ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಬರೆದ ಸನ್ರೈಸ್ ಓವರ್ ಅಯೋಧ್ಯಾ ಎಂಬ ಪುಸ್ತಕ ಇತ್ತೀಚೆಗೆ ವಿವಾದ ಸೃಷ್ಟಿಸಿದೆ. ಆ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್ ಹಿಂದುತ್ವವನ್ನು, ಇಸ್ಲಾಂ ಉಗ್ರ ಸಂಘಟನೆಗಳಾದ ಐಸಿಸ್ ಮತ್ತು ಬೋಕೋ ಹರಾಮ್ಗೆ ಹೋಲಿಸಿದ್ದೇ ಈ ವಿವಾದ, ವಿರೋಧಕ್ಕೆ ಕಾರಣ. ಕೆಲವರು ಆ ಪುಸ್ತಕವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ದೆಹಲಿ ಹೈಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ದೆಹಲಿ ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದೆ. ‘ಈ ಪುಸ್ತಕ ಓದುವುದರಿಂದ ಯಾರ ಭಾವನೆಗೆ ಧಕ್ಕೆಯಾಗುತ್ತದೆಯೋ, ಅಂಥವರು ಇದನ್ನು ಓದಲೇಬೇಡಿ. ಬೇರೆ ಏನಾದರೂ ಒಳ್ಳೆಯದನ್ನು ಓದಿ’ ಎಂದು ಸಲಹೆ ನೀಡಿದೆ.
‘ಪುಸ್ತಕ ನಿಷೇಧಿಸಬೇಕು ಎಂದು ಇಲ್ಲಿ ಅರ್ಜಿ ಸಲ್ಲಿಸುವ ಬದಲು, ನೀವ್ಯಾಕೆ ಜನರಿಗೇ ಹೇಳಬಾರದು. ಈ ಪುಸ್ತಕವನ್ನು ಖರೀದಿಸಬೇಡಿ, ಓದಬೇಡಿ ಎಂದು ಜನರಿಗೇ ನೇರವಾಗಿ ಹೇಳಿ. ಈ ಪುಸ್ತಕದಲ್ಲಿ ಕೆಟ್ಟದಾಗಿ ಬರೆಯಲಾಗಿದೆ. ಹಾಗಾಗಿ ಓದಬೇಡಿ ಎಂದು ಪ್ರತಿಯೊಬ್ಬರಿಗೂ ಹೇಳಿ. ಇದರಲ್ಲಿ ಏನಾದರೂ ನೋವುಂಟಾಗುವ ವಿಷಯಗಳಿದ್ದರೆ, ಅದನ್ನು ಓದುವುದನ್ನು ಬಿಟ್ಟು, ಬೇರೆ ಏನಾದರೂ ಓದುವುದು ಒಳ್ಳೆಯದು’ ಎಂದು ಹೈಕೋರ್ಟ್ ಅರ್ಜಿದಾರರಿಗೆ ಹೇಳಿದೆ.
ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ಹೇಳಲಾದ ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರರು, ಪ್ರತಿಯೊಬ್ಬರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಅದು ನಿಯಂತ್ರಣ ಮೀರಬಾರದು. ಯಾರಿಗೂ ಇತರರ ಭಾವನೆಗಳನ್ನು ಉಲ್ಲಂಘಿಸುವ ಹಕ್ಕು ಇಲ್ಲ. ಆರ್ಟಿಕಲ್ 19ರಲ್ಲಿರುವ ನಿರ್ಬಂಧಗಳನ್ನು ಮೀರಿದಂತೆ ಆಗುತ್ತದೆ ಎಂದು ದೆಹಲಿ ಹೈಕೋರ್ಟ್ಗೆ ಹೇಳಿದ್ದರು. ಆದರೆ ಹೈಕೋರ್ಟ್ ಪುಸ್ತಕ ನಿರ್ಬಂಧಿಸಲಾಗದು ಎಂದು ಖಡಾಖಂಡಿತವಾಗಿ ಹೇಳಿದೆ. ಅಷ್ಟೇ ಅಲ್ಲ, ಅರ್ಜಿದಾರರು ಹೇಳುತ್ತಿರುವ ವಿಚಾರ ಪುಸ್ತಕದ ಒಂದು ಆಯ್ದ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಅದಕ್ಕಾಗಿ ಪ್ರಕಾಶಕರ ಪರವಾನಗಿಯನ್ನು ರದ್ದುಪಡಿಸಲಾಗದು. ನಮಗೆ ಇಡೀ ಪುಸ್ತಕವನ್ನೂ ಕೊಟ್ಟಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: IPL 2022: ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರ ನೇರ ಆಯ್ಕೆ: ಏನಿದು ನಿಯಮ?