ಕಾಂಗ್ರೆಸ್ ಪಕ್ಷ ಉಳಿಯುವ ಭರವಸೆಯಿಲ್ಲ: ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಕೊಟ್ಟ ಗೋವಾ ಕಾಂಗ್ರೆಸ್ ನಾಯಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 27, 2021 | 10:51 PM

ಪಕ್ಷದಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿದ್ದ ಅವರು ಹೊರ ನಡೆಯುವಾಗ ಪಕ್ಷ ಮುನ್ನಡೆಸುವ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ ಉಳಿಯುವ ಭರವಸೆಯಿಲ್ಲ: ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಕೊಟ್ಟ ಗೋವಾ ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಬಾವುಟ
Follow us on

ದೆಹಲಿ: ಕಾಂಗ್ರೆಸ್ ಪಕ್ಷದ ಗೋವಾ ಘಟಕದ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ಲುಝಿಂಹೊ ಫಲಿಯಿರೊ ಸೋಮವಾರ ಕಾಂಗ್ರೆಸ್ ಪಕ್ಷದಿಂದ ಹೊರ ನಡೆದಿದ್ದಾರೆ. ಪಕ್ಷದಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿದ್ದ ಅವರು ಹೊರ ನಡೆಯುವಾಗ ಪಕ್ಷ ಮುನ್ನಡೆಸುವ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ‘ಪಕ್ಷದಲ್ಲಿ ನನಗೆ ಯಾವುದೇ ಭರವಸೆ ಕಾಣುತ್ತಿಲ್ಲ. ಕುಸಿತವನ್ನು ಹೇಗೆ ತಡೆಗಟ್ಟಬೇಕು ಎಂಬುದೂ ಅರ್ಥವಾಗುತ್ತಿಲ್ಲ. ನಾನು ಯಾವ ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೋ, ಹೋರಾಡಿದ್ದೇನೋ ಆ ಪಕ್ಷವಾಗಿ ಈಗ ಕಾಂಗ್ರೆಸ್ ಉಳಿದಿಲ್ಲ’ ಎಂದು ಸೋನಿಯಾ ಗಾಂಧಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

70 ವರ್ಷ ವಯಸ್ಸಿನ ಅವರು ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್​ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಹೊಗಳಿ ಮಾತನಾಡಿದ್ದರು. ಅವರ ಹೊಗಳಿಕೆಯನ್ನು ಕೇಳಿದ್ದ ಹಲವು ಲುಝಿಂಹೊ ಟಿಎಂಸಿ ಸೇರಬಹುದು ಎಂದು ವಿಶ್ಲೇಷಿಸಿದ್ದರು. ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿಗೆ ಕಠಿಣ ಸ್ಪರ್ಧೆ ನೀಡಿದ್ದರು. ಮಮತಾ ಅವರ ಸೂತ್ರವು ಪಶ್ಚಿಮ ಬಂಗಾಳದಲ್ಲಿ ಅವರಿಗೆ ಗೆಲುವು ತಂದುಕೊಟ್ಟಿತು’ ಎಂದು ಲುಝಿಂಹೊ ಹೇಳಿದ್ದರು. ನೀವು ತೃಣಮೂಲ ಕಾಂಗ್ರೆಸ್ ಸೇರುವ ಆಲೋಚನೆಯಲ್ಲಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, ‘ನಾನು ಕಾಂಗ್ರೆಸ್ ಪಕ್ಷದ ಸದಸ್ಯನಾಗಿಯೇ ಮುಂದುವರಿಯುವೆ. ಕಾಂಗ್ರೆಸ್​ನಿಂದಲೇ ಬೆಳೆದ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಮೂಲಕ ಬಿಜೆಪಿಯನ್ನು ಎದುರಿಸಲು ತಕ್ಕ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದರು.

‘ಕಾಂಗ್ರೆಸ್​ ಪಕ್ಷದ ನಾಲ್ಕು ಮುಖಗಳ ಪೈಕಿ ಮಮತಾ ಬ್ಯಾನರ್ಜಿ ಮಾತ್ರ ಅವರಿಗೆ (ಪ್ರಧಾನಿ ನರೇಂದ್ರ ಮೋದಿ) ಮತ್ತು ಅವರ ಹಿಂಬಾಲಕರಿಗೆ ಕಠಿಣ ಪ್ರತಿರೋಧ ತೋರಿದರು ಎಂದು ಪ್ರತಿಕ್ರಿಯಿಸಿದ್ದರು. 2017ರಲ್ಲಿ ಪಕ್ಷದ ಕೈಗೆ ಅಧಿಕಾರ ಎಟುಕುವಂತಿದ್ದರೂ ಕಾಂಗ್ರೆಸ್ ಅದನ್ನು ದಕ್ಕಿಸಿಕೊಳ್ಳಲಿಲ್ಲ. ಈ ಅಂಶವನ್ನು ಸಹ ಫಲಿಯಿರೊ ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

‘ನಮ್ಮ 13 ಶಾಸಕರು ಪಕ್ಷಾಂತರ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರೊಬ್ಬರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ಪಕ್ಷದ ಕುಸಿತ ತಡೆಗಟ್ಟುವ ಪ್ರಯತ್ನವನ್ನೂ ಯಾರೊಬ್ಬರೂ ಮಾಡಲಿಲ್ಲ. ನಾವು ಯಾವ ಪಕ್ಷಕ್ಕಾಗಿ ಹೋರಾಡಿ, ತ್ಯಾಗ ಮಾಡಿದೆವೋ ಅದೇ ಪಕ್ಷವಾಗಿ ಕಾಂಗ್ರೆಸ್​ ಗೋವಾದಲ್ಲಿ ಈಗ ಉಳಿದಿಲ್ಲ. ಸಂಸ್ಥಾಪಕರ ಎಲ್ಲ ಆಶಯಗಳಿಗೆ ವ್ಯತಿರಿಕ್ತವಾಗಿ ಪಕ್ಷವು ಈಗ ಸಾಗುತ್ತಿದೆ’ ಎಂದು ಫಲಿಯಿರೊ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಗೋವಾ ಘಟಕವು ಪಕ್ಷವು ಏತಕ್ಕಾಗಿ ಅಸ್ತಿತ್ವದಲ್ಲಿತ್ತೋ ಅದಕ್ಕೆ ವ್ಯತಿರಿಕ್ತವಾಗಿದೆ. ಪಕ್ಷದ ನಾಯಕರಿಗೆ ಜನರ ಹಿತಾಸಕ್ತಿಗಿಂತಲೂ ತಮ್ಮ ಸ್ವಾರ್ಥ ಸಾಧನೆಯೇ ಮುಖ್ಯವಾಗಿದೆ. ಪರಿಣಾಮಕಾರಿ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿಯೂ ನಾವು ವಿಫಲರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಫಲಿಯಿರೊ ಅವರ ನಿರ್ಗಮನವು ಗೋವಾದಲ್ಲಿ ಕಾಂಗ್ರೆಸ್​ ಪಕ್ಷವು ತೀವ್ರಗತಿಯಲ್ಲಿ ಕುಸಿದಿರುವ ಸಂಕೇತವಾಗಿದೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್​ ಪಕ್ಷದ 15 ಶಾಸಕರ ಪೈಕಿ 10 ಮಂದಿ ಬಿಜೆಪಿಗೆ ಸೇರಿದ್ದರು. ಆಮ್ ಆದ್ಮಿ ಪಕ್ಷ (ಆಪ್) ತೃಣಮೂಲ ಕಾಂಗ್ರೆಸ್ ಪಕ್ಷಗಳು (ಟಿಎಂಸಿ) ನಿರ್ವಾತ ತುಂಬಲು ಶ್ರಮಿಸುತ್ತಿವೆ. ರಾಜೀನಾಮೆಗೂ ಮುನ್ನ ಮಮತಾ ಬ್ಯಾನರ್ಜಿಯನ್ನು ಸ್ಟ್ರೀಟ್ ಫೈಟರ್ ಎಂದು ಹೊಗಳಿದ್ದ ಫಲಿಯಿರೊ, ಬಿಜೆಪಿಗೆ ಮಮತಾ ಪ್ರಬಲ ಪೈಪೋಟಿ ನೀಡಬಲ್ಲರು ಎಂದಿದ್ದರು.

ಸುಷ್ಮಿತಾ ದೇವ್ ಪಕ್ಷಾಂತರದ ನಂತರ ಇದು ಕಾಂಗ್ರೆಸ್​ ಪಕ್ಷಕ್ಕೆ ಆಗಿರುವ ಅತಿದೊಡ್ಡ ನಷ್ಟ. ಫಲಿಯಿರೊ ಅವರಿಗೆ ತ್ರಿಪುರ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷವು ಮಹತ್ವದ ಜವಾಬ್ದಾರಿ ನೀಡಿತ್ತು. ಇದೀಗ ಫಲಿರಿಯೊ ಸೇರ್ಪಡೆಯು ಗೋವಾದಲ್ಲಿ ಟಿಎಂಸಿಗೆ ಮತ್ತಷ್ಟು ಶಕ್ತಿ ತುಂಬಿದೆ. 2019ರ ಮಹಾ ಚುನಾವಣೆಯಲ್ಲಿ ಫಲಿಯಿರೊ ಅವರು ತ್ರಿಪುರಾದಲ್ಲಿ ಕಾಂಗ್ರೆಸ್​ ಉಸ್ತುವಾರಿಯಾಗಿದ್ದರು. ಇದೀಗ ಇವರು ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಯಾಗಿರುವುದು ಈಶಾನ್ಯ ಭಾರತದಲ್ಲಿ ಟಿಎಂಸಿಗೆ ಹೊಸ ಬಲ ತುಂಬಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಗೋವಾದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

(I Dont have hope left says Resigned Goa Congress Chief Luizinho Faleiro to Sonia Gandhi)

ಇದನ್ನೂ ಓದಿ: ಕಾಂಗ್ರೆಸ್ ಇವತ್ತು ದಲ್ಲಾಳಿಗಳ ಪರ ಹೋರಾಟ ಮಾಡುತ್ತಿದೆ; ಭಾರತ್ ಬಂದ್ ವಿಫಲವಾಗಿದೆ: ಸಿಟಿ ರವಿ ವಾಗ್ದಾಳಿ

ಇದನ್ನೂ ಓದಿ: ಚರಣ್​ಜಿತ್ ಸಿಂಗ್ ಚನ್ನಿ ಮುಂದಿರುವ ಆಯ್ಕೆ, ಸವಾಲುಗಳೇನು? ಪಂಜಾಬ್ ಹೊಸ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಭವಿಷ್ಯ!