ಜೈಪುರ (ಮಾರ್ಚ್ 3): ಮಹಾ ಕುಂಭಮೇಳದ ಸಮಯದಲ್ಲಿ ಬಹಳ ಫೇಮಸ್ ಆದ, ಐಐಟಿ ಬಾಬಾ ಎಂದೇ ಜನಪ್ರಿಯರಾಗಿರುವ ಅಭಯ್ ಸಿಂಗ್ ಅವರನ್ನು ಗಾಂಜಾ ಇಟ್ಟುಕೊಂಡಿದ್ದಕ್ಕಾಗಿ ಬಂಧಿಸಲಾಗಿದೆ. ಜೈಪುರದಲ್ಲಿ ಬಂಧಿಸಲ್ಪಟ್ಟ ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಭಯ್ ಸಿಂಗ್ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಬಾಂಬೆ) ಪದವೀಧರರಾಗಿದ್ದು, ಮಹಾ ಕುಂಭದಲ್ಲಿ “ಐಐಟಿ ಬಾಬಾ” ಎಂದೇ ಜನಪ್ರಿಯರಾದರು. ಅವರು ಆಧ್ಯಾತ್ಮಿಕತೆಗೆ ಕಾರಣವಾದ ಸತ್ಯದ ಅನ್ವೇಷಣೆಯಲ್ಲಿ ಅಲ್ಲಿಗೆ ಹೋಗಿದ್ದರು ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: 3 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಹಾಕುಂಭ; ಈ ಉತ್ಸವದ ಕುರಿತ 7 ಅಚ್ಚರಿಯ ಸಂಗತಿಗಳಿವು
ರಿದ್ಧಿ ಸಿದ್ಧಿ ಪ್ರದೇಶದ ಹೋಟೆಲ್‌ನಲ್ಲಿ ಉಳಿದುಕೊಂಡು ಗದ್ದಲ ಸೃಷ್ಟಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ನಂತರ ಐಐಟಿ ಬಾಬಾ ಅವರನ್ನು ಬಂಧಿಸಲಾಯಿತು. ಪೊಲೀಸರು ಆ ಸ್ಥಳಕ್ಕೆ ತಲುಪಿ ಅವರಿಂದ ಗಾಂಜಾವನ್ನು ವಶಪಡಿಸಿಕೊಂಡರು. ಆದರೂ ಗಾಂಜಾ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಅವರ ಬಳಿ ದೊರೆತ ಗಾಂಜಾದ ಪ್ರಮಾಣವು ಅನುಮತಿಸಲಾದ ಮಿತಿಯೊಳಗೆ ಇದ್ದುದರಿಂದ ಪೊಲೀಸರು ಆತನನ್ನು ಸ್ವಲ್ಪ ಸಮಯದ ಬಂಧನದ ನಂತರ ಬಿಡುಗಡೆ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನದಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಐಐಟಿ ಬಾಬಾ ಅಭಯ್ ಸಿಂಗ್, ಅದು ಗಾಂಜಾ ಅಲ್ಲ “ಪ್ರಸಾದ” ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೂಡ ದೃಢಪಡಿಸಿದ್ದಾರೆ.
ಇದನ್ನೂ ಓದಿ: ತೊಂದರೆಯಾಗಿದ್ದರೆ ಕ್ಷಮಿಸಿ; ಮಹಾಕುಂಭದ ಮುಕ್ತಾಯದ ವೇಳೆ ಭಕ್ತರಿಗೆ ಪ್ರಧಾನಿ ಮೋದಿ ಸಂದೇಶ
‘ಐಐಟಿ ಬಾಬಾ’ ಅಭಯ್ ಸಿಂಗ್ ಯಾರು?:
ಐಐಟಿ ಬಾಬಾ ಅಭಯ್ ಸಿಂಗ್ ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿ ಮತ್ತು ಮಾಜಿ ಏರೋಸ್ಪೇಸ್ ಎಂಜಿನಿಯರ್. ಅವರು ಶೈಕ್ಷಣಿಕ ಕ್ಷೇತ್ರ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದು, ಮಹಾ ಕುಂಭದಲ್ಲಿ ಪಾಲ್ಗೊಂಡಿದ್ದರು. ಟಿವಿ ಚಾನೆಲ್ ಒಂದರ ಸಂದರ್ಶನದ ಬಳಿಕ ಅಭಯ್ ಸಿಂಗ್ ಐಐಟಿ ಬಾಬಾ ಎಂದೇ ಪ್ರಸಿದ್ಧರಾದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ