Mann Ki Baat@100: ಮನ್ ಕಿ ಬಾತ್ 100 ಕೋಟಿ ಕೇಳುಗರನ್ನು ತಲುಪಿದೆ: IIM ಸಮೀಕ್ಷೆ

|

Updated on: Apr 24, 2023 | 8:55 PM

41 ಕೋಟಿ ಜನರು ಒಮ್ಮೊಮ್ಮೆ ಮಾತ್ರ ಇದನ್ನು ಆಲಿಸುತ್ತಿದ್ದು, ಇವರು ನಿಯಮಿತ ಕೇಳುಗರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ವರದಿಯು ಮನದ ಮಾತು ಕಾರ್ಯಕ್ರಮದ ಜನಪ್ರಿಯತೆಯ ಹಿಂದಿನ ಕಾರಣಗಳನ್ನು ಪರಿಶೀಲಿಸಿದ್ದು, ಜನರನ್ನು ಸೆಳೆಯುವ ವಿಷಯಗಳ ಬಗ್ಗೆ ಪಟ್ಟಿ ಮಾಡಲಾಗಿದೆ.

Mann Ki Baat@100: ಮನ್ ಕಿ ಬಾತ್ 100 ಕೋಟಿ ಕೇಳುಗರನ್ನು ತಲುಪಿದೆ: IIM ಸಮೀಕ್ಷೆ
ಮನ್ ಕಿ ಬಾತ್
Follow us on

ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಮನ್ ಕಿ ಬಾತ್  (Mann Ki Baat)ಬಗ್ಗೆ ಒಟ್ಟು ಜನಸಂಖ್ಯೆಯ ಸುಮಾರು ತೊಂಬತ್ತಾರು ಪ್ರತಿಶತದಷ್ಟು ಜನರಿಗೆ ತಿಳಿದಿದೆ. ಈ ಕಾರ್ಯಕ್ರಮ 100 ಕೋಟಿ ಜನರನ್ನು ತಲುಪಿದೆ. ಅಂದರೆ ಇವರು ಒಂದು ಬಾರಿಯಾದರೂ ಈ ಕಾರ್ಯಕ್ರಮವನ್ನು ಆಲಿಸಿದ್ದಾರೆ. ಈ ಅಂಕಿಅಂಶಗಳನ್ನು ಪ್ರಸಾರ ಭಾರತಿ ನಿಯೋಜಿಸಿದ, ರೋಹ್ಟಕ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್  (IIM Rohtak)ನಡೆಸಿದ ಸಮಗ್ರ ಅಧ್ಯಯನದಲ್ಲಿ ಬಹಿರಂಗಪಡಿಸಲಾಗಿದೆ. ಪ್ರಸಾರ ಭಾರತಿಯ ಸಿಇಒ  ಗೌರವ್ ದ್ವಿವೇದಿ ಮತ್ತು ಐಐಎಂ ರೋಹ್ಟಕ್‌ನ ನಿರ್ದೇಶಕರಾದ  ಧೀರಜ್ ಪಿ. ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಅಧ್ಯಯನದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಅಧ್ಯಯನದ ಕುರಿತು ಮಾತನಾಡಿದ ಶರ್ಮಾ 23 ಕೋಟಿ ಜನರು ನಿಯಮಿತವಾಗಿ ಕಾರ್ಯಕ್ರಮವನ್ನು ಆಲಿಸಿದ್ದಾರೆ. 41 ಕೋಟಿ ಜನರು ಒಮ್ಮೊಮ್ಮೆ ಮಾತ್ರ ಇದನ್ನು ಆಲಿಸುತ್ತಿದ್ದು, ಇವರು ನಿಯಮಿತ ಕೇಳುಗರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ವರದಿಯು ಮನದ ಮಾತು ಕಾರ್ಯಕ್ರಮದ ಜನಪ್ರಿಯತೆಯ ಹಿಂದಿನ ಕಾರಣಗಳನ್ನು ಪರಿಶೀಲಿಸಿದ್ದು, ಜನರನ್ನು ಸೆಳೆಯುವ ವಿಷಯಗಳ ಬಗ್ಗೆ ಪಟ್ಟಿ ಮಾಡಲಾಗಿದೆ. ಪ್ರೇಕ್ಷಕರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಸ್ಥಾಪಿಸಲು ಮಾತನಾಡುವ ಪ್ರಬಲ ಮತ್ತು ನಿರ್ಣಾಯಕ ನಾಯಕತ್ವವೇ ಇದಕ್ಕೆ ಕಾರಣ ಎಂದು ಅದರಲ್ಲಿ ಹೇಳಲಾಗಿದೆ. ಪ್ರಧಾನಿಯವರು ಅರಿವುಳ್ಳವರು, ಸಹಾನುಭೂತಿ ಮತ್ತು ಕರುಣೆ ಹೊಂದಿದ್ದಾರೆ ಎಂದು ಜನರು ಹೇಳಿದ್ದಾರೆ. ನಾಗರಿಕರೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವುದು ಮತ್ತು ಮಾರ್ಗದರ್ಶನವನ್ನು ನೀಡುವುದು ಈ ನಂಬಿಕೆಗೆ ಕಾರಣವೆಂದು ಹೇಳಲಾಗಿದೆ.

ಇದುವರೆಗಿನ 99 ಆವೃತ್ತಿಗಳಲ್ಲಿ ಮನ್ ಕಿ ಬಾತ್ ಜನಸಂಖ್ಯೆಯ ಮೇಲೆ ಬೀರಿದ ಪ್ರಭಾವವನ್ನು ಅಳೆಯಲು ಅಧ್ಯಯನವು ಪ್ರಯತ್ನಿಸಿದೆ. ಬಹುಪಾಲು ಕೇಳುಗರು ಸರ್ಕಾರ ಕೆಲಸ ಮಾಡುವ ಬಗ್ಗೆ ಅರಿವು ಹೊಂದಿದ್ದಾರೆ. ಶೇ 73 ಜನರು ಆಶಾವಾದಿಗಳಾಗಿದ್ದು ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಭಾವಿಸುತ್ತಾರೆ ಎಂದು ಅದು ಹೇಳುತ್ತದೆ. ಶೇ58 ಕೇಳುಗರು ತಮ್ಮ ಜೀವನ ಪರಿಸ್ಥಿತಿಗಳು ಸುಧಾರಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅದೇ ವೇಳೆ ಶೇ59 ಜನರು ಸರ್ಕಾರದ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ ಎಂದಿದ್ದಾರೆ. ಸಮೀಕ್ಷೆಯ ಪ್ರಕಾರ ಶೇ 63 ಜನರು ಸರ್ಕಾರದತ್ತ  ತಮ್ಮ ಒಲವು ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ ಶೇ 60 ಜನರು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರೆ.

ಅಧ್ಯಯನವು 3 ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರೇಕ್ಷಕರನ್ನು ವಿಂಗಡಿಸಿದ್ದು ಶೇ 44.7 ಜನರು ಟಿವಿಯಲ್ಲಿ ನೋಡುತ್ತಾರೆ. ಶೇ 37.6 ಜನರು ಮೊಬೈಲ್ ನಲ್ಲಿ ನೋಡುತ್ತಾರೆ. 19 ರಿಂದ 34 ವರ್ಷದೊಳಗಿನ ಪ್ರತಿಕ್ರಿಯಿಸಿದವರಲ್ಲಿ ಶೇ 62 ರಷ್ಟು ಜನರು ಅದನ್ನು ಟಿವಿಯಲ್ಲಿ ವೀಕ್ಷಿಸಲು ಆದ್ಯತೆ ನೀಡುತ್ತಾರೆ.

ಮನ್ ಕಿ ಬಾತ್‌ನ ಪ್ರಮುಖ ಶ್ರೋತೃಗಳು ಹಿಂದಿ ಭಾಷಿಗರು. ಶೇ 65 ಪ್ರೇಕ್ಷಕರು ಹಿಂದಿಗೆ ಆದ್ಯತೆ ನೀಡುತ್ತಾರೆ. ಇಂಗ್ಲಿಷ್ ಶೇ 18 ರೊಂದಿಗೆ ಎರಡನೇ ಸ್ಥಾನದಲ್ಲಿದೆ.

ಪ್ರತಿಕ್ರಿಯಿಸಿದವರ ವಿವರದ ಕುರಿತು ಮಾತನಾಡಿದ ನಿರ್ದೇಶಕ ಧೀರಜ್ ಶರ್ಮಾ, ಈ ಅಧ್ಯಯನಕ್ಕಾಗಿ ಒಟ್ಟು 10003 ಮಾದರಿಗಳನ್ನು ಸಂಗ್ರಹಿಸಲಾಗಿದೆ, ಇದರಲ್ಲಿ ಶೇ60 ಪುರುಷರು ಮತ್ತು ಶೇ40 ಮಹಿಳೆಯರು. ಈ ಜನಸಂಖ್ಯೆಯಲ್ಲಿ ಶೇ 68 ಉದ್ಯೋಗವಿರುವವವರು ಶೇ64 ರಷ್ಟು ಅನೌಪಚಾರಿಕ ಮತ್ತು ಸ್ವಯಂ ಉದ್ಯೋಗಿ ವಲಯದಿಂದ ಬಂದಿದ್ದರೆ, ಶೇ 23 ವಿದ್ಯಾರ್ಥಿಗಳಾಗಿದ್ದಾರೆ.

ಇದನ್ನೂ ಓದಿ: ಶೆಟ್ಟರ್‌ ಕಾಂಗ್ರೆಸ್‌ಗೆ ಹೋಗಿದ್ದರಿಂದ ನಷ್ಟವಾಗಲ್ಲ, ಬಿಜೆಪಿಯೇ ಗೆಲ್ಲಲಿದೆ; ಹುಬ್ಬಳ್ಳಿಯಲ್ಲಿ ಅಮಿತ್ ಶಾ

22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳನ್ನು ಹೊರತುಪಡಿಸಿ, ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ದಾರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಮನ್ ಕಿ ಬಾತ್ ಪ್ರಸಾರವಾಗುತ್ತದೆ. ಆಕಾಶವಾಣಿಯ 500ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳಿಂದ ಮನ್ ಕಿ ಬಾತ್ ಪ್ರಸಾರವಾಗುತ್ತಿದೆ ಎಂದು ದ್ವಿವೇದಿ ಹೇಳಿದ್ದಾರೆ.

ಅಧ್ಯಯನದ ಕಾರ್ಯಾರಂಭದ ಹಿಂದಿನ ಆಲೋಚನಾ ಪ್ರಕ್ರಿಯೆ ಬಗ್ಗೆ ಮಾತನಾಡಿದ ಅವರು ಕಾಲಕಾಲಕ್ಕೆ ನಾವು ಒಟ್ಟಾರೆ ಕಾರ್ಯಕ್ರಮದ ವಿಷಯದಲ್ಲಿ ಹೆಚ್ಚು ಪ್ರತಿಕ್ರಿಯೆಯನ್ನು ಪಡೆಯಬೇಕು. ಮನ್ ಕಿ ಬಾತ್‌ನಲ್ಲಿ ಡಿಜಿಟಲ್ ಭಾವನೆಯು ಸುಲಭವಾಗಿ ಲಭ್ಯವಿದ್ದರೂ, ಕೆಲವು ಮಿತಿಗಳಿಂದಾಗಿ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಅದು ಇರುವುದಿಲ್ಲ ಎಂದು ಅವರು ತಿಳಿಸಿದರು. ಈ ದೃಷ್ಟಿಕೋನದಿಂದ, ಸಮೀಕ್ಷೆಯ ಕಾರ್ಯವನ್ನು ಐಐಎಂ ರೋಹ್ಟಕ್‌ಗೆ 2022, ಏಪ್ರಿಲ್ 18ರಂದು ನೀಡಲಾಯಿತು ಎಂದಿದ್ದಾರೆ ಅವರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ