ದೆಹಲಿ: ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Assaduddin Owaisi)ಅವರು ಶುಕ್ರವಾರ ಗೃಹ ಸಚಿವಾಲಯ (MHA) ನೀಡುವ ಝೆಡ್ ಕೆಟಗರಿ ಭದ್ರತೆಯನ್ನು ತಿರಸ್ಕರಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಓವೈಸಿ, “ನನಗೆ ಸಾವಿನ ಭಯವಿಲ್ಲ. ನನಗೆ ಝಡ್ ಕೆಟಗರಿ ಭದ್ರತೆ ಬೇಡ, ನಾನು ಅದನ್ನು ತಿರಸ್ಕರಿಸುತ್ತೇನೆ. ನನ್ನನ್ನು ‘ಎ’ ವರ್ಗದ ಪ್ರಜೆಯನ್ನಾಗಿ ಮಾಡಿ. ನಾನು ಸುಮ್ಮನಿರುವುದಿಲ್ಲ. ದಯವಿಟ್ಟು ನ್ಯಾಯ ಕೊಡಿ.ಅವರಿಗೆ (ಶೂಟರ್‌ಗಳಿಗೆ) ಯುಎಪಿಎ ವಿಧಿಸಿ.ದ್ವೇಷ ನಿಲ್ಲಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಲೋಕಸಭಾ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಾಹನದ ಮೇಲೆ ಗುಂಡು ಹಾರಿಸಿದ ಒಂದು ದಿನದ ನಂತರ, ಗೃಹ ವ್ಯವಹಾರಗಳ ಸಚಿವಾಲಯ (MHA) ಓವೈಸಿ ಅವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) Z ಕೆಟಗರಿ ಭದ್ರತೆಯನ್ನು ನೀಡಿದೆ. ಒವೈಸಿ ಅವರ ಭದ್ರತೆಯಲ್ಲಿ ಅವರ ನಿವಾಸದಲ್ಲಿ ಭದ್ರತೆಯ ಹೊರತಾಗಿ ಪ್ರಯಾಣಿಸುವಾಗ ಆರು-ಎಂಟು ಸಶಸ್ತ್ರ ಕಮಾಂಡೋಗಳನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ. ಓವೈಸಿ ಬೆಂಗಾವಲು ಪಡೆ ಮೇಲೆ ದಾಳಿ ಮತ್ತು ಅವರಿಗೆ ಜೀವ ಬೆದರಿಕೆ ಇದೆ ಎಂಬ ಗುಪ್ತಚರ ಬ್ಯೂರೋ ವರದಿಯ ನಂತರ, ಸರ್ಕಾರವು ಅವರಿಗೆ ಎರಡನೇ ಅತ್ಯುನ್ನತ ವರ್ಗದ ಭದ್ರತೆಯನ್ನು ನೀಡಲು ನಿರ್ಧರಿಸಿದೆ. ಈ ಸಂಬಂಧ ಆದೇಶವು ಶೀಘ್ರದಲ್ಲೇ ಸಿಆರ್‌ಪಿಎಫ್‌ಗೆ ತಲುಪಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದರು.
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಓವೈಸಿ, ಅವರು ಮೀರತ್‌ನಿಂದ ದೆಹಲಿಗೆ ಹಿಂದಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಡು ಹಾರಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ನಂತರ ಇಬ್ಬರನ್ನು ಬಂಧಿಸಿದ್ದು, ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಒವೈಸಿ ಅವರು ಸರ್ಕಾರದ ವಿರುದ್ಧ ತೀವ್ರ ಟೀಕಾಕಾರರಾಗಿದ್ದು , ಸರ್ಕಾರ ಅಲ್ಪಸಂಖ್ಯಾತ ವಿರೋಧಿ ನೀತಿಗಳನ್ನು ಅನುಸರಿಸುತ್ತದೆ ಎಂದು ನಿರಂತರವಾಗಿ ಆರೋಪಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನವದೆಹಲಿಯ ಅಶೋಕ ರಸ್ತೆ ಪ್ರದೇಶದಲ್ಲಿ ಓವೈಸಿ ಅವರ ಅಧಿಕೃತ ನಿವಾಸವನ್ನು ಹಿಂದೂ ಸೇನೆಯ ಗುಂಪೊಂದು ಧ್ವಂಸಗೊಳಿಸಿತು. ಬಾಗಿಲು ಮತ್ತು ಕಿಟಕಿಗಳನ್ನು ಹಾನಿಗೊಳಿಸಿ ನಾಮಫಲಕವನ್ನು ಒಡೆದು, ಮನೆಯ ಮೇಲೆ ಕೊಡಲಿ ಎಸೆದು ಸಂಸದರನ್ನು ಜಿಹಾದಿ ಎಂದು ಕರೆದರು. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಐವರನ್ನು ಬಂಧಿಸಿದ್ದರು.
ಓವೈಸಿ ಪ್ರಕಾರ ಗುರುವಾರದ ದಾಳಿಯಲ್ಲಿ ಅವರ ವಾಹನದ ಟೈರ್ ಪಂಕ್ಚರ್ ಆಯಿತು. ಆ ಬಗ್ಗೆ ಲೋಕಸಭೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿಯೂ ಅವರು ಹೇಳಿದ್ದರು.
ಪೊಲೀಸರ ಪ್ರಕಾರ, ವಾಹನದ ಮೇಲೆ ನಾಲ್ಕು ಗುಂಡು ಹಾರಿಸಲಾಯಿತು. ಹಾಪುರ್ ಜಿಲ್ಲೆಯ ಪಿಲ್ಖುವಾ ಬಳಿಯ ಛಜರ್ಸಿ ಟೋಲ್ ಪ್ಲಾಜಾದಲ್ಲಿ ಸಂಜೆ 5.30 ರ ಸುಮಾರಿಗೆ ನಡೆದ ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಯಾವುದೇ ಗಾಯವಾಗಿಲ್ಲ.
ಫೆಬ್ರವರಿ 7 ರಂದು ಉತ್ತರ ನೀಡಲಿದ್ದಾರೆ ಅಮಿತ್ ಶಾ
ಫೆಬ್ರವರಿ 7 ರಂದು, ಉತ್ತರ ಪ್ರದೇಶದಲ್ಲಿ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರ ಕಾರಿಗೆ ಗುಂಡು ಹಾರಿಸಿದ ಘಟನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ನಲ್ಲಿ ವಿವರವಾದ ಉತ್ತರವನ್ನು ನೀಡಲಿದ್ದಾರೆ.
ಇದನ್ನೂ ಓದಿ:ನಿರ್ದಿಷ್ಟ ಧರ್ಮದ ವಿರುದ್ಧ ಅಸಾದುದ್ದೀನ್ ಓವೈಸಿ ಹೇಳಿಕೆಯಿಂದ ನೋವಾಗಿದೆ: ಗುಂಡಿನ ದಾಳಿ ಪ್ರಕರಣದ ಆರೋಪಿ
Published On - 5:50 pm, Fri, 4 February 22