ಅತ್ಯಾಚಾರದ ನಂತರ ಎರಡು ಬೆರಳು ಪರೀಕ್ಷೆಯಿಂದ ಆಘಾತಕ್ಕೊಳಗಾದೆ: ಐಎಎಫ್ ಅಧಿಕಾರಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 30, 2021 | 2:03 PM

ಎಫ್ಐಆರ್ ಪ್ರಕಾರ ಸಂತ್ರಸ್ತೆ ಸೆಪ್ಟೆಂಬರ್ 9 ರಂದು ತರಬೇತಿ ಸಮಯದಲ್ಲಿ ಬ್ಯಾಸ್ಕೆಟ್ ಬಾಲ್ ಆಡುವಾಗ ಆಕೆಯ ಬಲಗಾಲಿಗೆ ಗಾಯವಾಗಿತ್ತು. ಆಕೆ ನೋವು ನಿವಾರಕ ಸೇವಿಸಿ ಆ ಸಂಜೆ ತನ್ನ ಸಹೋದ್ಯೋಗಿಗಳೊಂದಿಗೆ ಅಧಿಕಾರಿಗಳ ಮೆಸ್ ಬಾರ್​​ನಲ್ಲಿ ಭೇಟಿಯಾದಳು.

ಅತ್ಯಾಚಾರದ ನಂತರ ಎರಡು ಬೆರಳು ಪರೀಕ್ಷೆಯಿಂದ ಆಘಾತಕ್ಕೊಳಗಾದೆ: ಐಎಎಫ್ ಅಧಿಕಾರಿ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: 28ರ ಹರೆಯದ ಭಾರತೀಯ ವಾಯುಪಡೆಯ (IAF) ಮಹಿಳಾ ಅಧಿಕಾರಿಯೊಬ್ಬರು ತನ್ನ ಸಹೋದ್ಯೋಗಿಯ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಐಎಎಫ್ ತನ್ನ ಮೇಲೆ ನಡೆದ ಅತ್ಯಾಚಾರವನ್ನು ದೃಢೀಕರಿಸಲು ಅಕ್ರಮವಾಗಿ ಎರಡು ಬೆರಳಿನ ಪರೀಕ್ಷೆಗೆ ಒಳಪಡಿಸಿದೆ ಮತ್ತು ಸಾಕ್ಷ್ಯವನ್ನು ತಿರುಚಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸೆಪ್ಟೆಂಬರ್ 20 ರಂದು ತಮಿಳುನಾಡು ಪೊಲೀಸರು ಸಲ್ಲಿಸಿದ ಪ್ರಾಥಮಿಕ ಮಾಹಿತಿ ವರದಿ (FIR) ಪ್ರಕಾರ ಮಹಿಳಾ ಅಧಿಕಾರಿಯು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಾಯುಪಡೆಯ ಆಡಳಿತ ಕಾಲೇಜಿ ಕ್ಯಾಂಪಸ್​​ನಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಆಕೆಯ ಪಾದದ ಗಾಯದ ನೋವನ್ನು ಸಹಿಸಬಹುದಾದರೆ (ಆಪಾದಿತ ಅಪರಾಧಕ್ಕೆ ಕೆಲವು ಗಂಟೆಗಳ ಮೊದಲು  ಈ ಗಾಯವಾಗಿತ್ತು), ತನ್ನ ಅತ್ಯಾಚಾರಿಯನ್ನು  ಕ್ಯಾಂಪಸ್‌ನಲ್ಲಿ ನೋಡುವ ನೋವನ್ನು ಸಹ ನಿಭಾಯಿಸಬಹುದೆಂದು ಕಾಲೇಜು ಅಧಿಕಾರಿಗಳು ಹೇಳಿರುವುದಾಗಿ ಸಂತ್ರಸ್ತೆ ದೂರಿದ್ದಾಳೆ.

ಆದಾಗ್ಯೂ ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಐಎಎಫ್ ನಿರಾಕರಿಸಿದೆ. “ಈ ವಿಷಯವು ಕಾನೂನು ವ್ಯಾಪ್ತಿಯಲ್ಲಿರುವುದರಿಂದ ನಾವು ಈ ಹಂತದಲ್ಲಿ ಪ್ರತಿಕ್ರಿಯೆಯನ್ನು ನೀಡಲು ಬಯಸುವುದಿಲ್ಲ” ಎಂದು ಹೆಸರು ಹೇಳಲು ಇಚ್ಛಿಸದ ವಕ್ತಾರರು ಹೇಳಿದರು.

ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ ನಂತರ, 29 ವರ್ಷದ ಫ್ಲೈಟ್ ಲೆಫ್ಟಿನೆಂಟ್, ಅವರ ವಕೀಲರು ಮತ್ತು ಐಎಎಫ್ ಸೋಮವಾರ ಕೊಯಮತ್ತೂರಿನ ಹೆಚ್ಚುವರಿ ಮಹಿಳಾ ನ್ಯಾಯಾಲಯದಲ್ಲಿ ಈ ಪ್ರಕರಣದಲ್ಲಿ ಸಿವಿಲ್ ಪೊಲೀಸರಿಗೆ ಯಾವುದೇ ಅಧಿಕಾರವ್ಯಾಪ್ತಿ ಇಲ್ಲ ಎಂದು ಸ್ವತಂತ್ರವಾಗಿ ವಾದಿಸಿದರು.

ಅವರು ಆರೋಪಿಯ ಕಸ್ಟಡಿಯನ್ನು ಐಎಎಫ್‌ಗೆ ವರ್ಗಾಯಿಸುವಂತೆ ಕೇಳಿದರು ಮತ್ತು ಕೋರ್ಟ್ ಮಾರ್ಷಲ್ ನಡೆಸಲು ಕೇಳಿದರು. ಆದಾಗ್ಯೂ, ನ್ಯಾಯಾಲಯವು ಆತನ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಿತು ಮತ್ತು ಆ ದಿನ ಪ್ರಕರಣದ ನ್ಯಾಯವ್ಯಾಪ್ತಿಯನ್ನು ನಿರ್ಧರಿಸುವುದಾಗಿ ಹೇಳಿತು.

ದೂರಿನಲ್ಲಿರುವ ವಿವರಗಳು ಆಘಾತಕಾರಿ ಎಂದು ತಜ್ಞರು ಹೇಳಿದ್ದಾರೆ. “ಸೇವೆಯೊಳಗೆ ಲೈಂಗಿಕ ದೌರ್ಜನ್ಯಗಳು ನಡೆಯುವುದಿಲ್ಲ ಎಂದು ರಕ್ಷಣಾ ಸೇವೆಗಳು ಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಿದ್ಧರಾಗಿರಬೇಕು” ಎಂದು ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕೆಲಸ ಮಾಡುವ ವಿದ್ಯಾ ರೆಡ್ಡಿ ಹೇಳಿದರು.

ಎಫ್ಐಆರ್ ಪ್ರಕಾರ ಸಂತ್ರಸ್ತೆ ಸೆಪ್ಟೆಂಬರ್ 9 ರಂದು ತರಬೇತಿ ಸಮಯದಲ್ಲಿ ಬ್ಯಾಸ್ಕೆಟ್ ಬಾಲ್ ಆಡುವಾಗ ಆಕೆಯ ಬಲಗಾಲಿಗೆ ಗಾಯವಾಗಿತ್ತು. ಆಕೆ ನೋವು ನಿವಾರಕ ಸೇವಿಸಿ ಆ ಸಂಜೆ ತನ್ನ ಸಹೋದ್ಯೋಗಿಗಳೊಂದಿಗೆ ಅಧಿಕಾರಿಗಳ ಮೆಸ್ ಬಾರ್​​ನಲ್ಲಿ ಭೇಟಿಯಾದಳು. ಅಲ್ಲಿ ಆರೋಪಿ ತನ್ನ ಎರಡನೇ ಡ್ರಿಂಕ್ಸ್ ಗೆ ಪಾವತಿ ಮಾಡಿದ್ದ. ಸಂತ್ರಸ್ತೆ ವಾಂತಿ ಮಾಡಿ ಮಲಗಲು ಹೋದಳು ಮತ್ತು ಇಬ್ಬರು ಸ್ನೇಹಿತರು (ಒಬ್ಬ ಪುರುಷ ಮತ್ತು ಇನ್ನೊಬ್ಬ ಮಹಿಳೆ) ಅವಳನ್ನು ನೋಡಿಕೊಂಡರು ಮತ್ತು ಹೊರಡುವ ಮೊದಲು ಕೊಠಡಿಯನ್ನು ಹೊರಗಿನಿಂದ ಮುಚ್ಚಿದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅವಳು ಮಲಗಿದ್ದಾಗ, ಆರೋಪಿ ಒಳಗೆ ಬಂದು ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾನೆ. ಆತ ಅವಳನ್ನು ಚುಂಬಿಸಲು ಪ್ರಯತ್ನಿಸುತ್ತಿರುವಾಗ ಆಕೆ ತಳ್ಳಲು ಯತ್ನಿಸಿದಳು. ಆದರೆ ಅವಳ ಪಾದದ ಗಾಯದಿಂದಾಗಿ ಈ ಪ್ರಯತ್ನ ವ್ಯರ್ಥವಾಯಿತು. ಆಕೆಯ ಒಪ್ಪಿಗೆಯೊಂದಿಗೆ ಆ ವ್ಯಕ್ತಿ ಕೋಣೆಯಲ್ಲಿ ಇದ್ದನೇ ಎಂದು ಮಹಿಳಾ ಸ್ನೇಹಿತೆ ಕೇಳಿರುವುದಾಗಿ ಎಫ್ಐಆರ್​​ನಲ್ಲಿದೆ.

ಎಫ್ಐಆರ್ ಪ್ರಕಾರ ಮರುದಿನ ಆಕೆಯ ಖಾಸಗಿತನಕ್ಕೆ ಧಕ್ಕೆ ತಂದಿದ್ದಕ್ಕೆ ಆರೋಪಿ ವಿಷಾದ ವ್ಯಕ್ತಪಡಿಸಿದ್ದನು. ಆದರೆ ಆಕೆಯ ಮಹಿಳಾ ಸ್ನೇಹಿತೆ ಹಾಸಿಗೆಯ ಮೇಲೆ ವೀರ್ಯದ ಕಲೆಗಳನ್ನು ತೋರಿಸಿದಳು.

ಸೆಪ್ಟೆಂಬರ್ 11 ರಂದು ಅವಳಿಗೆ ಎರಡು ಆಯ್ಕೆಗಳನ್ನು ನೀಡಿದ ಇಬ್ಬರು ಅಧಿಕಾರಿಗಳನ್ನು ಭೇಟಿಯಾಗಲು ಹೇಳಲಾಯಿತು.ಒಂದೋ ದೂರು ದಾಖಲಿಸಿ, ಅಥವಾ ಎಲ್ಲವೂ ಒಪ್ಪಿಗೆಯಿಂದ ನಡೆದದ್ದು ಎಂದು ಲಿಖಿತ ಹೇಳಿಕೆ ನೀಡಿ ಎಂಬ ಎರಡು ಆಯ್ಕೆ ನೀಡಿ ವಾಯುಪಡೆ ಆಸ್ಪತ್ರೆಗೆ ಹೋಗುವಂತೆ ಸಂತ್ರಸ್ತೆಗೆ ನಿರ್ದೇಶಿಸಲಾಯಿತು.

ಆಕೆಯ ಸ್ನೇಹಿತರು ಅವಳ ಜೊತೆಗಿದ್ದರು, ಮತ್ತು ವೈದ್ಯರು ತಪ್ಪೊಪ್ಪಿಗೆ ವಿಡಿಯೊವನ್ನು ನೋಡಲು ಬಯಸಿದ್ದರು. ಅವರು ಸಂತ್ರಸ್ತೆಗೆ ಆಕೆಯ ಲೈಂಗಿಕ ಇತಿಹಾಸದ ಬಗ್ಗೆ ಕೇಳಿದರು ಮತ್ತು ಆಕೆಯ ಖಾಸಗಿ ಭಾಗಗಳನ್ನು ದೈಹಿಕವಾಗಿ ಪರೀಕ್ಷಿಸಿದರು.

“ಅತ್ಯಾಚಾರವಾಗಿದೆಯೇ ಎಂದು ಸಾಬೀತು ಪಡಿಸಲು ಎರಡು ಬೆರಳಿನ ಪರೀಕ್ಷೆಯನ್ನು ಮಾಡಲಾಗುವುದಿಲ್ಲ ಎಂದು ನಂತರವೇ ನನಗೆ ತಿಳಿಯಿತು. ಈ ಕ್ರಮವು ಅತ್ಯಾಚಾರಕ್ಕೊಳಗಾದ ಆಘಾತದೊಂದಿಗೆ ಮತ್ತಷ್ಟು ನನ್ನನ್ನು ಘಾಸಿಗೊಳಿಸಿತು ”ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​ ನಟಿ ಸವಿ ಮಾದಪ್ಪ ಆತ್ಮಹತ್ಯೆ; ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣು