ಮಮತಾ ಬ್ಯಾನರ್ಜಿ ತಪ್ಪುತಪ್ಪಾಗಿ ಮಂತ್ರ ಹೇಳಿದ್ದಾರೆ: ರೆಕಾರ್ಡ್​ ಹಾಕಿ ತೋರಿಸಿದ ಬಿಜೆಪಿಯ ಸುವೇಂದು ಅಧಿಕಾರಿ

‘ಮಮತಾ ತಪ್ಪುತಪ್ಪಾಗಿ ಮಂತ್ರಗಳನ್ನು ಹೇಳಿದ್ದಾರೆ’ ಎಂದು ಒಂದು ಕಾಲದ ಮಮತಾರ ಸಹಚರ ಮತ್ತು ಇದೀಗ ಎದುರಾಳಿಯಾಗಿರುವ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಮಮತಾ ಹೇಳಿರುವ ಮಂತ್ರಗಳ ರೆಕಾರ್ಡ್​ ಪ್ಲೇ ಮಾಡಿ ಅಣಕವಾಡಿದ್ದಾರೆ.

ಮಮತಾ ಬ್ಯಾನರ್ಜಿ ತಪ್ಪುತಪ್ಪಾಗಿ ಮಂತ್ರ ಹೇಳಿದ್ದಾರೆ: ರೆಕಾರ್ಡ್​ ಹಾಕಿ ತೋರಿಸಿದ ಬಿಜೆಪಿಯ ಸುವೇಂದು ಅಧಿಕಾರಿ
ಟಿಎಂಸಿ ತೊರೆದು ಬಿಜೆಪಿ ಸೇರಿದ ಮೊದಲಿಗರಲ್ಲಿ ಸುವೇಂದು ಅಧಿಕಾರಿ ಪ್ರಮುಖರು
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 10, 2021 | 7:36 PM

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ನಂದಿಗ್ರಾಮದಲ್ಲಿ ನಿನ್ನೆಯಷ್ಟೇ (ಮಾರ್ಚ್ 9) ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದ ಮಮತಾ ಬ್ಯಾನರ್ಜಿ ‘ನಾನೂ ಹಿಂದೂ, ನನಗೂ ದುರ್ಗಾ ಸಪ್ತಶತಿಯ ಮಂತ್ರಗಳು ಗೊತ್ತು’ ಎಂದು ಹೇಳಿದ್ದರು. ಮಾತ್ರವಲ್ಲ ಚಂಡಿಪಾಠದ ಕೆಲ ಮಂತ್ರಗಳನ್ನೂ ಹೇಳಿದ್ದರು. ‘ಮಮತಾ ತಪ್ಪುತಪ್ಪಾಗಿ ಮಂತ್ರಗಳನ್ನು ಹೇಳಿದ್ದಾರೆ’ ಎಂದು ಒಂದು ಕಾಲದ ಮಮತಾರ ಸಹಚರ ಮತ್ತು ಇದೀಗ ಎದುರಾಳಿಯಾಗಿರುವ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಮಮತಾ ಹೇಳಿರುವ ಮಂತ್ರಗಳ ರೆಕಾರ್ಡ್​ ಪ್ಲೇ ಮಾಡಿ ಅಣಕವಾಡಿದ್ದಾರೆ.

‘ನೀವು ನನಗೆ ಹಿಂದುತ್ವದ ಪಾಠ ಮಾಡಲು ಬರಬೇಡಿ. ನನಗೆ ಲಕ್ಷ್ಮೀ, ಸರಸ್ವತಿ, ಕಾಳಿ ಮತ್ತು ದುರ್ಗಾ ದೇವಿಯರ ಮಂತ್ರಗಳು ಗೊತ್ತು. ಚುನಾವಣೆ ಸಮಯದಲ್ಲಿ ಒಂದಿಷ್ಟು ಮಂತ್ರಗಳನ್ನು ಉರುಹೊಡೆದು ನಂತರ ಮರೆತುಬಿಡುವ ನಿಮ್ಮಂತೆ ನಾನಲ್ಲ. ನಾನು ಹೃದಯಪೂರ್ವಕ ಈ ಮಂತ್ರಗಳನ್ನು ಹೇಳುತ್ತೇನೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಮಮತಾರ ಹೇಳಿಕೆಯನ್ನು ವ್ಯಂಗ್ಯವಾಡಲೆಂದು ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಬಂದಿದ್ದ ಬಿಜೆಪಿಯ ಸುವೇಂದು ಅಧಿಕಾರಿ, ಮೊದಲಿಗೆ ಮಂತ್ರಗಳ ರೆಕಾರ್ಡ್​ ಪ್ಲೇ ಮಾಡಿದರು. ನಂತರ ಮಮತಾ ಹೇಳಿರುವ ಮಂತ್ರಗಳ ಧ್ವನಿಮುದ್ರಣವನ್ನು ಪ್ಲೇ ಮಾಡಿದರು. ‘ಅವರು ತಪ್ಪಾಗಿ ಮಂತ್ರಗಳನ್ನು ಹೇಳಿದ್ದಾರೆ. ಅವರಿಗೇನೂ ಗೊತ್ತಿಲ್ಲ’ ಎಂದು ಅಣಕವಾಡಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ತಾರಾ ಪ್ರಚಾರಕ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಮತಾರನ್ನು ಹೋಲಿಸಿದ ಸುವೇಂದು ಅಧಿಕಾರಿ, ‘ಮಮತಾ ಕಲಿಯಬೇಕಾದ್ದು ಸಾಕಷ್ಟಿದೆ’ ಎಂದರು. ‘ಯೋಗಿಗೆ ಸರಿಯಾಗಿ ಮಂತ್ರಗಳನ್ನು ಹೇಳುವುದು ಗೊತ್ತು. ಅವರನ್ನು ಒಮ್ಮೆ ಇಲ್ಲಿಗೆ ಕರೆಸಿ, ಮಮತಾಗೆ ಪಾಠ ಹೇಳಿಸಬೇಕು’ ಎಂದು ಸುವೇಂದು ವ್ಯಂಗ್ಯವಾಡಿದರು. ‘ಇದೀಗ ಮಮತಾ ಇನ್​ಶಾಅಲ್ಲಾಹ್ ಹೇಳುವುದು ನಿಲ್ಲಿಸಿದ್ದಾರೆ. ರಾಜಕೀಯಕ್ಕಾಗಿ ಹಿಂದೂಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ. ನೇತಾಜಿ ಸುಭಾಷ್​ಚಂದ್ರ ಬೋಸ್ ಜಯಂತಿ ಸಮಾರಂಭದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದವರ ವಿರುದ್ಧ ಹರಿಹಾಯ್ದಿದ್ದರು. ನಿನ್ನೆ ದೇವಸ್ಥಾನದ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಿದ್ದರು. ಆಕೆ ಮಮತಾ ಬ್ಯಾನರ್ಜಿ. ಅದೇಕೆ ಆಕೆ ತನ್ನನ್ನು ತಾನು ಹಿಂದು ಎಂದು ಕರೆದುಕೊಳ್ಳುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನಂದಿಗ್ರಾಮದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪ

ಕ್ಷೇತ್ರ ಬದಲಿಸಿದ ಮಮತಾ ಬ್ಯಾನರ್ಜಿ ಮಮತಾ ಬ್ಯಾನರ್ಜಿ ಈ ಮೊದಲು ಭವಾನಿಪುರದಿಂದ ಸ್ಪರ್ಧಿಸುತ್ತಿದ್ದರು. ಈ ಬಾರಿ ತಾವು ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದರು. ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ತೃಣಮೂಲ ಕಾಂಗ್ರೆಸ್ ನಾಯಕ ಸುವೇಂದು ಅಧಿಕಾರಿ ಕಣಕ್ಕಿಳಿಯಲಿದ್ದಾರೆ. ಈ ಕುರಿತು ಬಿಜೆಪಿ ಮಾರ್ಚ್ 6ರಂದು ಘೋಷಿಸಿಕೊಂಡಿತ್ತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು.

ಮುಂದಿನ ತಿಂಗಳಿನಲ್ಲಿ ನಡೆಯಲಿರುವ ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಚುನಾವಣೆಯ ಪೈಕಿ, ಪಶ್ಚಿಮ ಬಂಗಾಳ ಚುನಾವಣಾ ಕಣ ಭರ್ಜರಿ ರಂಗು ಪಡೆದುಕೊಂಡಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ಪ್ರಬಲ ಪೈಪೋಟಿ ನಡೆಯುವ ಸೂಚನೆ ಲಭಿಸಿದೆ. ಇದೀಗ, ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ನಡುವೆ ಚುನಾವಣಾ ಕಣ ರಂಗೇರುವ ಸೂಚನೆ ಖಚಿತವಾಗಿದೆ.

ತೃಣಮೂಲ ಕಾಂಗ್ರೆಸ್​ನ ಮಾಜಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಕಳೆದ ಡಿಸೆಂಬರ್​ನಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ನಂದಿಗ್ರಾಮದಲ್ಲಿ 50,000 ಮತಗಳಿಂದ ಸೋಲಿಸಲಿದೆ ಎಂದು ಅವರು ಹೇಳಿದ್ದರು. ಪಶ್ಚಿಮ ಬಂಗಾಳ ಈ ಬಾರಿ 8 ಹಂತದ ಮತದಾನವನ್ನು ಎದುರಿಸಲಿದೆ. ಮಾರ್ಚ್ 27ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದಲ್ಲಿ ಒಟ್ಟು 7,34,07,832 ಮತದಾರರಿದ್ದು, ಯಾರ ಕೈಗೆ ಆಡಳಿತದ ಚುಕ್ಕಾಣಿ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ಸಿ-ವೋಟರ್ ಸಮೀಕ್ಷೆ ಏನು ಹೇಳುತ್ತಿದೆ? ಪಶ್ಚಿಮ ಬಂಗಾಳದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ಟಿಎಂಸಿ, ಒಟ್ಟು 294 ಸೀಟ್​ಗಳ ಪೈಕಿ 154 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದಲ್ಲಿ ಸ್ಪಷ್ಟ ಬಹುಮತಕ್ಕಾಗಿ 147 ಸ್ಥಾನ ಬೇಕು. ಟಿಎಂಸಿ 154 ಗೆಲ್ಲಬಹುದು ಎನ್ನಲಾಗುತ್ತಿದೆ. ಬಿಜೆಪಿ ಬರೋಬ್ಬರಿ 107 ಕ್ಷೇತ್ರಗಳನ್ನು ಗೆಲ್ಲಬಹುದು ಎಂದೂ ಸಮೀಕ್ಷೆ ತಿಳಿಸಿದೆ. ಪ್ರಸ್ತುತ ಟಿಎಂಸಿ 202 ಸ್ಥಾನ ಮತ್ತು ಬಿಜೆಪಿ 34 ಹೊಂದಿದೆ. ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ವಿಜಯ ಸಾಧಿಸಬಹುದು ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದೆ.

Published On - 7:31 pm, Wed, 10 March 21