Rajasthan: ವೈದ್ಯರ ಎಡವಟ್ಟಿನಿಂದ 18 ಜನರ ದೃಷ್ಟಿಯೇ ಹೋಯ್ತು!
ವೈದ್ಯರ ಬೇಜಾವಬ್ದಾರಿಯಿಂದ 18 ಜನ ದೃಷ್ಟಿ ಕಳೆದುಕೊಂಡಿರುವ ಘಟನೆ ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಸವಾಯಿ ಮಾನ್ ಸಿಂಗ್ನಲ್ಲಿ ನಡೆದಿದೆ.
ಜೈಪುರ್: ವೈದ್ಯೋ ನಾರಾಯಣೋ ಹರಿ ಎಂಬ ಮಾತೇ ಇದೆ, ವೈದ್ಯರ ರೂಪದಲ್ಲಿ ದೇವರು ಬಂದು ನಮ್ಮ ರೋಗ ನಿವಾರಣೆ ಮಾಡುತ್ತಾರೆ ಎಂಬುದು ನಮ್ಮ ನಂಬಿಕೆ, ಆದರೆ ಕೆಲವೊಂದು ಬಾರಿ ಅವರು ಕೂಡ ಎಡವಟ್ಟು ಮಾಡಿಕೊಳ್ಳುವುದು ಇದೆ. ವೈದ್ಯರ ಬೇಜಾವಬ್ದಾರಿಯಿಂದ 18 ಜನ ದೃಷ್ಟಿ ಕಳೆದುಕೊಂಡಿರುವ ಘಟನೆ ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಸವಾಯಿ ಮಾನ್ ಸಿಂಗ್ನಲ್ಲಿ ನಡೆದಿದೆ. ಈ ಆಸ್ಪತ್ರೆಯಲ್ಲಿ ನಡೆಸಿದ ಕಣ್ಣಿನ ಶಸ್ತ್ರಚಿಕಿತ್ಸೆಯ ನಂತರ 18 ಜನರು ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾದ 18 ಜನರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇವರಲ್ಲಿ ಹೆಚ್ಚಿನವರಿಗೆ ರಾಜಸ್ಥಾನ ಸರ್ಕಾರದ ಚಿರಂಜೀವಿ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಜೂನ್ 23ರಂದು ಆಪರೇಷನ್ ಮಾಡಲಾಗಿದೆ, ಜುಲೈ 5ರ ವರೆಗೆ ಎಲ್ಲವೂ ಸರಿಯಾಗಿ ಕಾಣಿಸುತ್ತಿತ್ತು, ಆದರೆ ಮರುದಿನ ಅಂದರೆ ಜುಲೈ 6, 7ರಿಂದ ಯಾವುದೇ ವಸ್ತುಗಳನ್ನು ಸರಿಯಾಗಿ ಗುರುತಿಸಲಾಗುತ್ತಿರಲಿಲ್ಲ, ಈ ಬಗ್ಗೆ ಅಲ್ಲಿನ ವೈದ್ಯರಿಗೆ ಹೇಳಿದಾಗ ಮತ್ತೆ ಆಪರೇಷನ್ ಮಾಡಿದ್ದಾರೆ, ಅದರೂ ದೃಷ್ಟಿ ಬರಲಿಲ್ಲ ಎಂದು ರೋಗಿಯೊಬ್ಬರು ಹೇಳಿದರು.
ಇವರು ದೃಷ್ಟಿ ಕಳೆದುಕೊಳ್ಳಲು ಸೋಂಕು ಕಾರಣ ಎಂದು ವೈದ್ಯರು ತಿಳಿಸಿದ್ದು, ಸೋಂಕನ್ನು ಗುಣಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆಪರೇಷನ್ ಮಾಡಿದ ನಂತರ ಕಣ್ಣು ನೋವು ಬಂದಿದೆ, ಈ ಬಗ್ಗೆ ರೋಗಿಗಳು ವೈದ್ಯರಿಗೆ ದೂರು ನೀಡಿದಾಗ, ವೈದ್ಯರು ಮತ್ತೆ ಆಸ್ಪತ್ರೆಗೆ ದಾಖಲಾಗುವಂತೆ ಕೇಳಿಕೊಂಡಿದ್ದಾರೆ. ಈ ರೋಗಿಗಳು ಮತ್ತೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಒಂದು ಕೈಗೆ ಇಲ್ಲ ಬಲ, ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ
ಆದರೆ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಅಧಿಕಾರಿಗಳು ನಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ಮತ್ತು ರೋಗಿಗಳಿಂದ ದೂರುಗಳನ್ನು ಸ್ವೀಕರಿಸಿದ ನಂತರ ತನಿಖೆ ನಡೆಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ