ರಾಮಮಂದಿರ ಉದ್ಘಾಟನೆ: ಜನವರಿ 22 ರಂದು ಮಾಂಸ, ಮೀನು ಮಾರಾಟ ನಿಷೇಧಿಸಿದ ಯುಪಿ ಸರ್ಕಾರ
ಜನವರಿ 22 ರಂದು ರಾಜ್ಯದಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಗುರುವಾರ ಘೋಷಿಸಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಈಗಾಗಲೇ ರಾಮಮಂದಿರ ಉದ್ಘಾಟನಾ ದಿನದಂದು ಮದ್ಯ ಮಾರಾಟವನ್ನು ನಿಷೇಧಿಸಿದೆ.
ಲಕ್ನೋ ಜನವರಿ 18: ರಾಮಮಂದಿರದ (Ram mandir) ಉದ್ಘಾಟನೆ ನಡೆಯುವ ಜನವರಿ 22 ರಂದು ರಾಜ್ಯದಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವುದಾಗಿ ಉತ್ತರ ಪ್ರದೇಶ (Uttar Pradesh) ಸರ್ಕಾರ ಗುರುವಾರ ಘೋಷಿಸಿದೆ. ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಸರ್ಕಾರ ಈಗಾಗಲೇ ಆ ದಿನ ಮದ್ಯ ಮಾರಾಟವನ್ನು ನಿಷೇಧಿಸಿದೆ. ಜನವರಿ 22 ರಂದು ರಾಮ ಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ರಾಮ್ ಲಲ್ಲಾ ಪ್ರತಿಷ್ಠಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 7,000 ಕ್ಕೂ ಹೆಚ್ಚು ಜನರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಮಧ್ಯಾಹ್ನ 12.20ಕ್ಕೆ ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ ದೀಕ್ಷಿತ್ ನೆರವೇರಿಸುವರು. ಸಮಾರಂಭವು ಜನವರಿ 22 ರಂದು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿರುವ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ. ಪ್ರಾಣ ಪ್ರತಿಷ್ಠೆಯಏಳು ದಿನಗಳ ಧಾರ್ಮಿಕ ವಿಧಿವಿಧಾನಗಳು ಮಂಗಳವಾರದಿಂದ ಆರಂಭಗೊಂಡಿವೆ. ಆಚರಣೆಗಳು ವಿವಿಧ ರೀತಿಯ ಪೂಜೆಗಳನ್ನು ಒಳಗೊಂಡಿವೆ. ಜನವರಿ 21 ರಂದು ರಾಮ್ ಲಲ್ಲಾ ದೇವರಿಗೆ 125 ಕಲಶಗಳೊಂದಿಗೆ ದೈವಿಕ ಸ್ನಾನವಿರಲಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ ಮೋದಿ
ಜನವರಿ 22 ರ ಕಾರ್ಯಕ್ರಮದ ನಂತರ, ರಾಮ ಮಂದಿರವನ್ನು ಭಕ್ತರಿಗೆ ಪೂಜೆಗಾಗಿ ತೆರೆಯಲಾಗುತ್ತದೆ. ಭಾರತದಾದ್ಯಂತ ಪ್ರತಿ ದಿನ ಸಾವಿರಾರು ಯಾತ್ರಿಕರು ಮತ್ತು ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದ ಯೋಗಿ ಸರ್ಕಾರ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯಾ ಧಾಮಕ್ಕಾಗಿ ಮಹತ್ವದ ಉಪಕ್ರಮವನ್ನು ಅನಾವರಣಗೊಳಿಸಿದ್ದಾರೆ, ಭಗವಾನ್ ರಾಮನ ಭಕ್ತರಿಗೆ ಮತ್ತು ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಸೇವೆಗಳನ್ನು ಪರಿಚಯಿಸಿದ್ದಾರೆ. ಯೋಗಿ ಸರ್ಕಾರದ ನೇತೃತ್ವದಲ್ಲಿ, ರಾಜ್ಯದ ಆರು ಜಿಲ್ಲೆಗಳಿಂದ ಹೆಲಿಕಾಪ್ಟರ್ ಸೇವೆಗೆ ಅನುಕೂಲವಾಗುವಂತೆ ಸಂಪೂರ್ಣ ಸಿದ್ಧತೆಗಳು ನಡೆಯುತ್ತಿವೆ.
ರಾಮನ ಪವಿತ್ರ ಮಗುವಿನ ರೂಪವಾದ ರಾಮ್ ಲಲ್ಲಾದ ಭಕ್ತರು ಮತ್ತು ಪ್ರವಾಸಿಗರು ಈಗ ಗೋರಖ್‌ಪುರ, ವಾರಣಾಸಿ, ಲಕ್ನೋ, ಪ್ರಯಾಗರಾಜ್, ಮಥುರಾ ಮತ್ತು ಆಗ್ರಾದಿಂದ ಹೆಲಿಕಾಪ್ಟರ್ ಸೇವೆಗಳನ್ನು ಪಡೆಯಬಹುದು. ಈ ಸೇವೆಯನ್ನು ಶೀಘ್ರದಲ್ಲೇ ರಾಜ್ಯದ ಹೆಚ್ಚುವರಿ ಜಿಲ್ಲೆಗಳಿಗೆ ವಿಸ್ತರಿಸಲು ಸರ್ಕಾರ ಸಕ್ರಿಯವಾಗಿ ಪರಿಗಣಿಸುತ್ತಿದೆ. ಇದಲ್ಲದೆ, ಯೋಗಿ ಸರ್ಕಾರವು ಭಕ್ತರಿಗೆ ಅಯೋಧ್ಯಾ ನಗರ ಮತ್ತು ಪೂಜ್ಯ ರಾಮ ಮಂದಿರದ ವಿಹಂಗಮ ವೈಮಾನಿಕ ವೀಕ್ಷಣೆಗಳನ್ನು ನೀಡುವ ಗುರಿಯನ್ನು ಹೊಂದಿದೆ, ಪ್ರವಾಸೋದ್ಯಮ ಇಲಾಖೆಯು ಈ ಉಪಕ್ರಮವನ್ನು ಮೇಲ್ವಿಚಾರಣೆ ಮಾಡುತ್ತದೆ. ಈ ಸೇವೆಗಳನ್ನು ಬಳಸಿಕೊಳ್ಳಲು ಭಕ್ತರು ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Thu, 18 January 24