ಮುಂಬೈ: ಮಹಿಳೆಯರು ಸ್ವಾವಲಂಬಿಗಳಾಗಬೇಕು ಎನ್ನುವ ಮಾತು ಇಂದು ನಿನ್ನೆಯದಲ್ಲ. ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಮಹಾರಾಷ್ಟ್ರದ ಹಳ್ಳಿಯೊಂದರ ಮಹಿಳಾ ಸ್ವ-ಸಹಾಯ ಗುಂಪು ಇದೀಗ ಸೋಲಾರ್ ಫಲಕಗಳನ್ನು ಉತ್ಪಾದಿಸುವ ಘಟಕವನ್ನೇ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಮಹಿಳೆಯರಿಗೆ ಆದಾಯದ ಮೂಲವನ್ನು ಹುಟ್ಟುಹಾಕುವುದು ಮತ್ತು ಅವರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸುವುದೇ ನಮ್ಮ ಉದ್ದೇಶ ಎಂದು ಯೋಜನೆಗೆ ಸಂಬಂಧಿಸಿದವರು ಮಾಹಿತಿ ನೀಡಿದ್ದಾರೆ.
ಸದರಿ ಯೋಜನೆಯ ಕುರಿತು ವಾರ್ಧಾ ಜಿಲ್ಲಾ ಪರಿಷತ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಒಂಬಸೆ ಪ್ರತಿಕ್ರಿಯಿಸಿದ್ದು, ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘದವರು ಸೇರಿ ಇಂಥದ್ದೊಂದು ಯೋಜನೆ ರೂಪಿಸಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದಿದ್ದಾರೆ. ಈ ಯೋಜನೆಯು ಗ್ರಾಮೀಣ ಮಹಿಳೆಯರ ಬದುಕನ್ನು ಸದೃಢವಾಗಿಸಲಿದ್ದು, ಅವರ ಜೀವನದ ಗುಣಮಟ್ಟವನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಯೋಜನೆಯನ್ನು ತೇಜಸ್ವಿ ಸೋಲಾರ್ ಎನರ್ಜಿ ಬ್ಯಾಕ್ವರ್ಡ್ ಇಂಡಸ್ಟ್ರಿಯಲ್ ಸೊಸೈಟಿ ವತಿಯಿಂದ ಸ್ಥಾಪಿಸಲಾಗಿದ್ದು, ಒಟ್ಟು 214 ಸದಸ್ಯರುಗಳನ್ನೊಳಗೊಳ್ಳಲಾಗಿದೆ. ಆ ಪೈಕಿ 200 ಮಂದಿ ಮಹಿಳೆಯರು ಹಿಂದುಳಿದ ಸಮುದಾಯದಿಂದ ಬಂದವರಾಗಿದ್ದಾರೆ ಎನ್ನಲಾಗಿದೆ. ಈ ಘಟಕವನ್ನು ಜನವರಿ 26ರ ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕೇದಾರ್ ಉದ್ಘಾಟಿಸಲಿದ್ದಾರೆ.
ಅನಕ್ಷರಸ್ಥರಾಗಿದ್ದರೂ ಇಂತಹದ್ದೊಂದು ದೂರದೃಷ್ಟಿತ್ವವುಳ್ಳ ಯೋಜನೆಯನ್ನು ರೂಪಿಸಿರುವ ಮಹಿಳೆಯರು, ತಾಂತ್ರಿಕವಾಗಿಯೂ ಗಟ್ಟಿಗೊಳ್ಳುವತ್ತ ಅಧ್ಯಯನ ನಿರತರಾಗಿದ್ದಾರೆ. ಸೌರ ಫಲಕಗಳ ಉತ್ಪಾದನೆ ಮತ್ತು ಅವುಗಳ ಕುರಿತಾದ ಸೂಕ್ಷ್ಮ ವಿಚಾರಗಳನ್ನು ಬಹಳ ಆಸ್ಥೆಯಿಂದ ತಿಳಿದುಕೊಳ್ಳುತ್ತಿದ್ದಾರೆ. ಜೊತೆಗೆ, ಬಾಂಬೆಯ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಈ ಯೋಜನೆಗೆ ಬೆಂಬಲ ನೀಡುತ್ತಿರುವುದು ಮತ್ತಷ್ಟು ಸಂತಸ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿರುವ ಹಿಂದುಳಿದ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದ್ದೇವೆ. ಇದಕ್ಕೆ ಬೇಕಾದ ಅವಶ್ಯಕ ತರಬೇತಿಗಳನ್ನು ಜಿಲ್ಲಾ ಪರಿಷತ್ತಿನ ಯುಎಂಇಡಿ ಅಭಿಯಾನದಡಿ ಪಡೆದಿದ್ದೇವೆ. ಸದ್ಯ ಸೌರ ಫಲಕ ಮತ್ತು ಸೌರ ದೀಪಗಳನ್ನು ಉತ್ಪಾದನೆ ಮಾಡುತ್ತಿದ್ದೇವೆ ಎಂದು ಮಹಿಳಾ ಕೈಗಾರಿಕಾ ಸಮಾಜದ ನಿರ್ದೇಶಕಿ ಸಂಗೀತಾ ವಾಂಖೆಡೆ ಹೇಳಿದ್ದಾರೆ. ಸರ್ಕಾರದ ಸಹಕಾರದೊಂದಿಗೆ ಸಾಗುತ್ತಿರುವ ಯೋಜನೆಗೆ ಆರಂಭಿಕ ಹಂತದಲ್ಲೇ ಯಶಸ್ಸು ಸಿಕ್ಕಿದ್ದು ಸುಮಾರು 40 ಲಕ್ಷ ಮೌಲ್ಯದ ಸೌರದೀಪಗಳನ್ನು ಜಿಲ್ಲಾ ಪರಿಷತ್ತು ಖರೀದಿಸಲಿದೆ ಎಂದು ತಿಳಿಸಿದ್ದಾರೆ.
Published On - 6:32 pm, Thu, 21 January 21