ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ಹತ್ಯೆಗೆ ಸಂಚು: ಮೂವರ ಬಂಧನ

Himanta Biswa Sarma: ಮಾರ್ಚ್ 8ರಂದು ಉಲ್ಫಾ ಸಂಘಟನೆಯ ನಾಯಕ ಪ್ರದೀಪ್ ಗಗೊಯಿ, ಮನಬ್ ಪಾಠಕ್ ಮತ್ತು ಕೇತು ಮುಂಡಿ ಮತ್ತು ಕೆಲವು ಸದಸ್ಯರು ಅಸ್ಸಾಂನ ಹಣಕಾಸು ಸಚಿವ ಡಾ.ಹಿಮಂತ ಬಿಸ್ವ ಶರ್ಮಾ ಅವರನ್ನು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಬಳಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು

ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ಹತ್ಯೆಗೆ ಸಂಚು: ಮೂವರ ಬಂಧನ
ಹಿಮಂತ ಬಿಸ್ವ ಶರ್ಮಾ (ಟ್ವಿಟರ್ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
|

Updated on: Mar 10, 2021 | 8:23 PM

ಗುವಾಹಟಿ: ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮಾ ಅವರ ಹತ್ಯೆಗೆ ಸಂಚು ನಡೆಸಿದ ಆರೋಪದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಲ್ಫಾ ಸಂಘಟನೆಯ ನಾಯಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.ಅಪರಾಧ ಪತ್ತೆ ದಳಕ್ಕೆ ಲಭಿಸಿದ ರಹಸ್ಯ ಮಾಹಿತಿಯ ಮೇರೆಗೆ ಈ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಅಡ್ಡಿಯುಂಟು ಮಾಡಲು ಈ ಸಂಚು ರೂಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾರ್ಚ್ 8ರಂದು ಉಲ್ಫಾ ಸಂಘಟನೆಯ ನಾಯಕ ಪ್ರದೀಪ್ ಗಗೊಯಿ, ಮನಬ್ ಪಾಠಕ್ ಮತ್ತು ಕೇತು ಮುಂಡಿ ಮತ್ತು ಕೆಲವು ಸದಸ್ಯರು ಅಸ್ಸಾಂನ ಹಣಕಾಸು ಸಚಿವ ಡಾ.ಹಿಮಂತ ಬಿಸ್ವ ಶರ್ಮಾ ಅವರನ್ನು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಬಳಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಅಸ್ಸಾಂನ ಜನರಲ್ಲಿ ಭಯ ಹುಟ್ಟಿಸಿ ಚುನಾವಣೆಗೆ ಅಡ್ಡಿ ಪಡಿಸುವುದು ಅವರ ಉದ್ದೇಶವಾಗಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ .

ಬಂಧಿತ ಆರೋಪಿಗಳ ದೂರವಾಣಿ ಕರೆ ರೆಕಾರ್ಡಿಂಗ್​ಗಳನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ ಎಂದು ಅಪರಾಧ ಪತ್ತೆ ದಳ ಹೇಳಿದೆ. ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ನಾವು ಕಳೆದ ರಾತ್ರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದೇವೆ. ನ್ಯಾಯಾಲಯ ಅವರನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ . ಪ್ರಸ್ತುತ ಸಂಚಿನಲ್ಲಿ ನಂಟು ಹೊಂದಿರುವ ಇತರ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ

ಸಿಆರ್‌ಪಿಎಫ್‌ ಜತೆಗೆ ಜೆಡ್ ಪ್ಲಸ್‌ ಭದ್ರತೆ ಹೊಂದಿರುವ ಶರ್ಮಾ ಈ ಕುರಿತು ಪ್ರತಿಕ್ರಿಯಿಸಿದ್ದು, ಸೋಮವಾರ ರಾತ್ರಿ ಡಿಜಿಪಿಯವರಿಂದ ನನಗೆ ಕರೆ ಬಂತು. ಅವರು ಎಚ್ಚರಿಕೆಯಲ್ಲಿರುವಂತೆ ನನಗೆ ತಿಳಿಸಿದರು. ಜತೆಗೆ ನನ್ನ ಭದ್ರತೆಗೆ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದರು ಎಂದಿದ್ದಾರೆ.

ಹತ್ಯೆ ಸಂಚು ಆರೋಪ ಹೊತ್ತಿರುವ ಈ ಮೂವರನ್ನು ‘ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ)’ ಅಡಿಯಲ್ಲಿ ಬಂಧಿಸಲಾಗಿದೆ. ಈ ಮೂವರ ವಿರುದ್ಧ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕ್ರಿಮಿನಲ್‌ ಸಂಚು, ಕಾನೂನುಬಾಹಿರ ಚಟುವಟಿಕೆ ನಿರ್ಬಂಧ ಕಾಯಿದೆಯಡಿಯಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.

ಇದನ್ನೂ ಓದಿ: Assam Elections 2021: ಅಸ್ಸಾಂನಲ್ಲೂ ಬಿಜೆಪಿ-ಕಾಂಗ್ರೆಸ್ ನಡುವೆ ಸಮರ ಜೋರು