಿನಗಳ ವಿಯೆಟ್ನಾಂ ಪ್ರವಾಸ ಕೈಗೊಂಡಿರುವುದು ಬಿಜೆಪಿಯ ತೀವ್ರ ವಾಗ್ದಾಳಿಗೆ ಕಾರಣವಾಗಿದೆ. ಈ ಹಿಂದೆ ಕೂಡ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳನ್ನು ಪ್ರಶ್ನಿಸಿದ್ದ ಬಿಜೆಪಿ, ಈ ಬಾರಿಯೂ ಇದನ್ನು ಕಟುವಾಗಿ ಟೀಕಿಸಿದೆ. ದೆಹಲಿ ಪ್ರತಿಭಟನೆಯಲ್ಲಿ ಸುಳ್ಳುಗಳನ್ನು ಹೇಳಿ ಸುಸ್ತಾದ ನಂತರ ರಾಹುಲ್ ಗಾಂಧಿ ರಜಾದಿನಗಳನ್ನು ಕಳೆಯಲು ತೆರಳಿದ್ದಾರೆ ಎಂದು ಆಪಾದಿಸಿರುವ ಬಿಜೆಪಿ, ವಿಮಾನದಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದಾರೆ ಎನ್ನಲಾದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿಯ ವಿದೇಶ ಪ್ರವಾಸವನ್ನು ಟೀಕಿಸಿದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಬಿಜೆಪಿ ನಾಯಕರಾದ ಸಂಬಿತ್ ಪಾತ್ರಾ ಮಾತನಾಡಿ, “ಅವರ ಮುಖ್ಯಸ್ಥರಾದ ರಾಹುಲ್ ಗಾಂಧಿ ಭಾರತವನ್ನು ಹೇಗೆ ನಾಶಪಡಿಸಬೇಕು, ಆಡಳಿತ ಬದಲಾವಣೆ ಹೇಗೆ ತರಬೇಕು ಹಾಗೂ ಎಲ್ಲಿ ಎಡವಿದ್ದೇವೆ ಎಂದು ತಿಳಿಯಲು ಜಾರ್ಜ್ ಸೊರೊಸ್ ಮತ್ತು ಕಂಪನಿಯಿಂದ ಕೋಚಿಂಗ್ ತರಗತಿಗಳನ್ನು ಪಡೆಯಲು ವಿದೇಶಕ್ಕೆ ಹೋಗಿದ್ದಾರೆ. ಭಾರತದ ಜನರು ಅವರನ್ನು ಬೆಂಬಲಿಸದಿದ್ದಾಗ, ದೇಶವನ್ನು ವಿನಾಶದ ಹಾದಿಗೆ ತಳ್ಳಿ ಆಡಳಿತ ಬದಲಿಸುವ ತಮ್ಮ ಅಜೆಂಡಾವನ್ನು ಮುಂದೆ ಕೊಂಡೊಯ್ಯುವುದು ಹೇಗೆ ಎಂಬುದರ ಮೇಲೆಯೇ ಅವರ ಗಮನವಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ತುಂಬಾ ಸುಸ್ತಾಗಿದೆಯಾ?’; ಎಸ್‌ಐಆರ್ ಪ್ರತಿಭಟನೆ ನಡುವೆ ವಿಯೆಟ್ನಾಮ್ಗೆ ಹೊರಟ ರಾಹುಲ್ ಗಾಂಧಿಗೆ ಬಿಜೆಪಿ ಲೇವಡಿ
ಕಾಂಗ್ರೆಸ್ ಸಮರ್ಥನೆ:
ಬಿಜೆಪಿಯ ಆರೋಪಗಳಿಗೆ ತಿರುಗೇಟು ನೀಡಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, “ಇತರ ಜನರು ಈ ದಿನಗಳಲ್ಲಿ ಹೊರಗೆ ಪ್ರಯಾಣಿಸುವುದಿಲ್ಲವೇ? ರಾಹುಲ್ ಗಾಂಧಿ ಅವರು ಲೋಕಸಭೆಯ ವಿಪಕ್ಷ ನಾಯಕರಾಗಿದ್ದು, ಅವರಿಗೆ ತಮ್ಮದೇ ಆದ ಕರ್ತವ್ಯಗಳಿವೆ. ಅವರು ಯೇಲ್ ಯೂನಿವರ್ಸಿಟಿ ಹಾಗೂ ಲಂಡನ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸುತ್ತಾರೆ ಹಾಗೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾರೆ. ಪ್ರಧಾನಮಂತ್ರಿಯವರೂ ಎಂದೂ ಸುದ್ದಿಗೋಷ್ಠಿ, ಸಂವಾದ ನಡೆಸುವುದಿಲ್ಲ” ಎಂದು ಬಿಜೆಪಿಗೆ ಲೇವಡಿ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ