ಗುವಾಹಟಿ: ಅಸ್ಸಾಂ ಬಿಜೆಪಿಯ ಟಾರ್ಗೆಟ್ ನಾನೇ. ಅವರು ನನ್ನನ್ನು ರಾಜಕೀಯದಲ್ಲಿ ಮುಗಿಸಲು ಯತ್ನಿಸುತ್ತಿದ್ದಾರೆ. ಶೇ. 35ರಷ್ಟು ಮತ ನನ್ನ ಪಾಲಿಗಿದೆ. ಎಲ್ಲವೂ ನಾನು ಅಂದುಕೊಂಡಂತೆ ನಡೆದರೆ ಅವರು ಅಧಿಕಾರದಲ್ಲಿರುವುದಿಲ್ಲ. ನಮ್ಮ ಮೈತ್ರಿಕೂಟದ ಪರವಾಗಿ ನಾನು ಈ ಮತಗಳನ್ನು ಚಲಾಯಿಸಬಹುದು ಎಂದು ಎಐಯುಡಿಎಫ್ (AIUDF) ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಅಸ್ಸಾಂನಲ್ಲಿ ಎಐಯುಡಿಫ್ 19 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಇದೇ ಮೊದಲ ಬಾರಿ ತನ್ನ ವಿರುದ್ಧ ಪಕ್ಷವಾಗಿದ್ದ ಕಾಂಗ್ರೆಸ್ ಜತೆ ಎಐಯುಡಿಎಫ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. 2016 ವಿಧಾನಸಭೆ ಚುನಾವಣೆಯಲ್ಲಿ ಎಐಯುಡಿಎಫ್ ಮತ್ತು ಕಾಂಗ್ರೆಸ್ ನಡುವೆ ಮತಗಳು ಹಂಚಿಹೋದ ಕಾರಣ 20ಸೀಟುಗಳಿಂದಲೂ ಹೆಚ್ಚು ಸೀಟುಗಳಿಸಿ ಗೆಲುವು ಸಾಧಿಸಿತ್ತು.
ಬಿಜೆಪಿ ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಅಜ್ಮಲ್ ವಿರುದ್ಧ ಕಿಡಿ ಕಾರುತ್ತಿದೆ. ಸುಗಂಧ ದ್ರವ್ಯಗಳ ವ್ಯಾಪಾರಿ, ಧಾರ್ಮಿಕ ಮುಖಂಡ ಆಗಿರುವ ಅಜ್ಮಲ್ ಅವರನ್ನು ಬಿಜೆಪಿ ಕೋಮುವಾದಿ ಮತ್ತು ಅಕ್ರಮ ಬಾಂಗ್ಲಾದೇಶಿಗಳ ರಕ್ಷಕ ಎಂದು ಆರೋಪಿಸಿದೆ.
ಈ ಹಿಂದೆ ನಾನು ಮಾಡಿದ ಉಪನ್ಯಾಸಗಳ ಬಗ್ಗೆ ಕೇಳಿ. ನನ್ನ ವಿಷಯ ಸ್ಪಷ್ಟವಿದೆ. ಅಕ್ರಮ ವಲಸೆಗಾರರರನ್ನು ಹೊರ ಹಾಕಿ. 60 ವರ್ಷಗಳಿಂದ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಬಾಂಗ್ಲಾದೇಶಿಗಳ ಹೆಸರು ಬಳಸಿ ರಾಜಕಾರಣ ಮಾಡಲಾಗುತ್ತಿದೆ ಎಂದಿದ್ದಾರೆ ಅಜ್ಮಲ್. ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ಮಾತನಾಡಿ ಅಜ್ಮಲ್, ಬಿಜೆಪಿ ವಿರುದ್ಧ ಸ್ಪರ್ಧಿಸಬೇಕಾದರೆ ಕಾಂಗ್ರೆಸ್ ಬರಬೇಕು. ಹಾಗಾಗಿ ನಾವು ಮೈತ್ರಿ ಮಾಡಿಕೊಂಡೆವು. ನಾನು ಅಲ್ಪ ಸಂಖ್ಯಾತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿಯೂ ನಾನು ಚುನಾವಣೆ ಪ್ರಚಾರ ಮಾಡಲಿದ್ದೇನೆ ಎಂದು ಹೇಳಿದ್ದಾರೆ.
ಆದಾಗ್ಯೂ, ತಾನು ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಎಂಬ ವದಂತಿಯನ್ನು ಅಜ್ಮಲ್ ತಳ್ಳಿ ಹಾಕಿದ್ದಾರೆ. ಇದೆಲ್ಲ ಬಿಜೆಪಿ ಅಪಪ್ರಚಾರ ಎಂದಿದ್ದಾರೆ ಅವರು. ಬಿಜೆಪಿ ಕೋಮುವಾದಿಗಳ ಪಕ್ಷ. ಅವರು ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಬಯಸುತ್ತಿದ್ದಾರೆ. ನಾವು ಜಾತ್ಯಾತೀತ ರಾಷ್ಟ್ರವನ್ನು ಬಯಸುತ್ತಿದ್ದೇವೆ. ಇಲ್ಲಿ ಯಾವುದೇ ಹೊಸ ಕೈಗಾರಿಕಾ ಸಂಸ್ಥೆಗಳಿಲ್ಲ. ಈ ಮೊದಲು ಇದ್ದ ಎರಡು ಪೇಪರ್ ಮಿಲ್ ಮುಚ್ಚಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿ ಕಾರ್ಯ ಅರ್ಧದಲ್ಲಿ ನಿಂತಿದೆ. ಇಲ್ಲಿ ನಿರುದ್ಯೋಗ ಮತ್ತು ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ ಎಂದು ಅಜ್ಮಲ್ ಹೇಳಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿಗೆ ಅಧಿಕಾರ ಕೈ ಜಾರಲಿದೆ: ಛತ್ತೀಸ್ಗಢ ಮುಖ್ಯಮಂತ್ರಿ
ರಾಯ್ಪುರ್ : ಅಸ್ಸಾಂನಲ್ಲಿ ಸರ್ಬಾನಂದ ಸೊನೊವಾಲ್ ನೇತೃತ್ವದ ಬಿಜೆಪಿ ಸರ್ಕಾರ ವಿರುದ್ಧ ಕಿಡಿ ಕಾರಿದ ಛತ್ತೀಸ್ಗಢದ ಮುಖ್ಯಮಂತ್ರಿ , ಕಾಂಗ್ರೆಸ್ ನ ಹಿರಿಯ ನಾಯಕ ಭೂಪೇಶ್ ಭಘೇಲ್ ಬಿಜೆಪಿ 2016ರಲ್ಲಿ ನಿಡಿದ ಚುನಾವಣೆಯ ವಾಗ್ದಾನಗಳನ್ನು ಈಡೇರಿಸಲು ವಿಫಲವಾಗಿದೆ ಎಂದಿದ್ದಾರೆ. ಬಾಂಗ್ಲಾದೇಶದ ಗಡಿಭಾಗವನ್ನು ಮುಚ್ಚುವುದಾಗಿ ಅವರು ಹೇಳಿದ್ದಾರೆ. ಬ್ರಹ್ಮಪುತ್ರಾ ನದಿ ದಡದಲ್ಲಿ ಎಕ್ಸ್ಪ್ರೆಸ್ ವೇ ನಿರ್ಮಿಸುವುದಾಗಿ ಹೇಳಿತ್ತು. ಚಹಾ ತೋಟದ ಕಾರ್ಮಿಕರ ದಿನಗೂಲಿ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಆದರೆ ಈ ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿಯ ನಶೆ ಇಳಿದಿದೆ. ಅವರು ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ . ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಕೈ ಜಾರಲಿದೆ ಎಂದು ಭಘೇಲ್ ಹೇಳಿದ್ದಾರೆ.
ಬಿಜೆಪಿಗೆ ಯಾವುದೇ ಅಜೆಂಡಾ ಇಲ್ಲ. ಸರ್ಬಾನಂದ್ ಸೋನೋವಾಲ್ ಅಥವಾ ಡಾ. ಹಿಮಾಂತ ಬಿಸ್ವಾ ಇವರಲ್ಲಿ ಯಾರು ಮುಖ್ಯಮಂತ್ರಿ ಎಂಬುದನ್ನು ಬಿಜೆಪಿ ನಿರ್ಧರಿಸಲಿ. ಬಿಜೆಪಿ ಅಸ್ಸಾಂನಲ್ಲಿ ಗೊಂದಲಕ್ಕೊಳಗಾಗಿದ್ದು ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Assam Assembly Elections 2021: ಅಸ್ಸಾಂನಲ್ಲಿ 5 ಗ್ಯಾರಂಟಿ ಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್