ಮುಂಬೈ: ಸಂಜಯ್ ರಾವತ್ ಮುಗ್ಧರಾಗಿದ್ದರೆ ಭಯ ಪಡುವುದು ಏಕೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಪ್ರಶ್ನಿಸಿದ್ದಾರೆ.
ಶಿವಸೇನೆ ನಾಯಕ ಸಂಜಯ್ ರಾವತ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈಗಾಗಲೇ ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಇಡಿ ಅವರ ವಿಚಾರಣೆ ನಡೆಸಿತ್ತು. ಈ ಕುರಿತು ಮಾತನಾಡಿರುವ ಸಿಎಂ ಏಕನಾಥ್ ಶಿಂದೆ, ಸಂಜಯ್ ರಾವತ್ ಏನೂ ತಪ್ಪು ಮಾಡಿಲ್ಲವೆಂದರೆ ಭಯ ಪಡುವುದು ಏಕೆ, ಇಡಿ ಕ್ರಮಗಳಿಂದ ಯಾರಿಗಾದರೂ ಭಯವಿದ್ದರೆ ಅವರು ನಮ್ಮನ್ನು ಅಥವಾ ಬಿಜೆಪಿಗೆ ಸೇರುವುದು ಬೇಡ ಎಂದರು.
ತನಿಖೆ ನಡೆಯುತ್ತಿದೆ. ಅವನೇನೂ ತಪ್ಪು ಮಾಡಿಲ್ಲ ಎಂದಾದರೆ ಅವರಿಗೇಕೆ ಭಯ? ಇಡಿಗೆ ಹೆದರಿ ನಮ್ಮ ಪಕ್ಷಕ್ಕೆ ಬರಬಾರದು ಎಂದರು.
ಇಡಿ ಅಧಿಕಾರಿಗಳು ಮುಂಬೈನಲ್ಲಿರುವ ಸಂಜಯ್ ರಾವತ್ ಮನೆ ಮೇಲೆ ದಾಳಿ ನಡೆಸಿದೆ. ಪತ್ರಾ ಚಾಲ್ ಭೂ ಹಗರಣ ಪ್ರಕರಣದ ಸಂಬಂಧ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಇಡಿ ಸಂಜಯ ರಾವತ್‌ಗೆ ಸಮನ್ಸ್ ನೀಡಿತ್ತು. ಎರಡು ಬಾರಿ ಅವರು ವಿಚಾರಣೆಗೆ ಗೈರಾಗಿದ್ದರು. ಜುಲೈ 27ರಂದು ಸಹ ಅವರು ಇಡಿ ಮುಂದೆ ಹಾಜರಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಇಡಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಸಂಜಯ್ ರಾವತ್‌ಗೆ ಸೇರಿದ 1034 ಕೋಟಿ ರೂ. ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈಗ ಮತ್ತೆ ದಾಳಿ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.