ವಿರೋಧ ಪಕ್ಷಗಳು ಸದೃಢವಾಗಿದ್ದರೆ ರೈತರು ಆಂದೋಲನ ನಡೆಸುವ ಅಗತ್ಯವೇನಿತ್ತು? ರೈತ ಮುಖಂಡನ ಪ್ರಶ್ನೆ

ರೈತ ಮುಖಂಡರು ಹಾಗೂ ಕೇಂದ್ರ ಸಚಿವರ ನಡುವೆ ಹಲವು ಸುತ್ತಿನ ಮಾತುಕತೆಗಳಾಗಿದ್ದು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ನಾಳೆ (ಡಿ.30)ರಂದು ರೈತ ಮುಖಂಡರು ಕೇಂದ್ರ ಸರ್ಕಾರದೊಡನೆ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧರಾಗಿದ್ದಾರೆ.

ವಿರೋಧ ಪಕ್ಷಗಳು ಸದೃಢವಾಗಿದ್ದರೆ ರೈತರು ಆಂದೋಲನ ನಡೆಸುವ ಅಗತ್ಯವೇನಿತ್ತು? ರೈತ ಮುಖಂಡನ ಪ್ರಶ್ನೆ
ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ (ಸಂಗ್ರಹ ಚಿತ್ರ)
Edited By:

Updated on: Apr 06, 2022 | 11:11 PM

ದೆಹಲಿ:  ದೇಶದಲ್ಲಿ ವಿರೋಧ ಪಕ್ಷಗಳು ಸದೃಢವಾಗಿದ್ದರೆ ರೈತರು ಆಂದೋಲನ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸುವ ಮೂಲಕ ಭಾರತೀಯ ಕಿಸಾನ್ ಯೂನಿಯನ್​ನ (BKU) ವಕ್ತಾರ ರಾಕೇಶ್ ಟಿಕಾಯತ್​ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡಕ್ಕೂ ಚಾಟಿ ಬೀಸಿದ್ದಾರೆ.

ವಿರೋಧ ಪಕ್ಷಗಳು ರೈತರ ಹಾದಿ ತಪ್ಪಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೆ, ರೈತರ ಪ್ರತಿಭಟನೆ ನಡೆಸಲು ಕಾಂಗ್ರೆಸ್​ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ರಾಕೇಶ್ ಟಿಕಾಯತ್​  ಹೀಗೆ ಉತ್ತರಿಸಿದ್ದಾರೆ. ವಿರೋಧ ಪಕ್ಷಗಳು ಬಲವಾಗಿದ್ದರೆ ನಾವ್ಯಾಕೆ ಆಂದೋಲನ ನಡೆಸಬೇಕಿತ್ತು ಎಂದು ಕೇಳಿದ್ದಾರೆ. ಈ ಹೇಳಿಕೆಯು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳಿಗೆ ಏಕಕಾಲಕ್ಕೆ ಬಿಸಿ ಏಟು ಕೊಟ್ಟಂತಾಗಿದೆ.

ನಾಳೆ ಸರ್ಕಾರದೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಲಿದ್ದಾರೆ ರೈತಮುಖಂಡರು
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯು 34ನೇ ದಿನವನ್ನು ಪೂರೈಸಿದೆ. ಒಂದು ತಿಂಗಳ ಅವಧಿಯಿಂದ ರೈತರು ದೆಹಲಿ ಚಳಿಯನ್ನು ಲೆಕ್ಕಿಸದೆ, ಸಿಂಘು, ಟಿಕ್ರಿ ಗಡಿಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ರೈತ ಮುಖಂಡರು ಹಾಗೂ ಕೇಂದ್ರ ಸಚಿವರ ನಡುವೆ ಹಲವು ಸುತ್ತಿನ ಮಾತುಕತೆಗಳಾಗಿದ್ದು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದೀಗ, ನಾಳೆ (ಡಿ.30)ರಂದು ರೈತ ಮುಖಂಡರು ಕೇಂದ್ರ ಸರ್ಕಾರದೊಡನೆ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧರಾಗಿದ್ದಾರೆ.

ಡಿಸೆಂಬರ್ 30ರಂದು ಸರ್ಕಾರದೊಂದಿಗಿನ ಮಾತುಕತೆಗೆ ರೈತರನ್ನು ಆಹ್ವಾನಿಸಲಾಗಿತ್ತು. ಕೇಂದ್ರದ ಆಹ್ವಾನ ಪತ್ರವನ್ನು ಸ್ವೀಕರಿಸಿರುವ ರೈತರು, ನಾಳೆ 2 ಗಂಟೆಗೆ ಸರ್ಕಾರದ ಜೊತೆಗೆ ಸಭೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಪತ್ರದ ಮೂಲಕ ಕೃಷಿ ಸಚಿವಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಸರ್ಕಾರ ಕಾನೂನಾತ್ಮಕ ಭರವಸೆ ನೀಡಬೇಕು ಎಂಬ ಬಗ್ಗೆಯೂ ಪತ್ರದಲ್ಲಿ ಪುನರುಚ್ಛರಿಸಿದ್ದಾರೆ.

Photos: ಒಂದು ತಿಂಗಳು ಪೂರೈಸಿದ ರೈತರ Delhi Chalo ಪ್ರತಿಭಟನೆ

 

Published On - 7:22 pm, Tue, 29 December 20