ಉತ್ತರಾಖಂಡ್​​ನಲ್ಲಿ ಭಾರಿ ಮಳೆ ಸಾಧ್ಯತೆ; 13 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​, ರಕ್ಷಣಾ ತಂಡಗಳು ಸಜ್ಜು

ಇನ್ನು ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಈಗಾಗಲೇ ಪೊಲೀಸರು, ರಾಜ್ಯ ವಿಪತ್ರು ಪ್ರತಿಕ್ರಿಯಾ ಪಡೆಗಳು, ಎಲ್ಲ ಜಿಲ್ಲಾಧಿಕಾರಿಗಳಿಗೂ ಅಲರ್ಟ್​ ಆಗಿರುವಂತೆ ಸೂಚಿಸಿದ್ದಾರೆ. 

ಉತ್ತರಾಖಂಡ್​​ನಲ್ಲಿ ಭಾರಿ ಮಳೆ ಸಾಧ್ಯತೆ; 13 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​, ರಕ್ಷಣಾ ತಂಡಗಳು ಸಜ್ಜು
ಮಳೆ
Updated By: Lakshmi Hegde

Updated on: Oct 17, 2021 | 5:33 PM

ಉತ್ತರಾಖಂಡ್(Uttarakhand)​​ನಲ್ಲಿ ಇಂದಿನಿಂದ ಮೂರು ದಿನ ಅಂದರೆ ಅಕ್ಟೋಬರ್​ 19ರವರೆಗೆ ವಿಪರೀತ ಮಳೆಯಾಗುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (IMD) ಒಟ್ಟು 13 ಜಿಲ್ಲೆಗಳಲ್ಲಿ ಅ.19ರವರೆಗೂ ರೆಡ್​ ಅಲರ್ಟ್​ ಘೋಷಣೆ ಮಾಡಿದೆ.  ಹೀಗಾಗಿ ಬದರಿನಾಥ ಯಾತ್ರೆಯೂ ಸದ್ಯದ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಯಾತ್ರಾರ್ಥಿಗಳನ್ನು ಪಾಂಡುಕೇಶ್ವರದಲ್ಲಿಯೇ ನಿಲ್ಲಿಸಲಾಗಿದೆ.  ಸದ್ಯ ರೆಡ್​ ಅಲರ್ಟ್​ ಘೋಷಣೆಯಾಗಿದ್ದರಿಂದ ಭಕ್ತರಿಗೆ ಪ್ರಯಾಣ ಮಾಡದಂತೆ ಸೂಚಿಸಿದ್ದೇವೆ. ಬದರಿನಾಥಕ್ಕೆ ಬರುತ್ತಿದ್ದ ಹಲವು ಯಾತ್ರಾರ್ಥಿಗಳನ್ನು ಅವರಿದ್ದಲ್ಲೇ ತಡೆಯಲಾಗಿದೆ. ಹಾಗೇ, ಅವರ ಸುರಕ್ಷತೆಯ ಬಗ್ಗೆಯೂ ಗಮನಹರಿಸಲಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ತಿಳಿಸಿದ್ದಾರೆ. ಹಾಗೇ, ಸೋಮವಾರ ಚಮೋಲಿಯಲ್ಲಿ ಎಲ್ಲ ಶಾಲೆ, ಕಾಲೇಜುಗಳಿಗೂ ರಜೆ ಘೋಷಣೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.  

ಇಡೀ ಉತ್ತರಾಖಂಡ್​​ನಲ್ಲಿ ಒಟ್ಟು 13 ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆಯಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಇನ್ನೆರಡು ದಿನ ಎಲ್ಲಿಯೂ ಪ್ರಯಾಣ ಮಾಡಬೇಡಿ. ಆದಷ್ಟು ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಹವಾಮಾನ ಇಲಾಖೆ ನಿರ್ದೇಶಕ ವಿಕ್ರಮ್​ ಸಿಂಗ್​ ಸಲಹೆ ನೀಡಿದ್ದಾರೆ. ಹಾಗೇ ಇಲ್ಲಿ, ಇನ್ನು ಮೂರು ದಿನ ವಿಪರೀತ ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಸುಮಾರು 80 ಕಿಮೀ ವೇಗದಲ್ಲಿ ಬಲವಾದ ಗಾಳಿಯೂ ಬೀಸಬಹುದು ಎಂದು ಐಎಂಡಿ ಮಾಹಿತಿ ನೀಡಿದೆ.

ಇನ್ನು ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಈಗಾಗಲೇ ಪೊಲೀಸರು, ರಾಜ್ಯ ವಿಪತ್ರು ಪ್ರತಿಕ್ರಿಯಾ ಪಡೆಗಳು, ಎಲ್ಲ ಜಿಲ್ಲಾಧಿಕಾರಿಗಳಿಗೂ ಅಲರ್ಟ್​ ಆಗಿರುವಂತೆ ಸೂಚಿಸಿದ್ದಾರೆ.  ಜನರ ಸುರಕ್ಷತೆ ಮಾಡುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದೂ ಹೇಳಿದ್ದಾರೆ.  ಇನ್ನು ಉತ್ತರಾಖಂಡ್​​ನಲ್ಲಿ ಪಾಕೃತಿಕ ವಿಪತ್ತು ಸದಾ ಉಂಟಾಗುತ್ತಿರುತ್ತದೆ. ಅತಿಯಾದ ಮಳೆ ಬಿದ್ದ ಕೂಡಲೇ ಪ್ರವಾಹ, ಭೂಕುಸಿತ, ಸಿಡಿಲುಬಡಿತ, ಮೇಘಸ್ಫೋಟದಂಥ ದೊಡ್ಡಮಟ್ಟದ ಅಪಾಯಗಳು ಎದುರಾಗುತ್ತವೆ. ಹೀಗಾಗಿ ಅಲ್ಲಿನ ರಕ್ಷಣಾ ಪಡೆಗಳು ಸದಾ ಅಲರ್ಟ್​ ಆಗಿಯೇ ಇರುತ್ತವೆ. ಈಗ ಕೂಡ ಹವಾಮಾನ ಇಲಾಖೆ ನೀಡಿದ ವರದಿ ಅನ್ವಯಿಸಿ, ರಾಜ್ಯಾದ್ಯಂತ ಸುಮಾರು 29 ಎಸ್​ಡಿಆರ್​ಎಫ್​ ತಂಡಗಳು ಸಜ್ಜಾಗಿವೆ.

ಇದನ್ನೂ ಓದಿ: ಕರ್ನಾಟಕದವರನ್ನು ಕಡೆಗಣಿಸಿದ ಬಾಲಿವುಡ್​ ಮಂದಿಗೆ ಸರಿಯಾಗಿ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ

ಭಾರತ-ಪಾಕ್ ಪಂದ್ಯದ ದಿನ ಸೋಶಿಯಲ್ ಮೀಡಿಯಾದಿಂದ ದೂರವಾಗಲಿದ್ದಾರೆ ಸಾನಿಯಾ ಮಿರ್ಜಾ! ಕಾರಣವೇನು ಗೊತ್ತಾ?